ADVERTISEMENT

ಜಾಗತಿಕ ಪರಿಣಾಮ: ಐ.ಟಿ. ಷೇರುಗಳ ಮೌಲ್ಯ ಇಳಿಕೆ

ಜಾಗತಿಕ ವಿದ್ಯಮಾನಗಳ ಪರಿಣಾಮ: ವಿಶ್ಲೇಷಕರ ಅಭಿಮತ

ಪಿಟಿಐ
Published 11 ಜುಲೈ 2022, 2:52 IST
Last Updated 11 ಜುಲೈ 2022, 2:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹಲವು ದೇಶಗಳಲ್ಲಿನ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಮತ್ತು ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿರುವ ಕಾರಣಗಳಿಂದಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಷೇರುಗಳ ಬೆಲೆಯು ಒತ್ತಡದಲ್ಲಿಯೇ ಇರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

ಕಾರ್ಪೊರೇಟ್‌ ವಲಯದ ಜೂನ್‌ ತ್ರೈಮಾಸಿಕದ ಹಣಕಾಸು ಸಾಧನೆಯ ಘೋಷಣೆಗೆ ಶುಕ್ರವಾರ ಚಾಲನೆ ದೊರೆತಿದೆ. ಟಿಸಿಎಸ್‌ ಕಂಪನಿಯ ನಿವ್ವಳ ಲಾಭವು ಶೇಕಡ 5.2ರಷ್ಟು ಹೆಚ್ಚಾಗಿದೆ. ಐ.ಟಿ. ವಲಯದ ಕಂಪನಿಗಳ ಷೇರುಗಳ ಮೌಲ್ಯವು ಕುಸಿತ ಕಾಣುತ್ತಿದೆ. ಬಿಎಸ್‌ಇನಲ್ಲಿ ಐ.ಟಿ. ಸೂಚ್ಯಂಕ ಈ ವರ್ಷದಲ್ಲಿ ಇದುವರೆಗೆ ಶೇ 24ರಷ್ಟು (9,046 ಅಂಶ) ಕುಸಿತ ಕಂಡಿದೆ. ಜನವರಿ 17ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 38,713ಕ್ಕೆ ಏರಿಕೆ ಕಂಡಿದ್ದರೆ, ಜೂನ್‌ 17ರಂದು 52 ವಾರಗಳ ಕನಿಷ್ಠ ಮಟ್ಟವಾದ 26,827ಕ್ಕೆ ಕುಸಿದಿತ್ತು.

ಬಿಎಸ್‌ಇ ಸೆನ್ಸೆಕ್ಸ್‌ 2022ರಲ್ಲಿ ಇದುವರೆಗೆ ಶೇ 6.47 (3,772 ಅಂಶ) ಕುಸಿತ ಕಂಡಿದೆ. ಜೂನ್ 17ರಂದು 52 ವಾರಗಳ ಕನಿಷ್ಠ ಮಟ್ಟ 50,921 ಅಂಶಗಳಿಗೆ ತಲುಪಿತ್ತು.

ADVERTISEMENT

ಐ.ಟಿ. ಕಂಪನಿಗಳು ನೌಕರರಿಗೆ ಗರಿಷ್ಠ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡುತ್ತಿರುವುದರಿಂದ ಕಾರ್ಯಾಚರಣಾ ವರಮಾನ ಕಡಿಮೆ ಆಗುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

‘ಅಮೆರಿಕ ಮತ್ತು ಯುರೋಪ್‌ನಲ್ಲಿ ಆರ್ಥಿಕ ಸ್ಥಿತಿಯು ಕೆಟ್ಟದಾಗಿದೆ. ಇದು ಐ.ಟಿ. ವಲಯದ ಮೇಲೆ ಪರಿಣಾಮ ಬೀರಬಹುದು. ಐ.ಟಿ. ಷೇರುಗಳು ಒತ್ತಡ ಎದುರಿಸಬೇಕಾಗಬಹುದು’ ಎಂದು ಬ್ರೋಕರೇಜ್ ಸಂಸ್ಥೆ ಪ್ರಭುದಾಸ್‌ ಲೀಲಾಧರ್‌ನ ಸಹಾಯಕ ಸಂಶೋಧಕಿ ಅದಿತಿ ಪಾಟೀಲ್‌ ಹೇಳಿದ್ದಾರೆ.

‘ಅಮೆರಿಕವು ಆರ್ಥಿಕ ಹಿಂಜರಿತ ಅನುಭವಿಸುವ ಸಾಧ್ಯತೆ ಮತ್ತು ಇತರೆ ಪ್ರಮುಖ ಮಾರುಕಟ್ಟೆಗಳ ಮಂದಗತಿಯು ಕಳವಳ ಮೂಡಿಸಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ಹೇಳಿದ್ದಾರೆ.

‘ವರಮಾನ ಸ್ಥಿತಿ ಉತ್ತಮವಾಗಿದೆ ಎನ್ನುವುದನ್ನು ಟಿಸಿಎಸ್‌ನ ಮೊದಲ ತ್ರೈಮಾಸಿಕದ ಫಲಿತಾಂಶವು ಸೂಚಿಸುತ್ತಿದೆಯಾದರೂ ಸಿಬ್ಬಂದಿಯ ವೇತನ ಹೆಚ್ಚಳವು ವರಮಾನ ಹೆಚ್ಚಳ ಪ್ರಮಾಣವನ್ನು ತಗ್ಗಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

2022ರಲ್ಲಿ ಈವರೆಗೆ ಪ್ರಮುಖ ಐ.ಟಿ. ಕಂಪನಿಗಳ ಷೇರುಮೌಲ್ಯ ಕುಸಿತ (%)
ಟೆಕ್‌ ಮಹೀಂದ್ರ;
42.28
ವಿಪ್ರೊ;41.38
ಎಚ್‌ಸಿಎಲ್‌ ಟೆಕ್ನಾಲಜೀಸ್‌; 25.38
ಇನ್ಫೊಸಿಸ್‌; 19.87
ಟಿಸಿಎಸ್‌; 12.63

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.