ADVERTISEMENT

ಷೇರುಪೇಟೆ: ಕರಗಿದ ಮೂರು ದಿನಗಳ ಗಳಿಕೆ, ಸೆನ್ಸೆಕ್ಸ್‌ 900 ಅಂಶ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2022, 6:14 IST
Last Updated 11 ಫೆಬ್ರುವರಿ 2022, 6:14 IST
ಷೇರುಪೇಟೆ ಕುಸಿತ–ಪ್ರಾತಿನಿಧಿಕ ಚಿತ್ರ
ಷೇರುಪೇಟೆ ಕುಸಿತ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸತತ ಮೂರು ದಿನ ಚೇತರಿಕೆ ಕಂಡಿದ್ದ ದೇಶದ ಷೇರುಪೇಟೆಗಳು ಶುಕ್ರವಾರ ತೀವ್ರ ಕುಸಿತಕ್ಕೆ ಒಳಗಾಗಿವೆ. ಅಮೆರಿಕದ ಹಣದುಬ್ಬರಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿ ದರದಲ್ಲಿ ಕೈಗೊಳ್ಳಬಹುದಾದ ನಿರ್ಧಾರಗಳ ಬಗ್ಗೆ ತಲ್ಲಣ ಸೃಷ್ಟಿಯಾಗಿದೆ. ಇದರೊಂದಿಗೆ ಜಾಗತಿಕ ಷೇರುಪೇಟೆಗಳ ಪ್ರಭಾವವೂ ದೇಶದ ಷೇರುಗಳ ವಹಿವಾಟಿನ ಮೇಲೆ ಆಗಿದ್ದು,ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 900 ಅಂಶಗಳಷ್ಟು ಕುಸಿತ ದಾಖಲಿಸಿದೆ.

ಬೆಳಿಗ್ಗೆ 11ರವರೆಗೂ ಸೆನ್ಸೆಕ್ಸ್‌ 939.03 ಅಂಶ (ಶೇ 1.59) ಕಡಿಮೆಯಾಗಿ 57,987 ಅಂಶಗಳಿಗೆ ಇಳಿಕೆಯಾದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 277.75 ಅಂಶ (ಶೇ 1.58) ಇಳಿಕೆಯಾಗಿ 17,328.10 ಅಂಶಗಳಲ್ಲಿ ವಹಿವಾಟು ನಡೆದಿದೆ.

ವರಮಾನದಲ್ಲಿ ಉತ್ತಮ ಬೆಳವಣಿಗೆ ಕಂಡಿರುವುದರಿಂದ ನಷ್ಟದ ಪ್ರಮಾಣ ಕಡಿಮೆ ಆಗಿದೆ ಎಂದು ಜೊಮ್ಯಾಟೊ ಕಂಪನಿಯು ಹೇಳಿಕೊಂಡಿತ್ತು. ಆದರೆ, ಇಂದು ಜೊಮ್ಯಾಟೊ ಷೇರು ಬೆಲೆ ಶೇಕಡ 6ರಷ್ಟು ಕುಸಿದು, ಪ್ರತಿ ಷೇರು ಬೆಲೆ ₹88.85 ತಲುಪಿದೆ. ಐಟಿ, ಹಣಕಾಸು ಮತ್ತು ರಿಯಲ್‌ ಎಸ್ಟೇಟ್‌ ವಲಯದ ಷೇರುಗಳು ಶೇಕಡ 2ರಷ್ಟು ಇಳಿಕೆಯಾಗಿವೆ.

ADVERTISEMENT

ಇನ್ಫೊಸಿಸ್‌ ಷೇರು ಶೇಕಡ 3ರಷ್ಟು ಇಳಿಕೆಯಾಗಿದ್ದು, ವಿಪ್ರೊ, ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ಎಚ್‌ಡಿಎಫ್‌ಸಿ, ಬಜಾಜ್‌ ಫೈನಾನ್ಸ್‌, ರಿಲಯನ್ಸ್‌, ಭಾರ್ತಿ ಏರ್‌ಟೆಲ್‌ ಸೇರಿದಂತೆ ಬೃಹತ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಹಲವು ಕಂಪನಿಗಳ ಷೇರು ಬೆಲೆ ಶೇಕಡ 2ರವರೆಗೂ ಇಳಿಮುಖವಾಗಿವೆ.

ಆರ್‌ಬಿಐ, ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಜೊತೆಗೆ ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹೊಂದಾಣಿಕೆಯ ನೀತಿಯನ್ನು ಮುಂದುವರಿಸುವುದಾಗಿಯೂ ಹೇಳಿದ್ದರಿಂದ ಗುರುವಾರ ಸೂಚ್ಯಂಕಗಳು ಏರಿಕೆ ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.