ADVERTISEMENT

ಕರಗಿದ ಹೂಡಿಕೆದಾರರ ಸಂಪತ್ತು

ಪಿಟಿಐ
Published 4 ಮೇ 2019, 20:15 IST
Last Updated 4 ಮೇ 2019, 20:15 IST
   

ಮುಂಬೈ: ಷೇರುಪೇಟೆಯಲ್ಲಿ ನಡೆದ ಚಂಚಲ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.96 ಲಕ್ಷ ಕೋಟಿಗಳಷ್ಟು ಕರಗಿದೆ.

ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 153.58 ಲಕ್ಷ ಕೋಟಿಗಳಿಂದ ₹ 151.62 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಮುಂಬೈನಲ್ಲಿ ಚುನಾವಣೆಯ ಕಾರಣದಿಂದಾಗಿ ಏಪ್ರಿಲ್‌ 29 ರಂದು ಷೇರುಪೇಟೆಗೆ ರಜೆ ಇತ್ತು. ಕಾರ್ಮಿಕರ ದಿನಾಚರಣೆ ಪ್ರಯುಕ್ತ ಮೇ 1 ರಂದು ವಹಿವಾಟು ನಡೆಯಲಿಲ್ಲ. ಹೀಗಾಗಿ ಮೂರು ದಿನಗಳ ವಹಿವಾಟು ಅವಧಿಯಲ್ಲಿ ಸೂಚ್ಯಂಕ ಇಳಿಮುಖ ಹಾದಿಯಲ್ಲಿಯೇ ಸಾಗಿತು.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 104 ಅಂಶ ಇಳಿಕೆಯಾಗಿ 38,963 ಅಂಶಗಳಿಗೆ ಇಳಿಕೆ ಕಂಡಿತು.

ಏಪ್ರಿಲ್‌ 26ರಂದು 39 ಸಾವಿರದ ಗರಿಷ್ಠ ಮಟ್ಟದಲ್ಲಿದ್ದ ಸೂಚ್ಯಂಕ ಮಂಗಳವಾರ ಮತ್ತು ಗುರುವಾರದ ವಹಿವಾಟಿನ ಅಂತ್ಯದಲ್ಲಿಯೂ ಅದೇ ಮಟ್ಟವನ್ನು ಕಾಯ್ದುಕೊಂಡಿತ್ತು. ಆದರೆ, ಶುಕ್ರವಾರ 38 ಸಾವಿರಕ್ಕೆ ಇಳಿಕೆ ಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 42 ಅಂಶ ಇಳಿಕೆಯಾಗಿ 11,712 ಅಂಶಗಳಿಗೆ ತಲುಪಿತು.

ದೇಶದ ಬಂಡವಾಳ ಮಾರುಕಟ್ಟೆಯಲ್ಲಿ (ಷೇರುಪೇಟೆ ಮತ್ತು ಸಾಲಪತ್ರ ಮಾರುಕಟ್ಟೆ) ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಪಿಐ) ಒಳಹರಿವು ನಿರಂತರವಾಗಿದೆ. 2019ರ ಜನವರಿಯಲ್ಲಿ ₹ 5,360 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು. ಅದಾದ ಬಳಿಕ ಫೆಬ್ರುವರಿಯಿಂದ ಹೂಡಿಕೆಗೆ ಗಮನ ನೀಡಿದ್ದಾರೆ.

ಮೇ ತಿಂಗಳ ಮೊದಲ ವಾರದ ವಹಿವಾಟಿನಲ್ಲಿ ₹ 1,111 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸತತ ಎರಡನೇ ವಾರವೂ ಡಾಲರ್‌ ಎದುರು ರೂಪಾಯಿ ಮೌಲ್ಯ ವೃದ್ಧಿಯಾಗಿದೆ.

ವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 80 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 69.22ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.