ADVERTISEMENT

13,000 ಅಂಶ ದಾಟಿದ ನಿಫ್ಟಿ; ಈವರೆಗಿನ ಗರಿಷ್ಠ ಮಟ್ಟದಲ್ಲಿ ಸೆನ್ಸೆಕ್ಸ್‌

ಏಜೆನ್ಸೀಸ್
Published 24 ನವೆಂಬರ್ 2020, 6:21 IST
Last Updated 24 ನವೆಂಬರ್ 2020, 6:21 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಮುಂಬೈ: ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲೇ 250 ಅಂಶ ಏರಿಕೆಯಾಗುವ ಮೂಲಕ ಸಕಾರಾತ್ಮ ವಹಿವಾಟಿನ ಸೂಚನೆ ನೀಡಿತು. ಮೊದಲ ಬಾರಿಗೆ ನಿಫ್ಟಿ 13,000 ಅಂಶಗಳನ್ನು ದಾಟುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.

ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಯತ್ತ ಮುಖ ಮಾಡಿರುವುದು ಹಾಗೂ ಜಾಗತಿಕ ಷೇರುಪೇಟೆಗಳಲ್ಲೂ ಸಕಾರಾತ್ಮ ವಹಿವಾಟು ದಾಖಲಾಗಿರುವುದರಿಂದ ಹೂಡಿಕೆದಾರರಲ್ಲಿ ಖರೀದಿ ಉತ್ಸಾಹ ಹೆಚ್ಚಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ಮಾರುತಿ, ಒಎನ್‌ಜಿಸಿ ಹಾಗೂ ಆಕ್ಸಿಸ್‌ ಬ್ಯಾಂಕ್‌ ಉತ್ತಮ ಗಳಿಕೆ ದಾಖಲಿಸಿವೆ.

ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಬೆಳಿಗ್ಗೆ 11:15ರ ವರೆಗೂ 90 ಅಂಶ ಏರಿಕೆಯೊಂದಿಗೆ 13,016 ಅಂಶ ಮುಟ್ಟಿದೆ. ಸೆನ್ಸೆಕ್ಸ್‌ 309 ಅಂಶ ಹೆಚ್ಚಳವಾಗಿ ಈವರೆಗಿನ ಗರಿಷ್ಠ ಮಟ್ಟ 44,386 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ADVERTISEMENT

ಎಚ್‌ಡಿಎಫ್‌ಸಿ, ಆಕ್ಸಿಸ್‌, ಐಸಿಐಸಿಐ, ಕೊಟ್ಯಾಕ್ ಮಹೀಂದ್ರಾ, ಎಸ್‌ಬಿಐ ಸೇರಿದಂತೆ ಬಹುತೇಕ ಬ್ಯಾಂಕ್‌ ವಲಯದ ಷೇರುಗಳ ಮೌಲ್ಯ ಶೇ 1ರಿಂದ ಶೇ 2.7ರಷ್ಟು ಹೆಚ್ಚಳ ಕಂಡಿದೆ. ಇನ್ಫೊಸಿಸ್, ಬಜಾಜ್‌ ಆಟೊ ಸೇರಿದಂತೆ ಕೆಲವು ಷೇರುಗಳು ನಷ್ಟ ಅನುಭವಿಸಿವೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಶೇ 0.44ರಷ್ಟು ಗಳಿಕೆಯೊಂದಿಗೆ 44,077.15 ಅಂಶ ಹಾಗೂ ನಿಫ್ಟಿ ಶೇ 0.52ರಷ್ಟು ಏರಿಕೆಯಾಗಿ 12,926.45 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ₹4,738.44 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.