ADVERTISEMENT

ಕರಡಿ ಕುಣಿತಕ್ಕೆ ನಲುಗಿದ ಷೇರುಪೇಟೆ

ಕೃಷಿ ಕಾಯ್ದೆ ಹಿಂಪಡೆಯುವ ‌ನಿರ್ಧಾರ, ಪೇಟಿಎಂ ಷೇರು ಮೌಲ್ಯ ಇಳಿಕೆ ಪರಿಣಾಮ

ಪಿಟಿಐ
Published 22 ನವೆಂಬರ್ 2021, 14:40 IST
Last Updated 22 ನವೆಂಬರ್ 2021, 14:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಸೋಮವಾರ ಕರಡಿ ಕುಣಿತ ಜೋರಾಗಿತ್ತು. ಸೆನ್ಸೆಕ್ಸ್‌ 1,171 ಅಂಶಗಳ ಕುಸಿತ ಕಂಡು 58,465 ಅಂಶಗಳಿಗೆ ತಲುಪಿತು. ಏಳು ತಿಂಗಳ ಅವಧಿಯಲ್ಲಿ ಒಂದು ದಿನದ ವಹಿವಾಟಿನಲ್ಲಿ ಸೂಚ್ಯಂಕವು ಕಂಡಿರುವ ಗರಿಷ್ಠ ಕುಸಿತ ಇದು. ಈ ಕುಸಿತದ ಕಾರಣದಿಂದಾಗಿ ಸೆನ್ಸೆಕ್ಸ್ ಎರಡು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಘೋಷಣೆ ಆದ ಬಳಿಕ ಕೇಂದ್ರ ಸರ್ಕಾರದ ಸುಧಾರಣಾ ಕ್ರಮಗಳ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಮೂಡಿದೆ. ಇದರ ಜೊತೆಗೆ ದೇಶದ ಅತಿದೊಡ್ಡ ಹಣಕಾಸು ತಂತ್ರಜ್ಞಾನ ಕಂಪನಿ ‘ಪೇಟಿಎಂ’ನ ಷೇರು ಮೌಲ್ಯವು ಇಳಿಕೆ ಕಂಡಿರುವುದು ಷೇರುಪೇಟೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 348 ಅಂಶ ಇಳಿಕೆ ಕಂಡು 17,416 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಸೆಪ್ಟಂಬರ್‌ 20ರ ನಂತರದ ಕನಿಷ್ಠ ಮಟ್ಟ ಇದಾಗಿದೆ. ಬಜಾಜ್‌ ಫೈನಾನ್ಸ್‌, ಬಜಾಜ್‌ ಫಿನ್‌ಸರ್ವ್‌, ರಿಲಯನ್ಸ್ ಇಂಡಸ್ಟ್ರೀಸ್‌, ಎನ್‌ಟಿಪಿಸಿ, ಟೈಟನ್‌ ಮತ್ತು ಎಸ್‌ಬಿಐ ಷೇರುಗಳು ಶೇ 5.74ರವರೆಗೂ ಇಳಿಕೆ ಕಂಡವು.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಮೌಲ್ಯವು ಶೇ 4ರಷ್ಟು ಇಳಿಕೆ ಕಂಡಿದೆ. ಕಂಪನಿಯು ತನ್ನ ತೈಲ ಸಂಸ್ಕರಣೆ ಮತ್ತು ಪೆಟ್ರೊಕೆಮಿಕಲ್‌ ವಹಿವಾಟಿನ ಶೇ 20ರಷ್ಟು ಷೇರುಗಳನ್ನು ಸೌದಿ ಆರಾಮ್ಕೊ ಕಂಪನಿಗೆ ಮಾರಾಟ ಮಾಡುವ ಪ್ರಸ್ತಾವ ಕೈಬಿಟ್ಟಿರುವುದು ಷೇರುಗಳ ಮೌಲ್ಯ ಇಳಿಕೆಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ. ಇದರ ಪರಿಣಾಮವಾಗಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ₹ 69,364 ಕೋಟಿಗಳಷ್ಟು ಕರಗಿ, ಒಟ್ಟಾರೆ ಬಂಡವಾಳ ಮೌಲ್ಯವು ₹ 14.99 ಲಕ್ಷ ಕೋಟಿಗೆ ತಲುಪಿದೆ.

ದೇಶದ ಅತಿದೊಡ್ಡ, ಹೊಸ ಪೀಳಿಗೆಯ ಫಿನ್‌ಟೆಕ್‌ ಕಂಪನಿ ಪೇಟಿಎಂನ ಷೇರುಪೇಟೆಯ ವಹಿವಾಟು ಮಂದಗತಿಯಲ್ಲಿ ಆರಂಭ ಆಗಿರುವುದು ಹಾಗೂ ಷೇರು ಮೌಲ್ಯ ಇಳಿಕೆ ಕಾಣುತ್ತಿರುವುದು ದೇಶಿ ಷೇರುಪೇಟೆ ಮೇಲೆ ತೀವ್ರ ಒತ್ತಡ ಉಂಟುಮಾಡುತ್ತಿದೆ. ಇದು ಸಣ್ಣ ಹೂಡಿಕೆದಾರರಿಂದ ಷೇರುಪೇಟೆಗೆ ಬರುವ ಬಂಡವಾಳ ಒಳಹರಿವಿನ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪೇಟಿಎಂ ಷೇರು ಮೌಲ್ಯ ಇಳಿಕೆ: ಪೇಟಿಎಂ ಕಂಪನಿಯು ಷೇರು ಮೌಲ್ಯವುಬಿಎಸ್‌ಇನಲ್ಲಿ ಸೋಮವಾರ ಶೇ 13ರವರೆಗೆ ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 1,360.30ಕ್ಕೆ ತಲುಪಿತು.

ಸೂಚ್ಯಂಕ ಇಳಿಕೆಗೆ ಕಾರಣಗಳು

* ಮೂರು ಕೃಷಿ ಕಾಯ್ದೆ ಹಿಂದಕ್ಕೆ ಪಡೆಯುವ ನಿರ್ಧಾರ

* ಪೇಟಿಎಂ ಷೇರು ಮೌಲ್ಯ ಇಳಿಕೆ

* ವಿದೇಶಿ ಬಂಡವಾಳ ಹೊರಹರಿವು

***

ಮುಖ್ಯಾಂಶಗಳು

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕ ಶೇ 2.96ರವರೆಗೆ ಇಳಿಕೆ

ಅಮೆರಿಕದ ಡಾಲರ್‌ ಎದುರು 9 ಪೈಸೆ ಇಳಿಕೆ ಕಂಡು ರೂಪಾಯಿ ಮೌಲ್ಯ

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.35ರಷ್ಟು ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.