ADVERTISEMENT

ಎರಡನೇ ದಿನವೂ ಷೇರುಪೇಟೆಯಲ್ಲಿ ಖರೀದಿ ಉತ್ಸಾಹ: ಸೂಚ್ಯಂಕ ಮೇಲೆತ್ತಿದ ರಿಲಯನ್ಸ್‌

ಪಿಟಿಐ
Published 19 ಜೂನ್ 2020, 11:32 IST
Last Updated 19 ಜೂನ್ 2020, 11:32 IST
ಷೇರುಪೇಟೆಯಲ್ಲಿ ಗೂಳಿ ಓಟ–ಸಾಂಕೇತಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಸಾಂಕೇತಿಕ ಚಿತ್ರ   

ಮುಂಬೈ: ವಿದೇಶಿ ಬಂಡವಾಳದ ಹರಿವು ಹೆಚ್ಚಳ, ಜಾಗತಿಕ ಮಾರುಕಟ್ಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ರಿಲಯನ್ಸ್‌ ಷೇರಿನ ಗಳಿಕೆಯು ಮುಂಬೈ ಷೇರುಪೇಟೆಯಲ್ಲಿ ಸತತ ಎರಡನೇ ದಿನವೂ ಖರೀದಿ ಉತ್ಸಾಹ ಮೂಡಿಸಿದೆ.

ದಿನದ ವಹಿವಾಟಿನಲ್ಲಿ 640 ಅಂಶಗಳವರೆಗೆ ಏರಿಕೆ ದಾಖಲಿಸಿದ್ದ ಸೂಚ್ಯಂಕವು ದಿನದಂತ್ಯಕ್ಕೆ 523 ಅಂಶ ಹೆಚ್ಚಳ ಕಂಡು 34,731 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಕೂಡ 152 ಅಂಶ ಏರಿಕೆ ಕಂಡು 10,244 ಅಂಶಗಳಿಗೆ ತಲುಪಿತು.

ಬಜಾಜ್‌ ಫೈನಾನ್ಸ್‌ ಷೇರು ಶೇ 7 ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಶೇ 6ರಷ್ಟು ಏರಿಕೆ ದಾಖಲಿಸಿದವು.

ADVERTISEMENT

ತಮ್ಮ ಒಡೆತನದ ಆರ್‌ಐಎಲ್‌ ನಿವ್ವಳ ಸಾಲದಿಂದ ಮುಕ್ತವಾಗಿದೆ ಎಂದು ಮುಕೇಶ್‌ ಅಂಬಾನಿ ಪ್ರಕಟಿಸಿರುವುದರಿಂದ ಕಂಪನಿಯ ಷೇರು ಬೆಲೆ ದಾಖಲೆ ಮಟ್ಟಕ್ಕೆ (₹1,788.60) ಏರಿಕೆ ಕಂಡಿತ್ತು. ವಹಿವಾಟಿನ ಅಂತ್ಯಕ್ಕೆ ₹1,759.50ಕ್ಕೆ ತಲುಪಿತ್ತು.

‘ಉದ್ದಿಮೆ ವಹಿವಾಟಿನ ಚಟುವಟಿಕೆಗಳು ನಿರೀಕ್ಷೆಗಿಂತ ಸಹಜ ಸ್ಥಿತಿಗೆ ಮರಳುತ್ತಿರುವುದು ಷೇರುಪೇಟೆ ವಹಿವಾಟುದಾರರಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದೆ’ ಎಂದು ಕೋಟಕ್‌ ಸೆಕ್ಯುರಿಟಿಸ್‌ನ ಪಿಸಿಜಿ ರಿಸರ್ಚ್‌ ಉಪಾಧ್ಯಕ್ಷ ಸಂಜೀವ್‌ ಜರ್ಬಾದೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.