ADVERTISEMENT

ಎಸ್‌ವಿಬಿ ಪರಿಣಾಮ: ಷೇರುಪೇಟೆಯಲ್ಲಿ ಕರಡಿ ಕುಣಿತ

ಬ್ಯಾಂಕಿಂಗ್‌, ಹಣಕಾಸು ಷೇರು ಮಾರಾಟ ಹೆಚ್ಚಳ

ಪಿಟಿಐ
Published 13 ಮಾರ್ಚ್ 2023, 19:42 IST
Last Updated 13 ಮಾರ್ಚ್ 2023, 19:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ (ಎಸ್‌ವಿಬಿ) ದಿವಾಳಿ ಆಗಿರುವುದು ದೇಶದ ಷೇರುಪೇಟೆಗಳ ಮೇಲೆ ಸೋಮವಾರ ನಕಾರಾತ್ಮಕ ಪ‍ರಿಣಾಮ ಬೀರಿತು. ಬ್ಯಾಂಕಿಂಗ್‌, ಹಣಕಾಸು ಮತ್ತು ವಾಹನ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಐದು ತಿಂಗಳ ಕನಿಷ್ಠ ಮಟ್ಟದಲ್ಲಿ ಷೇರುಪೇಟೆಗಳ ವಹಿವಾಟು ಅಂತ್ಯಗೊಂಡಿತು.

ಜಾಗತಿಕ ಮಟ್ಟದಲ್ಲಿ ಬಡ್ಡಿದರ ಹೆಚ್ಚಳವಾಗುವ ಆತಂಕ ಒಂದೆಡೆ ಇದೆ. ಅದರ ನಡುವೆ, ವಿದೇಶಿ ಬಂಡವಾಳದ ಹೊರಹರಿವು ಮತ್ತು ರೂಪಾಯಿ ಮೌಲ್ಯ ಇಳಿಕೆಯು ಸೂಚ್ಯಂಕಗಳ ಕುಸಿತ ಹೆಚ್ಚಾಗುವಂತೆ ಮಾಡಿದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 897 ಅಂಶ ಇಳಿಕೆ ಕಂಡು 58,238 ಅಂಶಗಳಿಗೆ ತಲುಪಿದೆ. ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್‌ 1,400 ಅಂಶಗಳವರೆಗೆ ಕುಸಿತ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 259 ಅಂಶ ಇಳಿಕೆ ಕಂಡು 17,154 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಅಮೆರಿಕದ ಎಸ್‌ವಿಬಿ ಬ್ಯಾಂಕ್‌ನ ವೈಫಲ್ಯವು ಹೂಡಿಕೆದಾರರನ್ನು ಸುರಕ್ಷಿತ ಕಡೆಗಳಲ್ಲಿ ಬಂಡವಾಳ ತೊಡಗಿಸುವಂತೆ ಮಾಡುತ್ತಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಉಪಾಧ್ಯಕ್ಷ ನವನೀತ್‌ ದಮಾನಿ ಹೇಳಿದ್ದಾರೆ.

ಎಸ್‌ವಿಬಿ ದಿವಾಳಿ ಆದ ಬೆನ್ನಲ್ಲೇ ಅಮೆರಿಕದ ಸಿಗ್ನೆಚರ್‌ ಬ್ಯಾಂಕ್‌ ಬಾಗಿಲನ್ನೂ ಮುಚ್ಚಲಾಗಿದೆ. ಈ ಬೆಳವಣಿಗೆಯು ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಮುಖ್ಯವಾಗಿ, ಅಮೆರಿಕದ ಫೆಡರಲ್‌ ರಿಸರ್ವ್‌ನ ನಿರ್ಧಾರ ಆಧರಿಸಿ ಮಾರುಕಟ್ಟೆಯ ವರ್ತನೆ ಇರಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ತಿಳಿಸಿದ್ದಾರೆ.

ತೆರಿಗೆ ಪಾವತಿದಾರರ ಹಣವನ್ನು ಅಪಾಯಕ್ಕೆ ಒಡ್ಡುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರು ಅಲ್ಲಿನ ನಾಗರಿಕರು ಮತ್ತು ಉದ್ಯಮಗಳಿಗೆ ಭರವಸೆ ನೀಡಿದ್ದಾರೆ. ತಮಗೆ ಅಗತ್ಯ ಬಿದ್ದಾಗ ಬ್ಯಾಂಕ್‌ ಠೇವಣಿಗಳು ಲಭ್ಯವಾಗಲಿವೆ ಎನ್ನುವ ವಿಶ್ವಾಸ ಇಟ್ಟುಕೊಳ್ಳುವಂತೆಯೂ ಹೇಳಿದ್ದಾರೆ.

ಹಲವು ಮಧ್ಯಮ ಮತ್ತು ಸಣ್ಣ ಗಾತ್ರದ ಬ್ಯಾಂಕ್‌ಗಳ ಬಗ್ಗೆ ಅನಿಶ್ಚಿತ ಸ್ಥಿತಿ ಎದುರಾಗಿರುವುದು ಹೂಡಿಕೆದಾರರು ಅಮೆರಿಕದ ಬ್ಯಾಂಕಿಂಗ್‌ ವಲಯದ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗುವಂತೆ ಮಾಡಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಶೇ 2.08ರಷ್ಟು ಇಳಿಕೆ ಕಂಡರೆ, ಮಿಡ್‌ಕ್ಯಾಪ್‌ ಶೇ 1.82ರಷ್ಟು ಇಳಿಕೆಯಾಗಿದೆ. ಬ್ರೆಂಟ್ ಕಚ್ಚಾ ತೈಲ ದರ ಶೇ 1.79ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 81.30 ಡಾಲರ್‌ಗೆ ತಲುಪಿತು.

₹ 4.4 ಲಕ್ಷ ಕೋಟಿ ಸಂಪತ್ತು ನಷ್ಟ: ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನ ₹4.4 ಲಕ್ಷ ಕೋಟಿಯಷ್ಟು ಕರಗಿತು. ಇದರಿಂದಾಗಿ ದಿನದ ವಹಿವಾಟಿನ ಅಂತ್ಯದ ವೇಳೆಗೆ ಒಟ್ಟು ಸಂಪತ್ತು ಮೌಲ್ಯವು ₹ 262.99 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ಚಿನ್ನದ ದರ ₹ 970 ಹೆಚ್ಚಳ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ₹ 970ರಷ್ಟು ಹೆಚ್ಚಾಗಿ ₹ 56,550ರಂತೆ ಮಾರಾಟವಾಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹ 1,600ರಷ್ಟು ಹೆಚ್ಚಾಗಿ ₹63,820ಕ್ಕೆ ತಲುಪಿತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ.

ಅಮೆರಿಕದ ಎಸ್‌ವಿಬಿ ಬ್ಯಾಂಕ್‌ ದಿವಾಳಿ ಆಗಿರುವುದು ಮತ್ತು ಡಾಲರ್ ಮೌಲ್ಯ ಇಳಿಕೆ ಕಂಡಿರುವುದರಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿರುವ ಚಿನ್ನದ ಖರೀದಿಗೆ ಮುಂದಾದರು. ಇದರಿಂದಾಗಿ ಚಿನ್ನದ ದರ ಏರಿಕೆ ಕಂಡಿತು ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಉಪಾಧ್ಯಕ್ಷ ನವ್‌ನೀತ್‌ ದಮನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.