ADVERTISEMENT

ಷೇರುಪೇಟೆಯಲ್ಲಿ ಗೂಳಿ ಓಟ; ಸೂಚ್ಯಂಕ 1075 ಅಂಶ ಜಿಗಿತ

ಐಟಿಸಿ ಷೇರು ಶೇ 9ರಷ್ಟು ಏರಿಕೆ

ಏಜೆನ್ಸೀಸ್
Published 23 ಸೆಪ್ಟೆಂಬರ್ 2019, 10:53 IST
Last Updated 23 ಸೆಪ್ಟೆಂಬರ್ 2019, 10:53 IST
   

ಮುಂಬೈ:ಆರ್ಥಿಕತೆಗೆ ಬಲ ತುಂಬಲು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಹಲವು ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಪರಿಣಾಮ ಶುಕ್ರವಾರ ಏರಿಕೆ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಸಹ ಓಟ ಮುಂದುವರಿಸಿವೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 1075 ಅಂಶಗಳಷ್ಟು ಜಿಗಿಯುವ ಮೂಲಕ ಸೆನ್ಸೆಕ್ಸ್‌ 39,090 ಅಂಶ ತಲುಪಿದೆ.ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 329 ಅಂಶ ಏರಿಕೆ ಮೂಲಕ 11,603 ಅಂಶಗಳಿಗೆ ತಲುಪಿದೆ.

ಐಟಿ ಮತ್ತು ಫಾರ್ಮಾ ವಲಯಗಳ ಷೇರುಗಳು ಇಳಿಕೆ ದಾಖಲಿಸಿವೆ. ಬ್ಯಾಂಕಿಂಗ್‌, ಆಟೊ, ಗ್ರಾಹಕ ಸರಕುಗಳ ಷೇರು ಏರಿಕೆ ಕಂಡಿವೆ. ಐಟಿಸಿ, ಎಲ್‌ಆ್ಯಂಡ್‌ಟಿ, ಇಂಡಸ್‌ಇಂಡ್‌ ಬ್ಯಾಂಕ್‌, ಬ್ರಿಟಾನಿಯಾ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಏಷಿಯನ್‌ ಪೇಂಟ್ಸ್‌ ಷೇರುಗಳಲ್ಲಿ ಶೇ 5 ರಿಂದ ಶೇ 8ರಷ್ಟು ಏರಿಕೆ ಕಂಡಿದೆ.

ಸೆಪ್ಟೆಂಬರ್ 20 ರಂದು ಷೇರುಪೇಟೆ 1921 ಅಂಶಗಳ ಏರಿಕೆ ಕಂಡಿರುವುದು ಎರಡನೇ ಅತಿ ಹೆಚ್ಚಿನ ಜಿಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.