ಮುಂಬೈ: ಗುರುವಾರದ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಪೇಟೆಯ ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆಯ ಹೊಸ ಎತ್ತರಕ್ಕೆ ಮುಟ್ಟಿವೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 388.15 ಅಂಶಗಳಷ್ಟು ಜಿಗಿದು 82,129.49ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 127.15 ಅಂಶಗಳಷ್ಟು ಏರಿಕೆ ಕಂಡು ದಾಖಲೆಯ 25,000 ಅಂಶಗಳ ಹಂತ ಮೀರಿ 25,078.30ರಲ್ಲಿ ವಹಿವಾಟು ಆರಂಭಿಸಿತು.
ಅಮೆರಿಕದ ಫೆಡರಲ್ ಬ್ಯಾಂಕ್ ಸೆಪ್ಟೆಂಬರ್‌ನಲ್ಲಿ ಬಡ್ಡಿ ಇಳಿಕೆಯ ಸಾಧ್ಯತೆ ಹಿನ್ನೆಲೆಯಲ್ಲಿ ಷೇರುಪೇಟೆ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೂನ್ ತ್ರೈಮಾಸಿಕ ವರದಿ ಬಿಡುಗಡೆ ಮಾಡಿರುವ ಸೆನ್ಸೆಕ್ಸ್ ವ್ಯಾಪ್ತಿಯ ಮಾರುತಿ ಷೇರುಗಳ ಬೆಲೆ ಶೇಕಡ 2.93ರಷ್ಟು ಏರಿಕೆ ಕಂಡಿವೆ. ಅದಾನಿ ಪೋರ್ಟ್ಸ್, ಪವರ್ ಗ್ರಿಡ್, ಜೆಎಸ್‌ಡಬ್ಲ್ಯು ಸ್ಟೀಲ್ಸ್, ಟಾಟಾ ಸ್ಟೀಲ್ಸ್ ಲಾಭ ಗಳಿಸಿದ ಇತರೆ ಷೇರುಗಳಾಗಿವೆ.
ದೊಡ್ಡ ಸಂಸ್ಥೆಗಳ ಪೈಕಿ ಎಚ್‌ಡಿಎಫ್‌ಸಿ ಬ್ಯಾಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಷೇರುಗಳು ಸಹ ದಾಖಲೆಯ ಏರಿಕೆ ಕಂಡಿವೆ.
ಮಹೀಂದ್ರ ಅಂಡ್ ಮಹೀಂದ್ರ, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಟಿಸಿಎಸ್ ನಷ್ಟ ಅನುಭವಿಸಿವೆ.
ಏಷ್ಯಾದ ಷೇರುಪೇಟೆಗಳಾದ ಟೋಕಿಯೊ, ಶಾಂಘೈ, ಹಾಂಗ್‌ಕಾಂಗ್ ಇಳಿಕೆ ದಾಖಲಿಸಿದ್ದರೆ, ಸೋಲ್ ಷೇರುಪೇಟೆಯು ಏರಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.