ADVERTISEMENT

ಸೆನ್ಸೆಕ್ಸ್‌ 685 ಅಂಶ ಜಿಗಿತ

ಪಿಟಿಐ
Published 14 ಅಕ್ಟೋಬರ್ 2022, 13:54 IST
Last Updated 14 ಅಕ್ಟೋಬರ್ 2022, 13:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಇನ್ಫೊಸಿಸ್‌, ಬ್ಯಾಂಕಿಂಗ್ ಮತ್ತು ಹಣಕಾಸು ಷೇರುಗಳ ಉತ್ತಮ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ವಹಿವಾಟಿನ ನಡುವಿನಲ್ಲಿ 1,200 ಅಂಶಗಳವರೆಗೆ ಏರಿಕೆ ಕಂಡಿತ್ತು. ಆ ಬಳಿಕ ತುಸು ನಷ್ಟಕ್ಕೆ ಒಳಗಾಯಿತು. ವಹಿವಾಟಿನ ಅಂತ್ಯದ ವೇಳೆಗೆ 685 ಅಂಶಗಳ ಗಳಿಕೆಯೊಂದಿಗೆ 57,929 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 171 ಅಂಶ ಏರಿಕೆ ಆಗಿ 17,186 ಅಂಶಗಳಿಗೆ ತಲುಪಿತು.

ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಕಂಪನಿಯ ನಿವ್ವಳ ಲಾಭವು ನಿರೀಕ್ಷೆಗಿಂತಲೂ ಹೆಚ್ಚು ಏರಿಕೆ ಕಂಡಿದೆ. ಹೀಗಾಗಿ ಸೆನ್ಸೆಕ್ಸ್‌ನಲ್ಲಿ ಇನ್ಫೊಸಿಸ್ ಷೇರು ಮೌಲ್ಯ ಶೇ 3.82ರಷ್ಟು ಏರಿಕೆ ಕಂಡಿತು.

ಮಧ್ಯಾಹ್ನದ ಬಳಿಕ ಹೂಡಿಕೆದಾರರು ಲಾಭ ಗಳಿಸಿಕೊಳ್ಳಲು ಮುಂದಾಗಿದ್ದರಿಂದ ಸೂಚ್ಯಂಕಗಳು ಆರಂಭದಲ್ಲಿ ಕಂಡಿದ್ದ ಏರಿಕೆಯಲ್ಲಿ ಒಂದಿಷ್ಟನ್ನು ಕಳೆದುಕೊಳ್ಳುವಂತೆ ಆಯಿತು. ಬ್ಯಾಂಕಿಂಗ್‌ ಮತ್ತು ಐ.ಟಿ. ಷೇರುಗಳ ಖರೀದಿ ಹೆಚ್ಚಿತ್ತು ಎಂದು ಹೆಮ್‌ ಸೆಕ್ಯುರಿಟೀಸ್‌ನ ನಿಧಿ ನಿರ್ವಾಹಕ ಮೋಹಿತ್‌ ನಿಗಮ್‌ ಹೇಳಿದ್ದಾರೆ.

ಐ.ಟಿ. ಸೂಚ್ಯಂಕ ಶೇ 1.72ರಷ್ಟು, ಬ್ಯಾಂಕಿಂಗ್ ಶೇ 1.71ರಷ್ಟು, ಹಣಕಾಸು ಸೇವೆಗಳು ಶೇ 1.60ರಷ್ಟು ಮತ್ತು ಟೆಕ್‌ ಶೇ 1.56ರಷ್ಟು ಏರಿಕೆ ಕಂಡವು.

ಏಷ್ಯಾದಲ್ಲಿ, ಸೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಷೇರುಗಳು ಗಳಿಕೆ ಕಂಡವು. ಯುರೋಪ್‌ನಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಬ್ರೆಂಟ್‌ ಕಚ್ಚಾ ತೈಲ ದರ ಶೇ 0.81ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 93.80 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.