ADVERTISEMENT

ನಾಲ್ಕನೆಯ ದಿನವೂ ಸೆನ್ಸೆಕ್ಸ್ ಏರಿಕೆ, ಬ್ಯಾಂಕ್ ಷೇರುಗಳಿಗೆ ಬೇಡಿಕೆ

ಪಿಟಿಐ
Published 6 ಅಕ್ಟೋಬರ್ 2020, 14:31 IST
Last Updated 6 ಅಕ್ಟೋಬರ್ 2020, 14:31 IST
   

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಸ್ಪತ್ರೆಯಿಂದ ಬಿಡುಗಡೆ ಆದ ಸುದ್ದಿಯು ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಆಶಾದಾಯಕ ವಾತಾವರಣ ಸೃಷ್ಟಿಸಿತು. ಇತ್ತ, ದೇಶಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆದಾರರು ಬ್ಯಾಂಕಿಂಗ್ ವಲಯದ ಷೇರುಗಳತ್ತ ಹೆಚ್ಚು ಆಕರ್ಷಿತರಾದರು. ಇದರ ಪರಿಣಾಮವಾಗಿ, ಸೆನ್ಸೆಕ್ಸ್ 600 ಅಂಶಗಳ ಏರಿಕೆ ದಾಖಲಿಸಿತು.

ಕಾರ್ಪೊರೇಟ್ ವಲಯದ ಎರಡನೆಯ ತ್ರೈಮಾಸಿಕದ ಫಲಿತಾಂಶವು ಉತ್ಸಾಹ ಮೂಡಿಸುವಂತೆ ಇರಲಿದೆ ಎಂಬ ನಿರೀಕ್ಷೆ ಕೂಡ ಹೂಡಿಕೆದಾರರ ಉತ್ಸಾಹವನ್ನು ಹೆಚ್ಚಿಸಿತು ಎಂದು ಷೇರು ವರ್ತಕರು ಹೇಳಿದ್ದಾರೆ. ಮಂಗಳವಾರದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 39,574ಕ್ಕೆ ತಲುಪಿತು. ನಿಫ್ಟಿ ಕೂಡ 159 ಅಂಶಗಳಷ್ಟು ಏರಿಕೆ ಕಂಡಿತು.

ಸೆನ್ಸೆಕ್ಸ್‌ನಲ್ಲಿ ಅತಿಹೆಚ್ಚಿನ ಏರಿಕೆ ಕಂಡಿದ್ದು ಎಚ್‌ಡಿಎಫ್‌ಸಿ ಷೇರುಗಳ ಮೌಲ್ಯ. ವ್ಯಕ್ತಿಗಳಿಗೆ ನೀಡುವ ಸಾಲದ ಪ್ರಮಾಣವು ಹಾಲಿ ಆರ್ಥಿಕ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ, ಹಿಂದಿನ ವರ್ಷದ ಇದೇ ತ್ರೈಮಾಸಿಕದ ಶೇಕಡ 95ರಷ್ಟಾಗಿದೆ ಎಂದು ಎಚ್‌ಡಿಎಫ್‌ಸಿ ಪ್ರಕಟಿಸಿದ ನಂತರ, ಅದರ ಷೇರು ಮೌಲ್ಯವು ಶೇಕಡ 8.35ರಷ್ಟು ಏರಿಕೆ ದಾಖಲಿಸಿತು.

ADVERTISEMENT

ಇಂಡಸ್‌ ಇಂಡ್ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಅಲ್ಟ್ರಾಟೆಕ್‌ ಸಿಮೆಂಟ್‌ ಷೇರುಗಳ ಮೌಲ್ಯದಲ್ಲಿ ಕೂಡ ಹೆಚ್ಚಳ ಆಗಿದೆ. ಟಾಟಾ ಸ್ಟೀಲ್, ನೆಸ್ಲೆ ಇಂಡಿಯಾ, ಲ್ಯಾರ್ಸನ್ ಆ್ಯಂಡ್ ಟೂಬ್ರೊ, ಸನ್ ಫಾರ್ಮಾ, ಎನ್‌ಟಿಪಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಮೌಲ್ಯದಲ್ಲಿ ತುಸು ಇಳಿಕೆ ಆಗಿದೆ.

‘ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಕಂಪನಿಗಳು ಒಳ್ಳೆಯ ಫಲಿತಾಂಶ ಪ್ರಕಟಿಸಲಿವೆ ಎಂಬ ನಿರೀಕ್ಷೆ, ದೇಶಿ ಆರ್ಥಿಕ ಸೂಚ್ಯಂಕಗಳು ಒಳ್ಳೆಯ ಸಮಾಚಾರ ನೀಡುತ್ತಿರುವುದು ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬರುತ್ತಿರುವುದರ ಪರಿಣಾಮವಾಗಿಷೇರು ಮಾರುಕಟ್ಟೆಗಳಲ್ಲಿ ಉತ್ಸಾಹದ ವಹಿವಾಟು ನಡೆಯುತ್ತಿದೆ. ಮುಂದಿನ ವಾರಗಳಲ್ಲಿ ಐ.ಟಿ. ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಗಮನ ಇರಲಿದೆ’ ಎಂದು ಜಿಯೊಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

‘ಬ್ಯಾಂಕುಗಳಲ್ಲಿ ಠೇವಣಿ ಮತ್ತು ಸಾಲದ ನೀಡಿಕೆ ಪ್ರಮಾಣದಲ್ಲಿ ಆರೋಗ್ಯಕರ ಬೆಳವಣಿಗೆ ಕಾಣುತ್ತಿದೆ’ ಎಂದರು. ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್ ಸೂಚ್ಯಂಕಗಳು ಕೂಡ ಏರಿಕೆ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.