ಮುಂಬೈ: ಲೋಹ, ವಾಹನ ಕಂಪನಿಗಳು ಮತ್ತು ಔಷಧ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 304 ಅಂಶ ಏರಿಕೆಯಾಗಿ, 80,539ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 131 ಅಂಶ ಹೆಚ್ಚಳವಾಗಿ, 24,619ಕ್ಕೆ ಕೊನೆಗೊಂಡಿದೆ.
ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಎಂಟು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಚೀನಾ ಮೇಲೆ ಸುಂಕ ವಿಧಿಸುವುದಕ್ಕೆ ಗಡುವನ್ನು ಅಮೆರಿಕವು ವಿಸ್ತರಿಸಿರುವುದು ಮತ್ತು ತೈಲ ದರ ಇಳಿಕೆಯು ಸೂಚ್ಯಂಕಗಳ ಏರಿಕೆಗೆ ಕಾರಣ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಆಗಸ್ಟ್ 15ರಂದು ಭೇಟಿ ಆಗಲಿದ್ದಾರೆ. ದೇಶದ ಹೂಡಿಕೆದಾರರು ಇದರತ್ತ ಚಿತ್ತ ನೆಟ್ಟಿದ್ದಾರೆ. ಅಲ್ಲದೆ, ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆ ಇರುವುದು ಸಹ ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ ಎಂದು ಹೇಳಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.36ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರೆಲ್ ತೈಲದ ಬೆಲೆಯು 65.88 ಡಾಲರ್ ಆಗಿದೆ. ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,398 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.