ADVERTISEMENT

40 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಷೇರುಪೇಟೆಗಳಲ್ಲಿ ಸತತ ಆರನೇ ದಿನವೂ ಸಕಾರಾತ್ಮಕ ವಹಿವಾಟು

ಪಿಟಿಐ
Published 8 ಅಕ್ಟೋಬರ್ 2020, 17:19 IST
Last Updated 8 ಅಕ್ಟೋಬರ್ 2020, 17:19 IST
ಮುಂಬೈ ಷೇರುಪೇಟೆ
ಮುಂಬೈ ಷೇರುಪೇಟೆ   

ಮುಂಬೈ: ಸತತ ಆರನೆಯ ದಿನವೂ ಸಕಾರಾತ್ಮಕ ವಹಿವಾಟು ಕಂಡ ಬಿಎಸ್‌ಇ ಸೆನ್ಸೆಕ್ಸ್, 40 ಸಾವಿರ ಅಂಶಗಳ ಗಡಿಯನ್ನು ಗುರುವಾರ ಪುನಃ ದಾಟಿತು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿದ್ದ ಪರಿಣಾಮ, ಐ.ಟಿ. ವಲಯದ ಷೇರುಗಳಿಗೆ ಬೇಡಿಕೆ ಹೆಚ್ಚಿತ್ತು.

ಗುರುವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 303 ಅಂಶಗಳಷ್ಟು ಏರಿಕೆ ದಾಖಲಿಸಿ, 40,182ಕ್ಕೆ ಕೊನೆಗೊಂಡಿತು.
ಸೆನ್ಸೆಕ್ಸ್ 40 ಸಾವಿರ ದಾಟಿರುವುದು ಫೆಬ್ರುವರಿ 25ರ ನಂತರ ಇದೇ ಮೊದಲು. ನಿಫ್ಟಿ 96 ಅಂಶಗಳಷ್ಟು ಏರಿಕೆ ಕಂಡು, 11,834ಕ್ಕೆ ವಹಿವಾಟು ಅಂತ್ಯಗೊಳಿತು.

ಅಲ್ಟ್ರಾಟೆಕ್‌ ಸಿಮೆಂಟ್‌ ಕಂಪನಿಯ ಷೇರು ಮೌಲ್ಯ ಶೇಕಡ 3.24ರಷ್ಟು ಏರಿಕೆ ಕಂಡಿತು. ಟಿಸಿಎಸ್‌, ಎಚ್‌ಸಿಎಲ್ ಟೆಕ್, ಇನ್ಫೊಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಸನ್ ಫಾರ್ಮಾ ಮತ್ತು ಟೆಕ್ ಮಹೀಂದ್ರ ಷೇರುಗಳೂ ಏರಿಕೆ ದಾಖಲಿಸಿದವು.

ADVERTISEMENT

ಭಾರತದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿಯಾಗಿರುವ ಟಿಸಿಎಸ್‌, ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದ ಲಾಭದಲ್ಲಿ ಶೇಕಡ 4.9ರಷ್ಟು ಏರಿಕೆ ಕಂಡಿದೆ. ಅಲ್ಲದೆ, ಒಟ್ಟು ₹ 16 ಸಾವಿರ ಕೋಟಿ ಮೌಲ್ಯದ ತನ್ನ ಷೇರುಗಳನ್ನು ಮರುಖರೀದಿಸುವುದಾಗಿ ಘೋಷಿಸಿದೆ.

‘ಎರಡನೆಯ ತ್ರೈಮಾಸಿಕದ ಫಲಿತಾಂಶಗಳ ವಿಚಾರದಲ್ಲಿ ಟಿಸಿಎಸ್‌ ಮೂಲಕ ಒಳ್ಳೆಯ ಆರಂಭ ದೊರೆತಂತಾಗಿದೆ. ಷೇರು ಮರುಖರೀದಿ ಘೋಷಣೆ ಕೂಡ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಲು ಕಾರಣ. ಸರ್ಕಾರದಿಂದ ದೊಡ್ಡ ಮಟ್ಟದ ಆರ್ಥಿಕ ಪುನಶ್ಚೇತನ ಪ್ಯಾಕೇಜ್‌ ಸಿಗಬಹುದು ಎಂಬ ನಿರೀಕ್ಷೆಗಳು ಹೆಚ್ಚಾಗಿವೆ’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.