
ಕಳೆದ ಒಂದು ವರ್ಷದ ಅವಧಿಯಲ್ಲಿ ಹೂಡಿಕೆಯ ಜಗತ್ತಿನ ವಿದ್ಯಮಾನಗಳು ಒಂದು ಸರಳ ಸತ್ಯವನ್ನು ಮತ್ತೊಮ್ಮೆ ಹೇಳಿವೆ. ಲಾಭ ಗಳಿಕೆಗೆ ಮುಖ್ಯ; ಆದರೆ, ಕಷ್ಟದ ಸಂದರ್ಭಗಳನ್ನು ತಾಳಿಕೊಳ್ಳುವ ಶಕ್ತಿ ಅದಕ್ಕಿಂತ ಹೆಚ್ಚು ಮುಖ್ಯ ಎಂಬುದು ಆ ಸತ್ಯ.
ಈಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ತೀವ್ರವಾಗಿದ್ದುದು, ಬಡ್ಡಿ ದರದಲ್ಲಿ ಏರಿಳಿತಗಳು ಇದ್ದಿದ್ದು, ಹಣದುಬ್ಬರದ ಸಮಸ್ಯೆ ಮತ್ತು ಷೇರುಪೇಟೆಯಲ್ಲಿನ ಏರಿಳಿತಗಳು ಸಣ್ಣ ಹೂಡಿಕೆದಾರರ ವರ್ತನೆಯಲ್ಲಿ ಬದಲಾವಣೆ ತಂದಿವೆ. ಲಾಭದ ಹಿಂದೆ ಓಡುವುದಕ್ಕಿಂತಲೂ ಬಂಡವಾಳದ ರಕ್ಷಣೆಗೆ ಆದ್ಯತೆ ನೀಡುವುದರತ್ತ ಗಮನ ನೀಡಿದ ಅರ್ಥಪೂರ್ಣ ಬದಲಾವಣೆಗೆ 2025ರಲ್ಲಿ ನಾವು ಸಾಕ್ಷಿಯಾದೆವು. ಅಮೂಲ್ಯ ಲೋಹಗಳ ಬೆಲೆಯಲ್ಲಿನ ತೀವ್ರ ಏರಿಕೆಯು ಇದನ್ನೇ ಹೇಳುತ್ತಿತ್ತು. ಚಿನ್ನದ ಬೆಲೆಯು ಕಳೆದ ವರ್ಷದಲ್ಲಿ ಸರಿಸುಮಾರು ಶೇ 70ರಿಂದ ಶೇ 75ರವರೆಗೆ ಹಾಗೂ ಬೆಳ್ಳಿಯ ಬೆಲೆಯು ಶೇ 150ರಿಂದ ಶೇ 172ರವರೆಗೆ ಹೆಚ್ಚಳ ಕಂಡಿತು.
ಇವು ಅಸಾಮಾನ್ಯ ಪ್ರಮಾಣದ ಗಳಿಕೆ, ನಿಜ. ಆದರೆ ಈ ಪ್ರಮಾಣದ ಗಳಿಕೆಯು ಮಹತ್ವದ ಪಾಠವೊಂದನ್ನು ಹೇಳುತ್ತಿದೆ. ಎಲ್ಲ ಸಂದರ್ಭಗಳಲ್ಲಿಯೂ ಒಂದೇ ಬಗೆಯ ಹೂಡಿಕೆಯು ಮುಂಚೂಣಿಯಲ್ಲಿ ಇರುವುದಿಲ್ಲ. ಲಾಭ ನೀಡುವಲ್ಲಿ ನಾಯಕನ ಸ್ಥಾನವು ಬದಲಾಗುತ್ತಿರುತ್ತದೆ. ಯಾವುದರ ಮೇಲಿನ ಹೂಡಿಕೆಯು ಅತ್ಯಂತ ಹೆಚ್ಚಿನ ಲಾಭ ನೀಡುತ್ತದೆ ಎಂಬುದನ್ನು ಊಹಿಸುವುದು ಬಹಳ ಕಷ್ಟದ ಕೆಲಸ. ಮಲ್ಟಿ ಅಸೆಟ್ ಫಂಡ್‌ಗಳು ಮಹತ್ವ ಪಡೆದುಕೊಳ್ಳುವುದೇ ಈ ಕಾರಣದಿಂದಾಗಿ.
ಮಲ್ಟಿ ಅಸೆಟ್ ಫಂಡ್‌ಗಳ ಪ್ರಾಮುಖ್ಯ
ಮಲ್ಟಿ ಅಸೆಟ್ ಫಂಡ್‌ಗಳು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಕಡೆಗಳಲ್ಲಿ ಹಣ ತೊಡಗಿಸುತ್ತವೆ. ಸಾಮಾನ್ಯವಾಗಿ ಅವು ಷೇರುಗಳಲ್ಲಿ, ಸಾಲಪತ್ರಗಳಲ್ಲಿ, ಚಿನ್ನ ಮತ್ತು ಬೆಳ್ಳಿಯ ಮೇಲೆ ಹಾಗೂ ಕೆಲವು ಸಂದರ್ಭಗಳಲ್ಲಿ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ (ಆರ್‌ಇಐಟಿ) ಮೇಲೆ ಹಣ ಹೂಡಿಕೆ ಮಾಡುತ್ತವೆ. ಇನ್ನೂ ಇತರ ಕೆಲವು ಕಡೆಗಳಲ್ಲಿ ಹಣ ತೊಡಗಿಸಿ, ಹೂಡಿಕೆಯಲ್ಲಿ ವೈವಿಧ್ಯ ಸಾಧಿಸುವುದೂ ಇದೆ. ಇಲ್ಲಿ ಉದ್ದೇಶವು ಅಲ್ಪಾವಧಿಯಲ್ಲಿ ಒಂದು ಬಗೆಯ ಹೂಡಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸುವುದಲ್ಲ; ಅದರ ಬದಲಿಗೆ, ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ ರಿಸ್ಕ್‌ಗೆ ಹೋಲಿಕೆ ಮಾಡಿ ನೋಡಿದಾಗ ಹೆಚ್ಚಿನ ಪ್ರಮಾಣದ ಲಾಭ ತಂದುಕೊಡುವುದು ಇವುಗಳ ಉದ್ದೇಶ.
ಇಲ್ಲಿ ಪ್ರತಿಯೊಂದು ಬಗೆಯ ಹೂಡಿಕೆಯೂ ಭಿನ್ನವಾಗಿ ಕೆಲಸ ಮಾಡುತ್ತದೆ
* ಬೆಳವಣಿಗೆ ಚೆನ್ನಾಗಿರುವಾಗ ಹಾಗೂ ಕಂಪನಿಗಳ ಗಳಿಕೆಯು ವಿಸ್ತರಣೆ ಕಾಣುತ್ತಿರುವಾಗ ಈಕ್ವಿಟಿ ಮೇಲಿನ ಹೂಡಿಕೆಯು ಒಳ್ಳೆಯ ಲಾಭ ತಂದುಕೊಡುತ್ತದೆ.
* ಹೂಡಿಕೆದಾರರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲದ ಸಂದರ್ಭಗಳಲ್ಲಿ, ಹಣದುಬ್ಬರದ ಸಮಸ್ಯೆ ಇರುವ ಹೊತ್ತಿನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆಗಳು ಹೆಚ್ಚು ಲಾಭ ನೀಡುತ್ತವೆ.
* ಸಾಲಪತ್ರಗಳ ಮೇಲಿನ ಹೂಡಿಕೆಯು ವರಮಾನದಲ್ಲಿ ಸ್ಥಿರತೆ ನೀಡುತ್ತದೆ, ಏರಿಳಿತಗಳನ್ನು ಕಡಿಮೆ ಮಾಡುತ್ತದೆ
* ಆರ್‌ಇಐಟಿಗಳು ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್ ಆಸ್ತಿಗಳಲ್ಲಿ, ವರಮಾನ ತಂದುಕೊಡುವ ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತವೆ.
ಈ ಎಲ್ಲ ಹೂಡಿಕೆಗಳ ನಡುವೆ ಪರಸ್ಪರ ನಿಖರ ಸಂಬಂದ ಇರುವುದಿಲ್ಲ. ಆದರೆ ಇವುಗಳೆಲ್ಲವನ್ನು ಒಂದೆಡೆ ತರುವ ಮೂಲಕ, ಒಂದೇ ಪೋರ್ಟ್‌ಫೋಲಿಯೊದಲ್ಲಿ ಇವೆಲ್ಲವನ್ನೂ ಅಡಕವಾಗಿಸುವ ಮೂಲಕ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೂಡಿಕೆ ಆಯ್ಕೆಗಳು ಲಭ್ಯವಾಗುತ್ತವೆ. ಈ ಬಗೆಯ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಸೂಕ್ತ ಸಮಯ ಯಾವುದು ಎಂಬುದನ್ನು ಕಾಯುತ್ತ ಕುಳಿತಿರಬೇಕಾಗಿಲ್ಲ. ಸಣ್ಣ ಹೂಡಿಕೆದಾರರ ಪಾಲಿಗೆ ಇದು ತಮ್ಮ ಹೂಡಿಕೆಯನ್ನು ಬಹಳ ವ್ಯವಸ್ಥಿತವಾದ ಬಗೆಯಲ್ಲಿ ವೈವಿಧ್ಯಮಯ ಆಗಿಸಿಕೊಳ್ಳುವ ಹಾದಿ.
ರಿಸ್ಕ್‌ನ ನಿರ್ವಹಣೆ ಹಾಗೂ ಪ್ರಯೋಜನ:
ಹೂಡಿಕೆದಾರರ ವರ್ತನೆಯಲ್ಲಿ ಸ್ಥಿರತೆಯನ್ನು ತಂದುಕೊಡುವುದು ಮಲ್ಟಿ ಅಸೆಟ್ ಫಂಡ್‌ಗಳಲ್ಲಿನ ಬಹಳ ಮುಖ್ಯವಾದ ಅನುಕೂಲಗಳಲ್ಲಿ ಒಂದು. ಆದರೆ ಈ ಅನುಕೂಲದ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಷೇರುಪೇಟೆಯಲ್ಲಿ ವಹಿವಾಟು ತೇಜಿ ಇಲ್ಲದಿದ್ದಾಗ, ಚಿನ್ನ ಹಾಗೂ ಸಾಲಪತ್ರಗಳ ಮೇಲಿನ ಹೂಡಿಕೆಯು ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತವೆ. ಅದೇ ರೀತಿ, ರಿಸ್ಕ್ ತೆಗೆದುಕೊಳ್ಳುವ ಅಭಿಲಾಷೆ ಹೆಚ್ಚಿದ್ದಾಗ ಈಕ್ವಿಟಿಗಳ ಮೇಲಿನ ಹೂಡಿಕೆಯು ಹೆಚ್ಚಿನ ಲಾಭ ತಂದುಕೊಡುತ್ತದೆ. ಈ ಬಗೆಯ ಲಾಭವು, ಹೂಡಿಕೆದಾರರು ಆತಂಕಕ್ಕೆ ಒಳಗಾಗಿ ಹೂಡಿಕೆ ಹಿಂಪಡೆಯುವುದನ್ನು ಕಡಿಮೆ ಮಾಡುತ್ತದೆ. ದೀರ್ಘಾವಧಿಯಲ್ಲಿ ಉತ್ತಮ ಲಾಭ ಅವರಿಗೆ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸಣ್ಣ ಹೂಡಿಕೆದಾರರ ಪೈಕಿ ಹೆಚ್ಚಿನವರು ಪ್ರತಿ ವರ್ಷ ಅತಿಹೆಚ್ಚಿನ ಪ್ರಮಾಣದಲ್ಲಿ ಲಾಭ ಕೊಡುವ ಹೂಡಿಕೆಯನ್ನು ಹುಡುಕುವುದಕ್ಕಿಂತ ಮಹತ್ವದ ಹೆಜ್ಜೆ ಅಂದರೆ ಹೂಡಿಕೆಯನ್ನು ಮುಂದುವರಿಸುವುದು.
ಫ್ಲೆಕ್ಸಿಕ್ಯಾಪ್, ಸ್ಮಾಲ್‌ಕ್ಯಾಪ್‌ಗಳಿಗಿಂತ ಇವು ಉತ್ತಮವೇ?
ಈ ಪ್ರಶ್ನೆಗೆ ಉತ್ತರಿಸುವ ಮೊದಲು ಕೆಲವು ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಫ್ಲೆಕ್ಸಿಕ್ಯಾಪ್ ಹಾಗೂ ಸ್ಮಾಲ್‌ಕ್ಯಾಪ್–ಮಿಡ್‌ಕ್ಯಾಪ್ ಫಂಡ್‌ಗಳೂ ಸಂಪೂರ್ಣವಾಗಿ ಈಕ್ವಿಟಿ ಆಧಾರಿತವಾದವು. ದೀರ್ಘಾವಧಿಯಲ್ಲಿ ಹೆಚ್ಚಿನ ಗಳಿಕೆಯನ್ನು ತಂದುಕೊಡುವುದು ಈ ಫಂಡ್‌ಗಳ ಉದ್ದೇಶ. ಅತ್ಯಂತ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆಯನ್ನು ಇವು ಒದಗಿಸುತ್ತವೆ. ಜೊತೆಯಲ್ಲೇ ಅತ್ಯಂತ ಹೆಚ್ಚಿನ ಚಂಚಲತೆಯನ್ನೂ ಇವು ಒಳಗೊಂಡಿರುತ್ತವೆ. ಆದರೆ ಮಲ್ಟಿ ಅಸೆಟ್ ಫಂಡ್‌ಗಳನ್ನು ರೂಪಿಸಿರುವುದು ಬೇರೆಯದೇ ಬಗೆಯಲ್ಲಿ. ಸಂಪತ್ತು ಸೃಷ್ಟಿಯು ಸಮತೋಲನದಿಂದ ಆಗಬೇಕು, ರಿಸ್ಕ್‌ನ ಮೇಲೆ ನಿಯಂತ್ರಣ ಇರಬೇಕು ಎಂಬುದು ಇವುಗಳ ಮುಖ್ಯ ಉದ್ದೇಶ. ಹೀಗಾಗಿ ಇಲ್ಲಿ ಪ್ರಶ್ನೆ ಇರಬೇಕಾದುದು ಯಾವುದು ಉತ್ತಮ ಎಂಬುದಾಗಿ ಅಲ್ಲ. ಬದಲಿಗೆ, ಈ ಬಗೆಯ ಫಂಡ್‌ಗಳು ವಹಿಸುವ ಪಾತ್ರ ಏನು ಎಂಬುದು ಇಲ್ಲಿ ಕೇಳಬೇಕಾದ ಪ್ರಶ್ನೆ.
ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ, ಹೆಚ್ಚಿನ ಅವಧಿಗೆ ಹೂಡಿಕೆ ಮಡುವ ಸಾಮರ್ಥ್ಯದ ಹೂಡಿಕೆದಾರರಿಗೆ ಸ್ಮಾಲ್‌ಕ್ಯಾಪ್ ಅಥವಾ ಫ್ಲೆಕ್ಸಿಕ್ಯಾಪ್ ಫಂಡ್‌ಗಳು ಉತ್ತಮವಾಗಬಹುದು. ಆದರೆ ಸಂಪತ್ತು ಸೃಷ್ಟಿಯ ಪಯಣವು ಹೆಚ್ಚಿನ ಏರಿಳಿತಗಳನ್ನು ಕಾಣಬಾರದು, ಹೂಡಿಕೆಯು ಒತ್ತಡ ಸೃಷ್ಟಿಸುವಂತೆ ಆಗಬಾರದು ಎನ್ನುವವರಿಗೆ ಮಲ್ಟಿ ಅಸೆಟ್ ಫಂಡ್‌ಗಳು ಹೆಚ್ಚು ಸೂಕ್ತವಾಗಬಹುದು. ಹೆಚ್ಚಿನ ಅಂಶಗಳನ್ನು ಪರಿಗಣಿಸಿ ರೂಪಿಸಿದ ಪೋರ್ಟ್‌ಫೋಲಿಯೊಗಳಲ್ಲಿ ಮಲ್ಟಿ ಅಸೆಟ್ ಫಂಡ್‌ಗಳು ಹೆಚ್ಚಿನ ಸ್ಥಿರತೆಯನ್ನು ತರುವ ಮೂಲ ಹೂಡಿಕೆಯಂತೆ ಕೆಲಸ ಮಾಡಬಹುದು. ಅಲ್ಲಿ ಶುದ್ಧ ಈಕ್ವಿಟಿ ಆಧಾರಿತ ಫಂಡ್‌ಗಳು ಹೆಚ್ಚಿನ ಬೆಳವಣಿಗೆ ತಂದುಕೊಡುವ ಹೂಡಿಕೆಗಳಾಗಿ ಕೆಲಸ ಮಾಡಬಹುದು.
ಮಲ್ಟಿ ಅಸೆಟ್ ಫಂಡ್‌ಗಳು ವೈವಿಧ್ಯ ಸಾಧಿಸಲು ವೃತ್ತಿಪರ ನೆರವು ನೀಡುತ್ತವೆ, ಮರುಹೊಂದಾಣಿಕೆಗೆ ನೆರವಾಗುತ್ತವೆ. ಚಿನ್ನ, ಬೆಳ್ಳಿ, ಷೇರುಗಳು, ಆರ್‌ಇಐಟಿಗಳಲ್ಲಿ ಪ್ರತ್ಯೇಕವಾಗಿ ನೇರವಾಗಿ ಹೂಡಿಕೆ ಮಾಡುವುದಕ್ಕಿಂತ ಮಲ್ಟಿ ಅಸೆಟ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವುದರಲ್ಲಿ ಸಣ್ಣ ಹೂಡಿಕೆದಾರರಿಗೆ ಹೆಚ್ಚಿನ ಅನುಕೂಲಗಳಿವೆ.
ಮಲ್ಟಿ ಅಸೆಟ್ ಫಂಡ್‌ಗಳು ಅನಿಶ್ಚಿತ ಕಾಲಕ್ಕಾಗಿನ ರಕ್ಷಣಾತ್ಮಕ ಹೂಡಿಕೆ ಆಯ್ಕೆ ಮಾತ್ರವೇ ಅಲ್ಲ. ಅವು ಪೋರ್ಟ್‌ಫೋಲಿಯೊ ರೂಪಿಸುವ ಪ್ರಕ್ರಿಯೆಯಲ್ಲಿ ಆಗಿರುವ ವಿಕಾಸವನ್ನು ಕೂಡ ಪ್ರತಿನಿಧಿಸುತ್ತವೆ. ಲಾಭ ಗಳಿಕೆ ಎಷ್ಟು ಮುಖ್ಯವೋ, ರಿಸ್ಕ್‌ಗಳನ್ನು ನಿರ್ವಹಿಸುವುದು ಕೂಡ ಅಷ್ಟೇ ಮುಖ್ಯವಾಗಿರುವ ಕಾಲಘಟ್ಟದಲ್ಲಿ ಈ ಬಗೆಯ ಫಂಡ್‌ಗಳ ಕಡೆ ಸಣ್ಣ ಹೂಡಿಕೆದಾರರು ಗಂಭೀರ ನೋಟವೊಂದನ್ನು ಹರಿಸಬೇಕಿದೆ.
ಲೇಖಕಿ ದಿ ವೆಲ್ತ್ ಕಂಪನಿ ಮ್ಯೂಚುವಲ್ ಫಂಡ್‌ನ ಈಕ್ವಿಟಿ ವಿಭಾಗದ ಮುಖ್ಯ ಹೂಡಿಕೆ ಅಧಿಕಾರಿ
ಪ್ರತ್ಯೇಕವಾಗಿಯೇ ಹೂಡಿಕೆ ಮಾಡಬಹುದಲ್ಲ?
ಮಲ್ಟಿ ಅಸೆಟ್ ಫಂಡ್‌ಗಳಲ್ಲಿನ ಹೂಡಿಕೆಯನ್ನು ತಾವೇ ಅನುಕರಿಸಲು ಕೆಲವು ಹೂಡಿಕೆದಾರರು ಮುಂದಾಗುತ್ತಾರೆ. ಅವರು ಈಕ್ವಿಟಿ ಫಂಡ್‌ಗಳಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಬೆಳ್ಳಿಯ ಮೇಲೆ ಹೂಡಿಕೆ ಮಾಡುವ ಫಂಡ್‌ಗಳಲ್ಲಿ ಸಾಲಪತ್ರ ಆಧಾರಿತ ಹೂಡಿಕೆ ಉತ್ಪನ್ನಗಳಲ್ಲಿ ಆರ್‌ಇಐಟಿಗಳಲ್ಲಿ ಪ್ರತ್ಯೇಕವಾಗಿ ಹಣ ತೊಡಗಿಸುತ್ತಾರೆ. ತಾತ್ತ್ವಿಕವಾಗಿ ನೋಡಿದಾಗ ಇದು ಒಂದು ಸಮಗ್ರವಾದ ಹೆಜ್ಜೆ ಎಂದು ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಇದು ಪರಿಣಾಮಕಾರಿ ಆಗುವುದಿಲ್ಲ. ಏಕೆಂದರೆ...
1) ಯಾವುದರ ಮೇಲೆ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ತೀರ್ಮಾನಿಸುವಾಗ ಹೂಡಿಕೆ ಮಾಡಬೇಕಾದವುಗಳ ಮೌಲ್ಯದ ಮೇಲೆ ನಿರಂತರ ನಿಗಾ ಇರಿಸಬೇಕಾಗುತ್ತದೆ. ಅರ್ಥ ವ್ಯವಸ್ಥೆಗೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಕಂಪನಿಗಳ ವರಮಾನದ ಗತಿಯನ್ನು ಗಮನಿಸುತ್ತಿರಬೇಕಾಗುತ್ತದೆ. ಸಣ್ಣ ಹೂಡಿಕೆದಾರರಲ್ಲಿ ಹೆಚ್ಚಿನವರಿಗೆ ಇಷ್ಟೆಲ್ಲ ಗಮನಿಸಲು ಸಮಯ ಇರುವುದಿಲ್ಲ ಇವನ್ನೆಲ್ಲ ಅನುಷ್ಠಾನಕ್ಕೆ ತರಲು ಅಗತ್ಯ ಅನುಕೂಲ ಇರುವುದಿಲ್ಲ.
2) ಹೂಡಿಕೆಗಳಲ್ಲಿ ಮರುಹೊಂದಾಣಿಕೆ ಮಾಡಿಕೊಳ್ಳುತ್ತ ಇರುವುದು ಸುಲಭದ ಕೆಲಸವೇನೂ ಅಲ್ಲ. ಹೂಡಿಕೆದಾರರು ಈಚಿನ ದಿನಗಳಲ್ಲಿ ಹೆಚ್ಚು ಲಾಭ ನೀಡಿರುವ ಆಸ್ತಿಯ ಮೇಲೆ ಹೆಚ್ಚಿನ ಹೂಡಿಕೆ ಮಾಡುತ್ತಾರೆ ಲಾಭ ನೀಡುವಲ್ಲಿ ಹಿಂದೆಬಿದ್ದ ಆಸ್ತಿಯ ಮೇಲಿನ ಹೂಡಿಕೆ ಕಡಿಮೆ ಮಾಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ಕೆಲವು ವೇಳೆ ದುಬಾರಿ ಬೆಲೆಗೆ ಖರೀದಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಸ್ಥಿತಿಯೂ ಸೃಷ್ಟಿಯಾಗುತ್ತದೆ.
3) ಹಲವಾರು ಹೂಡಿಕೆ ಆಯ್ಕೆಗಳನ್ನು ಒಬ್ಬರೇ ನಿರ್ವಹಿಸುವಾಗ ಸಂಕೀರ್ಣತೆಗಳು ಹೆಚ್ಚುತ್ತವೆ ಎಲ್ಲ ಹೂಡಿಕೆ ಆಯ್ಕೆಗಳ ಮೇಲೆ ನಿಗಾ ಇರಿಸಬೇಕಾಗುತ್ತದೆ. ಪೋರ್ಟ್‌ಫೋಲಿಯೊದಲ್ಲಿ ಮತ್ತೆ ಮತ್ತೆ ಬದಲಾವಣೆ ತರುತ್ತ ಇದ್ದರೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆಯ ಹೊರೆ ಬೀಳುತ್ತದೆ. ಆದರೆ ಮಲ್ಟಿ ಅಸೆಟ್ ಫಂಡ್‌ಗಳು ಈ ಮೂರೂ ಕೆಲಸಗಳನ್ನು – ಹೂಡಿಕೆ ಹಂಚಿಕೆ ಅದರಲ್ಲಿ ಮರುಹೊಂದಾಣಿಕೆ ಮತ್ತು ರಿಸ್ಕ್‌ನ ನಿರ್ವಹಣೆ – ಸಾಂಸ್ಥಿಕ ಚೌಕಟ್ಟಿನಲ್ಲಿ ಮಾಡಿಕೊಡುತ್ತವೆ. ತೆಗೆದುಕೊಳ್ಳುವ ರಿಸ್ಕ್‌ಗೆ ಎಷ್ಟರಮಟ್ಟಿಗೆ ಲಾಭ ಸಿಗುತ್ತದೆ ಯಾವ ಮೌಲ್ಯಕ್ಕೆ ಹೂಡಿಕೆ ಆಗುತ್ತದೆ ಎಂಬುದನ್ನು ಆಧರಿಸಿ ಪೋರ್ಟ್‌ಫೋಲಿಯೊದಲ್ಲಿ ಬದಲಾವಣೆ ತರಲಾಗುತ್ತದೆ. ಕೇವಲ ಭಾವನೆಗಳ ಆಧಾರದಲ್ಲಿ ಬದಲಾವಣೆ ತರುವುದಿಲ್ಲ. ಹೂಡಿಕೆದಾರರಿಗೆ ವೃತ್ತಿಪರವಾದ ಸೇವೆ ಸಿಗುತ್ತದೆ. ಅಂದರೆ ಹೂಡಿಕೆಯ ಮೊತ್ತವನ್ನು ಸೂಕ್ತವಾಗಿ ಹಂಚಿಕೆ ಮಾಡುವ ಕೆಲಸವನ್ನು ಈ ಫಂಡ್‌ಗಳು ವ್ಯವಸ್ಥಿತ ಪ್ರಕ್ರಿಯೆ ಆಗಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.