ADVERTISEMENT

ಹೊಸ ಎತ್ತರದತ್ತ ಸೆನ್ಸೆಕ್ಸ್‌, ನಿಫ್ಟಿ: ಷೇರುಪೇಟೆಯಲ್ಲಿ ಗೂಳಿ ಓಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಸೆಪ್ಟೆಂಬರ್ 2021, 8:57 IST
Last Updated 23 ಸೆಪ್ಟೆಂಬರ್ 2021, 8:57 IST
ಮುಂಬೈ ಷೇರುಪೇಟೆ ಕಟ್ಟಡದ ಹೊರನೋಟ
ಮುಂಬೈ ಷೇರುಪೇಟೆ ಕಟ್ಟಡದ ಹೊರನೋಟ   

ಮುಂಬೈ: ಗುರುವಾರ ಮಧ್ಯಾಹ್ನದವರೆಗೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 750ಕ್ಕೂ ಹೆಚ್ಚು ಅಂಶಗಳು ಏರಿಕೆ ಕಂಡಿದ್ದು, 59,677 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಸೆನ್ಸೆಕ್ಸ್‌ ಶೇ 1.27ರಷ್ಟು ಹೆಚ್ಚಳ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 219 ಅಂಶ ಏರಿಕೆಯಾಗಿ 17,765 ಅಂಶಗಳಲ್ಲಿ ವಹಿವಾಟು ನಡೆದಿದೆ. ಈ ಮೂಲಕ ನಿಫ್ಟಿ ಮತ್ತು ಸೆನ್ಸೆಕ್ಸ್‌ ಹೊಸ ಎತ್ತರ ದಾಖಲಿಸಿವೆ.

ಬಜಾಜ್‌ ಫಿನ್‌ಸರ್ವ್‌, ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಕೊಟಾಕ್‌ ಬ್ಯಾಂಕ್‌ ಸೇರಿದಂತೆ ಬಹುತೇಕ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಬೆಲೆ ಹೆಚ್ಚಳವಾಗಿದೆ. ಷೇರುಪೇಟೆಯಲ್ಲಿ ಗೂಳಿ ಓಟದ ನಡುವೆಯೂ ಟೆಕ್‌ ಮಹೀಂದ್ರಾ ಷೇರು ಇಳಿಮುಖವಾಗಿದೆ.

ADVERTISEMENT

ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್‌ 77.94 ಅಂಶ ಕಡಿಮೆಯಾಗಿ 58,927.33 ಅಂಶಗಳಲ್ಲಿ ವಹಿವಾಟು ಮುಗಿದಿತ್ತು. ನಿಫ್ಟಿ 15.35 ಅಂಶ ಇಳಿಕೆಯಾಗಿ 17,546.65 ಅಂಶಗಳಲ್ಲಿ ಮುಕ್ತಾಯವಾಗಿತ್ತು. ಷೇರುಪೇಟೆಯ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,943.26 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

ಅಮೆರಿಕ ಷೇರುಪೇಟೆಯ ವಹಿವಾಟು ಮುಕ್ತಾಯವು ಸಕಾರಾತ್ಮವಾಗಿದ್ದುದೂ ಸಹ ದೇಶೀಯ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.