ನವದೆಹಲಿ: ಗುರುವಾರ ಹೂಡಿಕೆದಾರರ ಪಾಲಿಗೆ ಕರಾಳ ದಿನವಾಯಿತು. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದ ಬೆನ್ನಲ್ಲೇ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿ ಮಹಾ ಕುಸಿತವಾಯಿತು. ವಹಿವಾಟು ಆರಂಭದಲ್ಲೇ ₹8 ಲಕ್ಷ ಕೋಟಿ ಸಂಪತ್ತು ಕರಗಿ ಹೋಯಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,864 ಅಂಶ (ಶೇ 5.22) ಇಳಿಕೆಯಾಗಿ 33,833.38 ಅಂಶ ತಲುಪುತ್ತಿದ್ದಂತೆ, ಹೂಡಿಕೆದಾರರ ₹8 ಲಕ್ಷ ಕೋಟಿ ಸಂಪತ್ತು ಕೊಚ್ಚಿ ಹೋಯಿತು. ಬೆಳಿಗ್ಗೆ 10:30ಕ್ಕೆ ಮುಂಬೈ ಷೇರುಪೇಟೆಯಲ್ಲಿ ಒಟ್ಟು ಮಾರುಕಟ್ಟೆ ಮೌಲ್ಯ ₹1,28,56,869.10 ಕೋಟಿ ಇತ್ತು. ಹೂಡಿಕೆದಾರರ ₹8,56,689.62 ಸಂಪತ್ತು ಒಮ್ಮೆಗೆ ಕರಗಿತು.
ಬುಧವಾರ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಕಂಪನಿಗಳ ಮಾರುಕಟ್ಟೆ ಮೌಲ್ಯ ₹1,37,13,558.72 ಕೋಟಿಗೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,515.38 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ಮಧ್ಯಾಹ್ನ 12:50ಕ್ಕೆ ಸೆನ್ಸೆಕ್ಸ್2204.68 ಅಂಶ (ಶೇ 6.18) ಕುಸಿತ ಕಂಡು 33,492.72 ಅಂಶ ಮುಟ್ಟಿತು. ಹೂಡಿಕೆದಾರರ ಮತ್ತಷ್ಟು ಸಂಪತ್ತು ನಷ್ಟವಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ662.50 ಅಂಶ (ಶೇ 6.33) ಇಳಿಕೆಯೊಂದಿಗೆ9,795.90 ಅಂಶ ತಲುಪಿದೆ. ಇದು 2 ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿದೆ.
ಮಾರಾಟ ಒತ್ತಡ ಸೃಷ್ಟಿಗೆ ಕಾರಣಗಳು
* ಕೋವಿಡ್–19 ಜಾಗತಿಕ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿ, ಅಗತ್ಯ ಕ್ರಮಕೈಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.
* ಯುರೋಪ್ನಿಂದ ಅಮೆರಿಕ ಪ್ರವೇಶಕ್ಕೆ 30 ದಿನಗಳ ವರೆಗೂ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ
* ಕಚ್ಚಾ ತೈಲ ದರ ಶೇ 5ರಷ್ಟು ಏರಿಕೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.