ADVERTISEMENT

ಕೋವಿಡ್‌–19 ಲಸಿಕೆ ಭರವಸೆಯಲ್ಲಿ ಷೇರುಪೇಟೆ: 45,930 ಅಂಶ ದಾಟಿದ ಸೆನ್ಸೆಕ್ಸ್

ಹೊಸ ದಾಖಲೆ

ಏಜೆನ್ಸೀಸ್
Published 9 ಡಿಸೆಂಬರ್ 2020, 6:00 IST
Last Updated 9 ಡಿಸೆಂಬರ್ 2020, 6:00 IST
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ
ಮುಂಬೈ ಷೇರುಪೇಟೆ–ಸಾಂದರ್ಭಿಕ ಚಿತ್ರ   

ಮುಂಬೈ: ದೇಶದಲ್ಲಿ ಕೋವಿಡ್‌–19 ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಗುವ ಭರವಸೆ ವ್ಯಕ್ತವಾಗಿರುವ ಬೆನ್ನಲ್ಲೇ ದೇಶೀಯ ಷೇರುಪೇಟೆಯಲ್ಲಿ ಸೂಚ್ಯಂಕ ಹೊಸ ಎತ್ತರ ತಲುಪಿದೆ. ವಿದೇಶಿ ಹೂಡಿಕೆಯ ಹರಿವು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ದಾಖಲಾಗಿರುವುದು ಭಾರತದ ಷೇರುಪೇಟೆಯ ಮೇಲೆ ಪ್ರಭಾವ ಬೀರಿದೆ.

ಬುಧವಾರ ವಹಿವಾಟು ಆರಂಭದಲ್ಲಿಯೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 280ಕ್ಕೂ ಹೆಚ್ಚು ಅಂಶ ಏರಿಕೆಯೊಂದಿಗೆ 45,900 ಅಂಶ ದಾಟಿತು. ಈ ಮೂಲಕ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಹೊಸ ಎತ್ತರ ತಲುಪಿದಂತಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 78 ಅಂಶ ಏರಿಕೆಯೊಂದಿಗೆ 13,470 ಅಂಶ ದಾಟಿತು. ಇದರೊಂದಿಗೆ ನಿಫ್ಟಿ ಸಹ ಸಾರ್ವಕಾಲಿಕ ಸೂಚ್ಯಂಕ ದಾಖಲೆ ಮಟ್ಟವನ್ನು ಮುಟ್ಟಿದೆ.

ಸೆನ್ಸೆಕ್ಸ್‌ ಷೇರುಪಟ್ಟಿಯಲ್ಲಿ ಐಟಿಸಿ ಷೇರು ಸುಮಾರು ಶೇ 4.80ರಷ್ಟು ಚೇತರಿಕೆಯೊಂದಿಗೆ ಅತಿ ಹೆಚ್ಚು ಗಳಿಕೆ ದಾಖಲಿಸಿದೆ. ಇದರೊಂದಿಗೆ ಒಎನ್‌ಜಿಸಿ, ಟಿಸಿಎಸ್‌, ಸನ್‌ ಫಾರ್ಮಾ, ಏಷಿಯನ್‌ ಪೇಂಟ್ಸ್‌, ಎಚ್‌ಸಿಎಲ್‌ ಟೆಕ್‌, ಬಜಾಜ್‌ ಫಿನ್‌ಸರ್ವ್‌ ಹಾಗೂ ಎನ್‌ಟಿಪಿಸಿ ಷೇರು ಮೌಲ್ಯದಲ್ಲಿಯೂ ಹೆಚ್ಚಳವಾಗಿದೆ. ಆದರೆ, ಮಾರುತಿ ಕಂಪನಿ ಷೇರು ಬೆಲೆ ಇಳಿಮುಖವಾಗಿದೆ.

ADVERTISEMENT

ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇ 1.44, ಎಚ್‌ಡಿಎಫ್‌ಸಿ ಬ್ಯಾಂಕ್‌ ಶೇ 1.14ರಷ್ಟು ಹೆಚ್ಚಳ ಕಂಡಿವೆ. ಇನ್ನೂ ಇನ್ಫೊಸಿಸ್‌, ಟಿಸಿಎಸ್‌ ಕಂಪನಿಗಳ ಷೇರು ಬೆಲೆಯಲ್ಲಿ ಅಲ್ಪ ಮಟ್ಟದ ಏರಿಕೆಯಾಗಿದೆ. ಬೆಳಿಗ್ಗೆ 11:15ರ ವರೆಗೂ ಸೆನ್ಸೆಕ್ಸ್‌ 326.20 ಅಂಶ ಹೆಚ್ಚಳದೊಂದಿಗೆ 45,934.71 ಅಂಶ ಹಾಗೂ ನಿಫ್ಟಿ 94.50 ಅಂಶ ಏರಿಕೆಯಾಗಿ 13,487.45 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಷೇರುಪೇಟೆ ಮಾಹಿತಿ ಪ್ರಕಾರ, ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಮಂಗಳವಾರ ₹2,909.60 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್‌ 181.54 ಅಂಶ ಹಾಗೂ ನಿಫ್ಟಿ 37.20 ಅಂಶಗಳಷ್ಟು ಏರಿಕೆ ದಾಖಲಿಸಿದ್ದವು.

ಕೋವಿಡ್‌–19 ಲಸಿಕೆ ಅನುಮತಿಗೆ ಸಂಬಂಧಿಸಿದಂತೆ ಆಗಿರುವ ಬೆಳವಣಿಗೆಗಳ ಪರಿಣಾಮ ಅಮೆರಿಕದ ಷೇರುಪೇಟೆಯಲ್ಲೂ ಸಕಾರಾತ್ಮ ವಹಿವಾಟು ದಾಖಲಾಗಿದೆ. ಏಷ್ಯಾ ವಲಯದಲ್ಲಿ ಶಾಂಘೈ, ಹಾಂಕಾಂಗ್‌, ಸೋಲ್‌ ಹಾಗೂ ಟೋಕಿಯೊ ಷೇರುಪೇಟೆಗಳಲ್ಲಿಯೂ ಚೇತರಿಕೆ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.