ADVERTISEMENT

ಷೇರುಪೇಟೆ | ಜಾಗತಿಕ ಕುಸಿತ: ತತ್ತರಿಸಿದ ಸೆನ್ಸೆಕ್ಸ್, ನಿಫ್ಟಿ

ರಾಜೇಶ್‌ ಕುಮಾರ್‌ ಟಿ.ಆರ್‌
Published 12 ಜೂನ್ 2022, 19:45 IST
Last Updated 12 ಜೂನ್ 2022, 19:45 IST
   

ಸತತ ಮೂರು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕುಸಿತದ ಹಾದಿ ತುಳಿದಿವೆ. ಜೂನ್ 10ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಳಿಕೆ ಕಂಡಿವೆ. 54,303 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.63ರಷ್ಟು ತಗ್ಗಿದೆ. 16,201 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.31ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ, ಹಣದುಬ್ಬರ, ಬಡ್ಡಿ ದರ ಹೆಚ್ಚಳ, ತೈಲ ಬೆಲೆ ಏರಿಕೆಯ ಬಿಸಿ ಸೇರಿ ಹಲವು ಅಂಶಗಳು ಮಾರುಕಟ್ಟೆಗೆ ಪೆಟ್ಟು ಕೊಟ್ಟಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಿಡ್ ಕ್ಯಾಪ್ 100 ಸೂಚ್ಯಂಕ ಶೇ 1.60ರಷ್ಟು ಕುಸಿದಿದೆ. ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 2ರಷ್ಟು ಇಳಿಕೆಯಾಗಿದೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 2.64ರಷ್ಟು, ಲೋಹ ಸೂಚ್ಯಂಕ ಶೇ 2.42ರಷ್ಟು, ಬ್ಯಾಂಕ್ ಸೂಚ್ಯಂಕ ಶೇ 2.24ರಷ್ಟು ತಗ್ಗಿವೆ.

ಇಳಿಕೆ: ಶ್ರೀ ಸಿಮೆಂಟ್ಸ್ ಶೇ 7.07ರಷ್ಟು ಕುಸಿದಿದೆ. ಏಷ್ಯನ್ ಪೇಂಟ್ಸ್ ಶೇ 6.17ರಷ್ಟು ತಗ್ಗಿದೆ. ಬಜಾಜ್ ಫೈನಾನ್ಸ್ ಶೇ 5.98ರಷ್ಟು ಇಳಿದಿದೆ.

ADVERTISEMENT

ಮುನ್ನೋಟ: ಯುರೋಪಿನ ಕೇಂದ್ರಿಯ ಬ್ಯಾಂಕ್ ಮತ್ತು ಅಮೆರಿಕದ ಫೆಡರಲ್ ಬ್ಯಾಂಕ್ ಮುಂಬರುವ ದಿನಗಳಲ್ಲಿ ಕೈಗೊಳ್ಳಲಿರುವ ನಿರ್ಧಾರಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿವೆ. ರಷ್ಯಾ - ಉಕ್ರೇನ್ ಬಿಕ್ಕಟ್ಟು ಶಮನಗೊಳ್ಳದಿದ್ದರೆ ತೈಲ ಬೆಲೆ ಮತ್ತಷ್ಟು ಜಿಗಿಯುವ ಸಂಭವವಿದೆ.

ಚೀನಾದಲ್ಲಿ ಮತ್ತೆ ಕೋವಿಡ್ ಸಂಬಂಧಿತ ಲಾಕ್ ಡೌನ್‌ಗಳು ಜಾರಿಗೆ ಬರುತ್ತಿವೆ. ಇದರ ನಡುವೆ, ಜಾಗತಿಕವಾಗಿ ಆರ್ಥಿಕ ಹಿಂಜರಿತ ಎದುರಾಗುವ ಆತಂಕವೂ ಇದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಆಂತರಿಕ ಮೌಲ್ಯಕ್ಕಿಂತ ಹೆಚ್ಚು ಮೌಲ್ಯ ಪಡೆದುಕೊಂಡಿರುವ ಷೇರುಗಳಿಂದ ದೂರ ಉಳಿಯುವುದು ಒಳಿತು. ಉತ್ತಮ ವಹಿವಾಟು ಹೊಂದಿರುವ, ಕಡಿಮೆ ಮೌಲ್ಯಮಾಪನಹೊಂದಿರುವ ಷೇರುಗಳ ಮೇಲೆ ಅಳೆದು ತೂಗಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.