ADVERTISEMENT

ಮಾರಾಟದ ಒತ್ತಡಕ್ಕೆ ಕುಸಿದ ಸೂಚ್ಯಂಕ: ಕಚ್ಚಾ ತೈಲ ದರ ಏರಿಕೆ

ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳ, ಕಚ್ಚಾ ತೈಲ ದರ ಏರಿಕೆ

ಪಿಟಿಐ
Published 6 ಮೇ 2022, 13:12 IST
Last Updated 6 ಮೇ 2022, 13:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ಅತಿಯಾದ ಮಾರಾಟದ ಒತ್ತಡ ಕಂಡುಬಂದು ಸೂಚ್ಯಂಕಗಳು ಇಳಿಕೆ ಕಂಡವು.

ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರ ಹೆಚ್ಚಳ ಮಾಡುತ್ತಿರುವುದರಿಂದ ಹೂಡಿಕೆದಾರರು ಷೇರುಪೇಟೆಗಳಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಂಡಿದ್ದು, ಅದರ ಪರಿಣಾಮವು ದೇಶಿ ಷೇರುಪೇಟೆಗಳಲ್ಲಿಯೂ ಕಂಡುಬಂತು.

ರೂಪಾಯಿ ಮೌಲ್ಯ ಇಳಿಕೆ, ಕಚ್ಚಾ ತೈಲ ದರ ಏರಿಕೆ ಹಾಗೂ ವಿದೇಶಿ ಬಂಡವಾಳ ಹೊರಹರಿವು ಸಹ ಸೂಚ್ಯಂಕಗಳ ಇಳಿಕೆ ಕಾರಣವಾದವು.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 866 ಅಂಶ ಇಳಿಕೆ ಕಂಡು 54,835 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 271 ಅಂಶ ಇಳಿಕೆಯಾಗಿ 16,411 ಅಂಶಗಳಿಗೆ ತಲುಪಿತು.

ದಿನದ ವಹಿವಾಟು ಆರಂಭ ಆದಾಗಿನಿಂದಲೂ ಸೂಚ್ಯಂಕ ಇಳಿಮುಖವಾಗಿಯೇ ಇತ್ತು. ಕಚ್ಚಾ ತೈಲ ದರ ಏರಿಕೆಯಿಂದ ಹಣದುಬ್ಬರ ಇನ್ನಷ್ಟು ಏರಿಕೆ ಕಾಣುವ ಆತಂಕ ಎದುರಾಗಿದ್ದರಿಂದ ಮಾರಾಟದ ಒತ್ತಡ ತೀವ್ರಗೊಂಡಿತು ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಡೆಪ್ಯುಟಿ ಉಪಾಧ್ಯಕ್ಷ ಅಮೋಲ್‌ ಅಠಾವಳೆ ಹೇಳಿದ್ದಾರೆ.

ಬಿಎಸ್‌ಇನಲ್ಲಿ ವಲಯವಾರು, ರಿಯಲ್‌ ಎಸ್ಟೇಟ್‌ ಶೇ 3.53ರಷ್ಟು ಮತ್ತು ಲೋಹ ಶೇ 3.10ರಷ್ಟು ಇಳಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 2.20ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 113.3 ಡಾಲರ್‌ಗಳಿಗೆ ಏರಿಕೆ ಆಯಿತು.

ಕರಗಿತು ₹ 4.47 ಲಕ್ಷ ಕೋಟಿ: ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ಒಂದೇ ದಿನ ₹ 4.47 ಲಕ್ಷ ಕೋಟಿಯಷ್ಟು ಕರಗಿತು. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 255.17 ಲಕ್ಷ ಕೋಟಿಗೆ ಇಳಿಕೆ ಆಯಿತು.

ಮುಖ್ಯಾಂಶಗಳು

ಕೇಂದ್ರೀಯ ಬ್ಯಾಂಕ್‌ಗಳಿಂದ ಬಡ್ಡಿದರ ಹೆಚ್ಚಳ

ಸಾಲದ ಮೇಲಿನ ಬಡ್ಡಿದರ ಹೆಚ್ಚಳ

ಚೀನಾದಲ್ಲಿ ಲಾಕ್‌ಡೌನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.