ADVERTISEMENT

ರೆಪೊ ದರ ಕಡಿತದ ಬಳಿಕ ಷೇರುಪೇಟೆಯಲ್ಲಿ ಮಾರಾಟ ಒತ್ತಡ: ಗಳಿಕೆ–ಇಳಿಕೆ ಆಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 7:19 IST
Last Updated 27 ಮಾರ್ಚ್ 2020, 7:19 IST
ಷೇರುಪೇಟೆಗಳಲ್ಲಿ ವಹಿವಾಟು
ಷೇರುಪೇಟೆಗಳಲ್ಲಿ ವಹಿವಾಟು    

ಬೆಂಗಳೂರು: ದೇಶದಾದ್ಯಂತ ಲಾಕ್‌ಡೌನ್‌ನಿಂದ ಬಡವರು ಮತ್ತು ಕಾರ್ಮಿಕ ವರ್ಗಕ್ಕೆ ಆಗುತ್ತಿರುವ ಆರ್ಥಿಕ ಸಮಸ್ಯೆಗೆ ಸಹಾಯಧನದ ಮೂಲಕ ಸರ್ಕಾರ ನೀಡಿದ ಸಾಂತ್ವನಕ್ಕೆ ಷೇರುಪೇಟೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಖರೀದಿ ಉತ್ಸಾಹ ತೋರಿದರಾದರೂ, ಆರ್‌ಬಿಐ ರೆಪೊ ದರ ಕಡಿತ ನಿರ್ಧಾರ ಹೊರ ಬೀಳುತ್ತಿದ್ದಂತೆ ಮಾರಾಟ ಒತ್ತಡ ಉಂಟಾಯಿತು. ಸೆನ್ಸೆಕ್ಸ್‌ 29 ಸಾವಿರ ಅಂಶಗಳಿಂದ 31,000 ಅಂಶಗಳಲ್ಲಿ ಹೋಯ್ದಾಟುತ್ತಿದೆ.

ವಹಿವಾಟು ಆರಂಭದಲ್ಲಿ ಸೆನ್ಸೆಕ್ಸ್‌ 1,158.34 ಅಂಶಗಳ ಏರಿಕೆಯೊಂದಿಗೆ 31,105.11 ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 385.4 ಅಂಶ ಚೇತರಿಕೆ ಕಂಡು 9,026.85 ಅಂಶ ತಲುಪಿತು. ಆದರೆ, ಆರ್‌ಬಿಐ ರೆಪೊ ದರ ಕಡಿತದ ನಿರ್ಧಾರ ಹೊರ ಬೀಳುತ್ತಿದ್ದಂತೆ ಸೆನ್ಸೆಕ್ಸ್‌ ದಿನದ ಗರಿಷ್ಠ ಮಟ್ಟದಿಂದ 1,400 ಅಂಶ ದಿಢೀರ್‌ ಕುಸಿಯಿತು. ಇದರಿಂದಾಗಿ 30,000 ಅಂಶಗಳಿಗಿಂತ ಕಡಿಮೆ ಮಟ್ಟ ತಲುಪಿತು.

ಸೆನ್ಸೆಕ್ಸ್‌ 29,522 ಹಾಗೂ ನಿಫ್ಟಿ 8,500 ಅಂಶ ಮುಟ್ಟಿತು. ಭಾರ್ತಿ ಏರ್‌ಟೆಲ್, ಎಚ್‌ಸಿಎಲ್‌ ಟೆಕ್‌, ಹೀರೋ ಮೊಟೊಕಾರ್ಪ್‌ ಷೇರುಗಳು ಶೇ 5ರಷ್ಟು ಇಳಿಕೆಯಾದವು. ಆಟೊ ಮೊಬೈಲ್ ವಲಯದ ಷೇರುಗಳು ಶೇ 6ರಷ್ಟು ಕುಸಿದವು.

ADVERTISEMENT

ವಾರದ ವಹಿವಾಟಿನಲ್ಲಿ ಏರುಮುಖವಾಗಿದ್ದ ಬ್ಯಾಂಕಿಂಗ್‌ ವಲಯದ ಷೇರುಗಳೂ ಸಹ ಮಧ್ಯಾಹ್ನದ ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ. ಎಚ್‌ಡಿಎಫ್‌ಸಿ, ಇಂಡಸ್‌ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಬಜಾಜ್‌ ಫೈನಾನ್ಸ್ ಷೇರುಗಳ ಬೆಲೆ ಇಳಿಕೆಯಾಗಿದೆ. ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಹಾಗೂ ಎಸ್‌ಬಿಐ ಷೇರುಗಳ ಖರೀದಿಯನ್ನು ಹೂಡಿಕೆದಾರರು ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.