ADVERTISEMENT

ಟ್ರಂಪ್ ಸುಂಕ ಏರಿಕೆ: ಐಟಿ, ಟೆಕ್ ಷೇರುಗಳ ಮಾರಾಟ ಭರಾಟೆ; ಷೇರುಪೇಟೆ ಕುಸಿತ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 11:29 IST
Last Updated 3 ಏಪ್ರಿಲ್ 2025, 11:29 IST
<div class="paragraphs"><p> ಷೇರುಪೇಟೆ</p></div>

ಷೇರುಪೇಟೆ

   

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಸೇರಿದಂತೆ 60 ದೇಶಗಳ ಮೇಲಿನ ಪ್ರತಿ ಸುಂಕಗಳನ್ನು ಪ್ರಕಟಿಸಿದ್ದರಿಂದ ಐಟಿ ಮತ್ತು ಟೆಕ್ ಷೇರುಗಳಲ್ಲಿನ ಮಾರಾಟ ಭರಾಟೆಯಿಂದಾಗಿ ದೇಶೀಯ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರ ಕುಸಿತ ಕಂಡವು.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 322.08 ಅಂಶಗಳಷ್ಟು ಕುಸಿದು 76,295ರಲ್ಲಿ ಮುಕ್ತಾಯಗೊಂಡಿತು. ದಿನದ ವಹಿವಾಟಿನ ಅವಧಿಯಲ್ಲಿ 809.89 ಅಂಶಗಳಷ್ಟು ಕುಸಿದು 75,807ರ ದಿನದ ಕನಿಷ್ಠ ಮಟ್ಟವನ್ನು ತಲುಪಿತ್ತು. ಆದರೆ, ಫಾರ್ಮಾ ಷೇರುಗಳು ಗಳಿಕೆ ಕಂಡಿದ್ದರಿಂದ ನಷ್ಟದಿಂದ ಚೇತರಿಸಿಕೊಂಡಿತು.

ADVERTISEMENT

ಎನ್‌ಎಸ್‌ಇ ನಿಫ್ಟಿ 82.25 ಅಂಶಗಳಷ್ಟು ಕುಸಿದು 23,250.10 ಕ್ಕೆ ಸ್ಥಿರವಾಯಿತು. ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕವು 186.55 ಅಂಶಗಳಷ್ಟು ಕುಸಿದು 23,145ಕ್ಕೆ ತಲುಪಿತ್ತು.

ಅಮೆರಿಕದಿಂದ ಸುಂಕ ಘೋಷಣೆಗಳಿಗೆ ಪ್ರತಿಕ್ರಿಯೆಯಾಗಿ ನಿಫ್ಟಿ ಸೂಚ್ಯಂಕವು ಕುಸಿತದೊಂದಿಗೆ ಆರಂಭವಾಯಿತು. ಆದರೆ, ಆಯ್ದ ಹೆವಿವೇಯ್ಟ್ ಷೇರುಗಳಲ್ಲಿನ ಸ್ಥಿತಿಸ್ಥಾಪಕತ್ವದಿಂದಾಗಿ ಸ್ವಲ್ಪ ಚೇತರಿಕೆ ಕಂಡಿತು. ಇದು ಆರಂಭಿಕ ವಹಿವಾಟುಗಳ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಎಸ್‌ವಿಪಿ ಅಜಿತ್ ಮಿಶ್ರಾ ಹೇಳಿದ್ದಾರೆ.

ಸೆನ್ಸೆಕ್ಸ್ ಪಟ್ಟಿಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಇನ್ಫೊಸಿಸ್, ಟಾಟಾ ಮೋಟರ್ಸ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ಭಾರ್ತಿ ಏರ್‌ಟೆಲ್ ಮತ್ತು ಮಾರುತಿ ಸುಜುಕಿ ಇಂಡಿಯಾ, ಟಾಟಾ ಸ್ಟೀಲ್ ಪ್ರಮುಖವಾಗಿ ನಷ್ಟ ಅನುಭವಿಸಿವೆ.

ಪವರ್‌ಗ್ರಿಡ್, ಸನ್ ಫಾರ್ಮಾಸ್ಯುಟಿಕಲ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ, ಟೈಟನ್, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರಯಗಳು ಲಾಭ ಗಳಿಸಿದವು.

ಬಿಎಸ್‌ಇಯಲ್ಲಿ 2,809 ಷೇರುಗಳು ಲಾಭ ಗಳಿಸಿದರೆ, 1,175 ಷೇರುಗಳು ನಷ್ಟ ಕಂಡವು. 139 ಷೇರುಗಳು ಸ್ಥಿರವಾಗಿದ್ದರಿಂದ ಮಾರುಕಟ್ಟೆ ಅಧಿಕ ಕುಸಿತಕ್ಕೆ ಒಳಗಾಗಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.