ADVERTISEMENT

ವಿದೇಶಿ ಬಂಡವಾಳ ಹೂಡಿಕೆ: ಪೇಟೆಯಲ್ಲಿ ಗೂಳಿ ಓಟ

ಪಿಟಿಐ
Published 13 ಮಾರ್ಚ್ 2019, 19:57 IST
Last Updated 13 ಮಾರ್ಚ್ 2019, 19:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಜಾಗತಿಕ ಮಾರುಕಟ್ಟೆಗಳ ಅನಿಶ್ಚಿತ ಪರಿಸ್ಥಿತಿಯನ್ನೂ ಮೀರಿಭಾರತದ ಷೇರುಪೇಟೆಗಳು ಬುಧವಾರ ಸಕಾರಾತ್ಮಕ ವಹಿವಾಟು ಮುಂದುವರಿಸಿದವು.

ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಗೂಳಿ ಓಟ ಮುಂದುವರಿಯಿತು. ವಿದೇಶಿ ಬಂಡವಾಳ ಹೂಡಿಕೆ ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 217 ಅಂಶ ಹೆಚ್ಚಾಗಿ 37,752 ಅಂಶಗಳಲ್ಲಿ ವಹಿವಾಟು ಅಂತ್ಯ ಗೊಂಡಿತು.ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 40 ಅಂಶ ಹೆಚ್ಚಾಗಿ 11,341 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ಆಡಳಿತದಲ್ಲಿರುವ ಎನ್‌ಡಿಎ ಸರ್ಕಾರ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಳ್ಳುವ ನಿರೀಕ್ಷೆ ಇದೆ. ಇದರಿಂದ ಹೂಡಿಕೆ ಹೆಚ್ಚಲು ನೆರವಾಗಲಿದೆ ಎನ್ನುವ ಕಾರಣಕ್ಕೆ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ ಎನ್ನುವ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಬ್ರೆಕ್ಸಿಟ್‌ ಬೆಳವಣಿಗೆಯು ಜಾಗತಿಕ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಭಾರತದಲ್ಲಿ ಲೋಹ, ಔಷಧ ಮತ್ತು ತಂತ್ರಜ್ಞಾನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿವೆ.

ರೂಪಾಯಿ ಗಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಬುಧವಾರ 17 ಪೈಸೆ ಹೆಚ್ಚಾಗಿ ಎರಡು ತಿಂಗಳ ಗರಿಷ್ಠ ಮಟ್ಟವಾದ ಒಂದು ಡಾಲರ್‌ಗೆ ₹ 69.54ರಂತೆ ವಿನಿಮಯಗೊಂಡಿತು.

2019ರ ಜನವರಿ 1ರ(₹ 69.43) ಬಳಿಕ ಡಾಲರ್‌ ಎದುರು ರೂಪಾಯಿ ಕಂಡಿರುವ ಗರಿಷ್ಠ ಮಟ್ಟ ಇದಾಗಿದೆ.

ಮೂರು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯ 60 ಪೈಸೆಗಳಷ್ಟು ವೃದ್ಧಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.