
ಮುಂಬೈ: ಭಾರತ ಮತ್ತು ಅಮೆರಿಕ ನಡುವೆ ವಾಣಿಜ್ಯ ಒಪ್ಪಂದ ಆಗುತ್ತದೆ ಎಂಬ ಆಶಾವಾದದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳವಾಯಿತು. ಇದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 130 ಅಂಶ ಹೆಚ್ಚಳವಾಗಿ, 84,556ಕ್ಕೆ ವಹಿವಾಟು ಕೊನೆಗೊಂಡಿದೆ. ವಹಿವಾಟಿನ ನಡುವೆ ಸೆನ್ಸೆಕ್ಸ್ 863 ಅಂಶ ಜಿಗಿತ ಕಂಡು, 85,290ಕ್ಕೆ ಮುಟ್ಟಿತ್ತು. ಇದು 52 ವಾರಗಳ ಗರಿಷ್ಠ ಮಟ್ಟ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 22 ಅಂಶ ಏರಿಕೆಯಾಗಿ, 25,891ಕ್ಕೆ ಅಂತ್ಯಗೊಂಡಿದೆ.
ರಷ್ಯಾದ ಪ್ರಮುಖ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದ ಹೂಡಿಕೆದಾರರು ಲಾಭದ ಗಳಿಕೆಗಾಗಿ ಎಚ್ಚರಿಕೆ ನಡೆ ಅನುಸರಿಸಿದ್ದರಿಂದ ಷೇರುಪೇಟೆ ಸೂಚ್ಯಂಕಗಳು ವಹಿವಾಟಿನ ವೇಳೆ ಕಂಡಿದ್ದ ಗರಿಷ್ಠ ಮಟ್ಟದ ಏರಿಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 5.43ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರಲ್ ದರವು 65.99 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.