
ಮುಂಬೈ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪರಿಣಾಮವಾಗಿ ಐ.ಟಿ. ಸೇವಾ ವಲಯದಲ್ಲಿ ಬಹಳಷ್ಟು ಬದಲಾವಣೆ ಆಗಲಿವೆ ಎಂಬ ಭೀತಿಯು ಷೇರುಪೇಟೆಯನ್ನು ಮಂಗಳವಾರ ಆವರಿಸಿಕೊಂಡಿತು. ಐ.ಟಿ ಸೇವಾ ವಲಯದ ಕಂಪನಿಗಳ ಷೇರು ಮಾರಾಟವು ಜೋರಾಗಿತ್ತು.
ಇದರಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಶೇ 1ಕ್ಕಿಂತ ಹೆಚ್ಚು ಕುಸಿದವು. ಜಾಗತಿಕ ವ್ಯಾಪಾರದಲ್ಲಿನ ಅನಿಶ್ಚಿತತೆಗಳು ಕೂಡ ಕುಸಿತಕ್ಕೆ ಕಾರಣವಾದವು.
ಮಂಗಳವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1,068 ಅಂಶ ಹಾಗೂ ನಿಫ್ಟಿ 288 ಅಂಶ ಕುಸಿದಿವೆ.
‘ಜಾಗತಿಕ ವ್ಯಾಪಾರಕ್ಕೆ ಸಂಬಂಧಿಸಿದ ಕೆಲವು ಬೆಳವಣಿಗೆಗಳು ಮತ್ತು ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳು ಹೂಡಿಕೆದಾರರ ಹುಮ್ಮಸ್ಸು ಕುಗ್ಗಿಸಿವೆ. ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದ ಷೇರುಗಳ ಮಾರಾಟ ಜೋರಾಗಿರುವುದು ಹಾಗೂ ಎ.ಐ ಕಾರಣದಿಂದಾಗಿ ಭಾರಿ ಪಲ್ಲಟಗಳು ಆಗಲಿವೆ ಎಂಬ ಭೀತಿಯಿಂದಾಗಿ ದೇಶದ ಐ.ಟಿ. ವಲಯದ ಷೇರುಗಳ ಮೌಲ್ಯ ಕುಸಿಯಿತು’ ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.
ಟೆಕ್ ಮಹೀಂದ್ರ ಕಂಪನಿಯ ಷೇರುಗಳು ಶೇ 6.6ರಷ್ಟು ಕುಸಿದಿವೆ. ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೊಸಿಸ್, ಟಿಸಿಎಸ್ ಷೇರುಮೌಲ್ಯ ಕೂಡ ಕುಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.