ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಶೇ 1ರಷ್ಟು ಏರಿಕೆ: ಫೈನಾನ್ಸ್ ವಲಯದ ಷೇರುಗಳ ಖರೀದಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 11:31 IST
Last Updated 28 ಏಪ್ರಿಲ್ 2020, 11:31 IST
ಷೇರುಪೇಟೆ
ಷೇರುಪೇಟೆ    

ಬೆಂಗಳೂರು: ದೇಶದ ಷೇರುಪೇಟೆಗಳು ಮಂಗಳವಾರ ಅಲ್ಪ ಚೇತರಿಕೆಯೊಂದಿಗೆ ವಹಿವಾಟು ಮುಗಿಸಿದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 371.44 ಅಂಶ (ಶೇ 1.17) ಏರಿಕೆಯೊಂದಿಗೆ 32,114.52 ಅಂಶ ತಲುಪಿತು. ನಿಫ್ಟಿ 98.60 ಅಂಶ (ಶೇ 1.06) ಹೆಚ್ಚಳವಾಗಿ 9,380.90 ಮುಟ್ಟಿದೆ.

ಮಧ್ಯಾಹ್ನದ ನಂತರ ಫಾರ್ಮಾ ಹಾಗೂ ಎಫ್‌ಎಂಜಿಸಿ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು. ಹಣಕಾಸು ಷೇರುಗಳ ಖರೀದಿಯತ್ತ ಹೂಡಿಕೆದಾರರು ಒಲವು ತೋರಿದರು. ಇದರಿಂದಾಗಿ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಶೇ 1ರಷ್ಟು ಏರಿಕೆಯೊಂದಿಗೆ ವಹಿವಾಟು ಮುಕ್ತಾಯವಾಯಿತು.

ಕೊರೊನಾ ವೈರಸ್‌ ಆತಂಕ ಹೂಡಿಕೆದಾರರನ್ನು ಈವರೆಗೂ ನಿಯಂತ್ರಿಸುತ್ತಿದೆ. ನಿಫ್ಟಿ 50 ಷೇರುಗಳ ಪೈಕಿ 28 ಷೇರುಗಳು ಏರಿಕೆ ದಾಖಲಿಸಿವೆ. ಇಂಡಸ್‌ಇಂಡ್‌ ಬ್ಯಾಂಕ್‌, ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ, ಆ್ಯಕ್ಸಿಸ್‌ ಬ್ಯಾಂಕ್‌ ಹಾಗೂ ಬಜಾಜ್‌ ಫೈನಾನ್ಸ್‌ ಷೇರುಗಳು ಶೇ 5.36ರಿಂದ ಶೇ 17.07ರಷ್ಟು ಏರಿಕೆಯಾಗಿದೆ. ಇಂಡಸ್‌ಇಂಡ್‌ ಬ್ಯಾಂಕ್‌ ಶೇ 17.07ರಷ್ಟು ಏರಿಕೆಯಾಗುವ ಮೂಲಕ ಷೇರುಬೆಲೆ ₹476.95 ತಲುಪಿದೆ.

ADVERTISEMENT

ಸನ್‌ ಫಾರ್ಮಾ, ಇಂಡಿಯನ್ ಆಯಿಲ್‌, ಎನ್‌ಟಿಪಿಸಿ, ವೇದಾಂತ ಹಾಗೂ ನೆಸ್ಟ್ಲೆ ಷೇರುಗಳು ಶೇ 2ರಿಂದ ಶೇ 3ರಷ್ಟು ಇಳಿಕೆಯಾಗಿದೆ.

ಮ್ಯೂಚುವಲ್ ಫಂಡ್‌ ವಲಯದಲ್ಲಿ ನಗದು ಹೆಚ್ಚಳಕ್ಕಾಗಿ ಆರ್‌ಬಿಐ ₹50,000 ಕೋಟಿ ನೆರವು ನೀಡಿದೆ. ಇದರಿಂದಾಗಿ ಹಣಕಾಸು ಷೇರುಗಳ ಖರೀದಿ ಹೆಚ್ಚಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ಫ್ಯೂಚರ್ಸ್‌ಗಳು ಶೇ 1.95ರಷ್ಟು ಹೆಚ್ಚಳದೊಂದಿಗೆ ಪ್ರತಿ ಬ್ಯಾರೆಲ್‌ಗೆ 23.52 ಡಾಲರ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.