ADVERTISEMENT

ವಿದೇಶಿ ಬಂಡವಾಳದ ಹೊರಹರಿವು ಇಳಿಕೆಗೆ ಕಾರಣ ಸೆನ್ಸೆಕ್ಸ್ 769 ಅಂಶ ಕುಸಿತ

ಕಚ್ಚಾ ತೈಲ ದರ ಏರಿಕೆ,

ಪಿಟಿಐ
Published 23 ಜನವರಿ 2026, 15:58 IST
Last Updated 23 ಜನವರಿ 2026, 15:58 IST
ಸೆನ್ಸೆಕ್ಸ್
ಸೆನ್ಸೆಕ್ಸ್   

ಮುಂಬೈ: ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ, ವಿದೇಶಿ ಬಂಡವಾಳದ ಹೊರಹರಿವಿನಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಶೇ 1ರವರೆಗೆ ಇಳಿಕೆ ಕಂಡಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 769 ಅಂಶ ಇಳಿಕೆಯಾಗಿ, 81,537ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ ಸೆನ್ಸೆಕ್ಸ್ 835 ಅಂಶ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 241 ಅಂಶ ಕಡಿಮೆಯಾಗಿ, 25,048ಕ್ಕೆ ಕೊನೆಗೊಂಡಿದೆ.

ಸೂಚ್ಯಂಕಗಳ ಇಳಿಕೆಯಿಂದ ಹೂಡಿಕೆದಾರರು ಸಂಪತ್ತು ಒಂದೇ ದಿನ ₹7 ಲಕ್ಷ ಕೋಟಿಯಷ್ಟು ಕರಗಿದೆ. 

ADVERTISEMENT

ಅದಾನಿ ಪೋರ್ಟ್ಸ್‌, ಎಟರ್ನಲ್‌, ಎಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್‌, ಪವರ್ ಗ್ರಿಡ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌, ಎಸ್‌ಬಿಐ, ಮಾರುತಿ ಸುಜುಕಿ ಇಂಡಿಯಾ, ಬಜಾಜ್‌ ಫೈನಾನ್ಸ್, ಎನ್‌ಟಿಪಿಸಿ, ಟ್ರೆಂಟ್, ಎಲ್ ಆ್ಯಂಡ್‌ ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರಿನ ಮೌಲ್ಯ ಇಳಿಕೆ ಆಗಿದೆ.

ಟೆಕ್‌ ಮಹೀಂದ್ರ, ಹಿಂದೂಸ್ತಾನ್ ಯೂನಿಲಿವರ್, ಇನ್ಫೊಸಿಸ್‌, ಏಷ್ಯನ್ ಪೇಂಟ್ಸ್, ಟಿಸಿಎಸ್, ಟೈಟನ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ಜಪಾನ್‌, ಶಾಂಘೈ, ದಕ್ಷಿಣ ಕೊರಿಯಾ ಮತ್ತು ಹಾಂಗ್‌ ಕಾಂಗ್‌ ಮಾರುಕಟ್ಟೆಯು ಸಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 1.03ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರಲ್ ಬೆಲೆಯು 64.72 ಡಾಲರ್ ಆಗಿದೆ.

‘ಕಚ್ಚಾ ತೈಲದ ಬೆಲೆಯಲ್ಲಿನ ಹೆಚ್ಚಳ, ರೂಪಾಯಿ ಮೌಲ್ಯ ಇಳಿಕೆ, ವಿದೇಶಿ ಬಂಡವಾಳದ ಹೊರಹರಿವು ಷೇರುಪೇಟೆ ಮೇಲೆ ಪರಿಣಾಮ ಬೀರಿದೆ. ಇದು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿವೆ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಲಾಭದ ಗಳಿಕೆಗಾಗಿ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಅಮೆರಿಕದ ಎಸ್‌ಇಸಿಯಿಂದ ಸಮನ್ಸ್ ಜಾರಿಯಾಗುವ ಸಾಧ್ಯತೆಯಿಂದ ಅದಾನಿ ಸಮೂಹದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಇದು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.