ADVERTISEMENT

ಐಟಿ ಷೇರುಗಳ ಮಾರಾಟ ಭರಾಟೆ, ಟ್ರಂಪ್ ಮತ್ತೊಂದು ಸುಂಕ ಬೆದರಿಕೆ: ಷೇರುಪೇಟೆ ತಲ್ಲಣ

ಪಿಟಿಐ
Published 24 ಫೆಬ್ರುವರಿ 2026, 5:22 IST
Last Updated 24 ಫೆಬ್ರುವರಿ 2026, 5:22 IST
ಷೇರುಪೇಟೆ
ಷೇರುಪೇಟೆ   

ಮುಂಬೈ: ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ 1 ರಷ್ಟು ಕುಸಿತ ಕಂಡವು. ಎಐ ಬೆಳವಣಿಗೆ ಆತಂಕಗಳ ನಡುವೆ ಐಟಿ ಷೇರುಗಳಲ್ಲಿ ತೀವ್ರ ಮಾರಾಟ ಕುಸಿತಕ್ಕೆ ಕಾರಣವಾಗಿದೆ.

ಇದಲ್ಲದೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಸುಂಕದ ಹೇಳಿಕೆಗಳ ನಂತರ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ವ್ಯಾಪಾರದ ಬಗ್ಗೆ ಮತ್ತೆ ಕಳವಳಗಳು ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 813.13 ಅಂಶಗಳಷ್ಟು, ಅಂದರೆ ಶೇ 0.97 ರಷ್ಟು ಕುಸಿದು 82,481.53ರಲ್ಲಿ ವಹಿವಾಟು ಆರಂಭಿಸಿತ್ತು. 50-ಷೇರುಗಳ ಎನ್‌ಎಸ್‌ಇ ನಿಫ್ಟಿ 230.15 ಅಂಶ ಅಥವಾ ಶೇ 0.89 ರಷ್ಟು ಕುಸಿದು 25,482.85ರಲ್ಲಿ ವಹಿವಾಟು ಆರಂಭಿಸಿತ್ತು.

ADVERTISEMENT

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ ಎಟರ್ನಲ್ ಶೇ 3.82ರಷ್ಟು ಕುಸಿದಿದ್ದು, ನಂತರದ ಸ್ಥಾನದಲ್ಲಿ ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೊಸಿಸ್, ಟೆಕ್ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಟ್ರೆಂಟ್, ಅದಾನಿ ಪೋರ್ಟ್ಸ್, ಐಟಿಸಿ ಮತ್ತು ಟೈಟಾನ್ ಷೇರುಗಳು ಇವೆ.

ಮತ್ತೊಂದೆಡೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಪವರ್‌ಗ್ರಿಡ್, ಏಷ್ಯನ್ ಪೇಂಟ್ಸ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಮಾಡಲಿರುವ ಭಾಷಣದ ಬಗ್ಗೆ ಜಾಗತಿಕವಾಗಿ ಹೂಡಿಕೆದಾರರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಐರೋಪ್ಯ ಒಕ್ಕೂಟ, ಬ್ರಿಟನ್‌ನಂತಹ ಜಾಗತಿಕ ಮಿತ್ರರಾಷ್ಟ್ರಗಳು ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದಗಳ ಮರುಪರಾಮರ್ಶೆಗೆ ಮುಂದಾಗಿವೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಭಾರಿ ಸುಂಕ ಏರಿಕೆಯ ಬೆದರಿಕೆ ಹಾಕಿದ್ದಾರೆ. ಇದೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎನ್ನುತ್ತಾರೆ ತಜ್ಞರು. ಭಾರತವೂ ಸಹ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತಾದ ಮಾತುಕತೆಗೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಿತ್ತು.

ಏಷ್ಯಾದ ಮಾರುಕಟ್ಟೆಗಳ ಪೈಕಿ ದಕ್ಷಿಣ ಕೊರಿಯಾದ ಕಾಸ್ಪಿ, ಶಾಂಘೈನ ಎಸ್‌ಎಸ್‌ಇ ಕಾಂಪೋಸಿಟ್ ಇಂಡೆಕ್ಸ್ ಮತ್ತು ಜಪಾನ್‌ನ ನಿಕ್ಕಿ 225 ಬೆಂಚ್‌ಮಾರ್ಕ್‌ಗಳು ಏರಿಕೆಯೊಂದಿಗೆ ವಹಿವಾಟು ನಡೆಸುತ್ತಿದ್ದರೆ, ಹಾಂಗ್ ಕಾಂಗ್‌ನ ಹ್ಯಾಂಗ್ ಇಳಿಕೆ ಕಂಡಿದೆ.

ಸೋಮವಾರದ ವಹಿವಾಟಿನಲ್ಲಿ ಅಮೆರಿಕ ಷೇರು ಮಾರುಕಟ್ಟೆಯಲ್ಲಿ ಸುಮಾರು ಶೇ 2ರಷ್ಟು ಕುಸಿತದೊಂದಿಗೆ ಕೊನೆಗೊಂಡಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐಗಳು) ಸೋಮವಾರ ₹3,483.70 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹1,292.24 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ದತ್ತಾಂಶಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.