ADVERTISEMENT

ಕಳೆದ ವಾರದ ಗಳಿಕೆ ಉಳಿಸಿಕೊಳ್ಳದ ಷೇರುಪೇಟೆ: ಸೆನ್ಸೆಕ್ಸ್‌ 650 ಅಂಶ ಇಳಿಕೆ

ಏಜೆನ್ಸೀಸ್
Published 13 ಏಪ್ರಿಲ್ 2020, 5:40 IST
Last Updated 13 ಏಪ್ರಿಲ್ 2020, 5:40 IST
ಷೇರುಪೇಟೆಯಲ್ಲಿ ಮಾರಾಟದ ಒತ್ತಡ
ಷೇರುಪೇಟೆಯಲ್ಲಿ ಮಾರಾಟದ ಒತ್ತಡ   

ಬೆಂಗಳೂರು: ಕಳೆದ ವಾರ ಸಕಾರಾತ್ಮಕ ವಹಿವಾಟು ದಾಖಲಿಸಿದ ದೇಶೀಯ ಷೇರುಪೇಟೆಗಳು ಸೋಮವಾರ ಇಳಿಮುಖವಾಗಿವೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಒಂದು ಗಂಟೆ ವಹಿವಾಟಿನಲ್ಲಿ 659.63 ಅಂಶ ಇಳಿಕೆಯಾಗಿ 30,499.99 ಅಂಶ ತಲುಪಿತು.

9,103.95 ಅಂಶಗಳಿಂದ ವಹಿವಾಟು ಆರಂಭಿಸಿದ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 8,919.90 ಮುಟ್ಟಿತು. ಮುಂಬೈ ಷೇರುಪೇಟೆ 31,195.72 ಅಂಶಗಳಿಂದ ವಹಿವಾಟು ಆರಂಭಿಸಿ ಕೆಲವೇ ನಿಮಿಷಗಳಲ್ಲಿ ಕುಸಿಯಿತು. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿರುವುದು ಹಾಗೂ ಕಚ್ಚಾ ತೈಲ ಉತ್ಪಾದನೆ ಕಡಿತದ ಬಳಿಕ ತೈಲ ಬೆಲೆ ವ್ಯತ್ಯಾಸಗಳು ಷೇರುಪೇಟೆ ಮೇಲೆ ಪ್ರಭಾವ ಬೀರಿವೆ.

ನಿಫ್ಟಿ 50ರಲ್ಲಿ 44 ಕಂಪನಿಗಳ ಷೇರುಗಳು ನಷ್ಟಕ್ಕೆ ಒಳಗಾಗಿವೆ. ಜೀ ಎಂಟರ್‌ಟೈನ್ಮೆಂಟ್‌, ಬಜಾಜ್‌ ಫೈನಾನ್ಸ್‌, ಟೈಟಾನ್‌, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಒಎನ್‌ಜಿಸಿ ಹಾಗೂ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪನಿಗಳ ಷೇರುಗಳು ಶೇ 4.81ರಿಂದ ಶೇ 13.45ರಷ್ಟು ಕುಸಿದಿವೆ.

ADVERTISEMENT

ಡಾ ರೆಡ್ಡೀಸ್‌, ಸನ್‌ ಫಾರ್ಮಾ, ಸಿಪ್ಲಾ ಹಾಗೂ ಇನ್ಫೊಸಿಸ್‌ ಷೇರುಗಳು ಶೇ 1.58ರಿಂದ ಶೇ 3.49ರಷ್ಟು ಏರಿಕೆ ಕಂಡಿವೆ. ಬೆಳಿಗ್ಗೆ 11ಕ್ಕೆ ಸೆನ್ಸೆಕ್ಸ್‌ 400.10 ಅಂಶ ಕಡಿಮೆಯಾಗಿ 30,759.52 ಅಂಶ ಹಾಗೂ ನಿಫ್ಟಿ 111.40 ಅಂಶ ಇಳಿಕೆಯಾಗಿ 9,000.50 ಅಂಶಗಳಲ್ಲಿ ವಹಿವಾಟು ನಡೆದಿದೆ.

ಮಂಗಳವಾರ ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಷೇರುಪೇಟೆ ವಹಿವಾಟುಗಳಿಗೆ ರಜೆ ಇರಲಿದೆ.

ಏಳು ವಾರಗಳು ಸತತ ಕುಸಿತ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಕಳೆದ ವಾರ ಮತ್ತೆ ಚೇತರಿಕೆ ಕಂಡಿತು. ವಾರಾಂತ್ಯದಲ್ಲಿ 31,159 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ 3,568 ಅಂಶಗಳ ಸೇರ್ಪಡೆಯೊಂದಿಗೆ ಶೇ 12.93 ರಷ್ಟು ಜಿಗಿತ ಕಂಡಿತು. 9,111 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ (50) ಸೂಚ್ಯಂಕ 1,028 ಅಂಶಗಳ ಏರಿಕೆಯೊಂದಿಗೆ ಶೇ 12.72 ರಷ್ಟು ಹೆಚ್ಚಳವಾಗಿತ್ತು.

ಕಳೆದ ವಾರ ಸುಮಾರು ₹3,098.68 ಕೋಟಿ ಮೊತ್ತದ ಹೂಡಿಕೆಯನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾಡಿದ್ದಾರೆ. ಕೋವಿಡ್-19ನಿಂದಾಗಿ ಮಾರ್ಚ್‌ನಲ್ಲೇ ವಿದೇಶಿ ಹೂಡಿಕೆದಾರರು ₹61,973 ಕೋಟಿ ಮೌಲ್ಯದ ಹೂಡಿಕೆ ಹಿಂಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.