ADVERTISEMENT

ಷೇರುಪೇಟೆ: ಸೆನ್ಸೆಕ್ಸ್ 1,100 ಅಂಶ ಏರಿಕೆ, ನಿಫ್ಟಿ 16,550ರಲ್ಲಿ ವಹಿವಾಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2022, 5:30 IST
Last Updated 25 ಫೆಬ್ರುವರಿ 2022, 5:30 IST
   

ಮುಂಬೈ: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ಬಳಿಕ ಗುರುವಾರ ಕುಸಿದಿದ್ದ ದೇಶೀಯ ಷೇರು ಮಾರುಕಟ್ಟೆ ಶುಕ್ರವಾರ ಚೇತರಿಕೆ ಕಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಹೇರಿದ ಬಳಿಕ ಏಷ್ಯಾದ ಷೇರುಪೇಟೆ ಉತ್ತಮ ವಹಿವಾಟು ನಡೆಸಿದೆ.

ಬೆಳಗ್ಗೆ 9:21ರ ವೇಳೆಗೆ, ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 1,135 ಅಂಶಗಳಷ್ಟು(ಶೇಕಡ 2.08) ಏರಿಕೆ ಕಂಡು 55,665ರಲ್ಲಿ ವಹಿವಾಟು ನಡೆಸಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 325 ಅಂಶಗಳಷ್ಟು ಏರಿಕೆ ಕಂಡು 16,573ರಲ್ಲಿ ವಹಿವಾಟು ನಡೆಸಿತು.

ಮಿಡ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಸಹ ಧನಾತ್ಮಕವಾಗಿದ್ದು, ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ 100 ಅಂಶಗಳಷ್ಟು ಮತ್ತು ಸ್ಮಾಲ್ ಕ್ಯಾಪ್ ಷೇರು ಸೂಚ್ಯಂಕ ಶೇಕಡ 4.61ರಷ್ಟು ಚೇತರಿಕೆ ಕಂಡಿವೆ.

ADVERTISEMENT

ಎನ್‌ಎಸ್‌ಇಯ ಎಲ್ಲ 15 ವಲಯಗಳ ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಮೆಟಲ್ ಷೇರುಗಳು ಉತ್ತಮವಾಗಿವೆ.

ಟಾಟಾ ಮೋಟರ್ಸ್ ನಿಫ್ಟಿಯಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡ ಷೇರು. ಶೇಕಡ 6.73 ರಷ್ಟು ಏರಿಕೆಯಾಗಿ ₹ 456.75 ಕ್ಕೆ ತಲುಪಿತ್ತು. ಇಂಡಸ್‌ಇಂಡ್ ಬ್ಯಾಂಕ್, ಯುಪಿಎಲ್, ಅದಾನಿ ಪೋರ್ಟ್ಸ್ ಮತ್ತು ಟಾಟಾ ಸ್ಟೀಲ್ ಸಹ ಗಳಿಕೆ ಕಂಡಿವೆ.

ಬಿಎಸ್‌ಇಯಲ್ಲಿ, 2,189 ಷೇರುಗಳು ಮುನ್ನಡೆಯುತ್ತಿದ್ದರೆ, 549 ಷೇರುಗಳು ಕುಸಿತ ಕಂಡಿದ್ದು, ಮಾರುಕಟ್ಟೆ ವಹಿವಾಟು ಪ್ರಬಲವಾಗಿತ್ತು.

ಹೂಡಿಕೆದಾರರ ಸಂಪತ್ತು ಸುಮಾರು ₹ 6.60 ಲಕ್ಷ ಕೋಟಿಯಷ್ಟು ಹೆಚ್ಚಾಗಿ ₹ 2,48,84,600 ಕ್ಕೆ ತಲುಪಿದೆ.

ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ, ವಿಪ್ರೊ, ಮಹೀಂದ್ರಾ ಅಂಡ್ ಮಹೀಂದ್ರಾ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಅತ್ಯಂತ ಹೆಚ್ಚು ಗಳಿಕೆ ಕಂಡ ಷೇರುಗಳಾಗಿದ್ದು, ಅವು ಶೇಕಡ 4.12 ರಷ್ಟು ಜಿಗಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.