ADVERTISEMENT

ಪೇಟೆಯಲ್ಲಿ ತಗ್ಗದ ಬಜೆಟ್‌ ಪ್ರಭಾವ

ಪಿಟಿಐ
Published 13 ಜುಲೈ 2019, 19:45 IST
Last Updated 13 ಜುಲೈ 2019, 19:45 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಬಜೆಟ್‌ ಮೂಡಿಸಿರುವ ಆತಂಕ ಕಡಿಮೆಯಾದಂತೆ ಕಾಣುತ್ತಿಲ್ಲ. ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯಕಂಡಿದೆ.

ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ತೆರಿಗೆಗಳ ಬಗ್ಗೆ ಕಾರ್ಪೊರೇಟ್‌ ವಲಯ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಷೇರುಪೇಟೆಯಲ್ಲಿ ಸೂಚ್ಯಂಕಗಳ ಇಳಿಕೆಗೆ ಕಾರಣವಾಗುತ್ತಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 777 ಅಂಶ ಇಳಿಕೆ ಕಂಡು 38,736 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 258 ಅಂಶ ಇಳಿಕೆಯಾಗಿ 11,552 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಜಾಗತಿಕ ಅಂಶಗಳು: ಅಮೆರಿಕ ಮತ್ತು ಚೀನಾ ಹಾಗೂ ಅಮೆರಿಕ ಮತ್ತು ಇರಾನ್‌ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವು ದೇಶಿ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ.

ಅಮೆರಿಕದಲ್ಲಿ ಜೂನ್‌ ತಿಂಗಳಿನಲ್ಲಿ ಹೊಸದಾಗಿ 2.24 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಇದರಿಂದಾಗಿ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಕಡಿತ ಅನುಮಾನ ಮೂಡಿತ್ತು. ಆದರೆ, ‘ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ’ ಫೆಡರಲ್‌ ರಿಸರ್ವ್‌ನ ಅಧ್ಯಕ್ಷ ಜೆರೊಮ್ ಪಾವೆಲ್‌ ಅವರು ಹೇಳಿದ್ದಾರೆ. ಇದರಿಂದಾಗಿ ಹೂಡಿಕೆದಾರರಲ್ಲಿ ಮೂಡಿದ್ದ ಆತಂಕ ತುಸು ಕಡಿಮೆಯಾಗಿದೆ.

ದೇಶಿ ಕಾರಣಗಳು:ಕಂಪನಿಗಳಲ್ಲಿ ಸಾರ್ವಜನಿಕ ಪಾಲುಬಂಡವಾಳವನ್ನು ಶೇ 25 ರಿಂದ ಶೇ 35ಕ್ಕೆ ಹೆಚ್ಚಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ವಿಪ್ರೊ, ಇನ್ಫೊಸಿಸ್‌ ಸೇರಿದಂತೆ 1,174 ಕಂಪನಿಗಳ ಪ್ರವರ್ತಕರ ಪಾಲು ಬಂಡವಾಳವನ್ನು ಕಡಿಮೆ ಮಾಡಬೇಕಿದೆ.

ಸರ್ಚಾರ್ಜ್‌ ಹೆಚ್ಚಿಸಿರುವುದರಿಂದ ವಿದೇಶಿ ಹೂಡಿಕೆದಾರರಿಗೂ ತೆರಿಗೆ ಹೊರೆಯಾಗಲಿದೆ.ಷೇರು ಮರುಖರೀದಿ ಮೇಲೆಯೂ ಸರ್ಚಾರ್ಜ್‌ ವಿಧಿಸುವ ಪ್ರಸ್ತಾವನೆಯೂ ಹೂಡಿಕೆ ಚಟುವಟಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ಎಫ್‌ಪಿಐ ಹೊರಹರಿವು: ದೇಶದ ಷೇರುಪೇಟೆಗಳಲ್ಲಿ ಜುಲೈ ತಿಂಗಳಿನಲ್ಲಿ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಕಂಡುಬರುತ್ತಿದೆ.

ಮೊದಲ ವಾರದಲ್ಲಿ ಬಂಡವಾಳ ಮಾರುಕಟ್ಟೆಯಿಂದ ₹ 475 ಕೋಟಿ ಹಿಂದಕ್ಕೆ ಪಡೆದಿದ್ದಾರೆ.

ಜುಲೈ 1 ರಿಂದ 5ರವರೆಗೆ ಷೇರುಪೇಟೆಯಿಂದ ₹ 3,710 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಆದರೆ, ಸಾಲಪತ್ರಗಳ ಮಾರುಕಟ್ಟೆಯಲ್ಲಿ ₹ 3,235 ಕೋಟಿ ಹೂಡಿಕೆ ಮಾಡಿದ್ದಾರೆ. ಹೀಗಾಗಿ ಒಟ್ಟಾರೆ ಹೊರಹರಿವು ₹ 475 ಕೋಟಿಗಳಷ್ಟಾಗಿದೆ.

ಎರಡನೇ ವಾರದಲ್ಲಿ ಮೂರು ವಹಿವಾಟು ಅವಧಿಯಲ್ಲಿ ಮಾರಾಟಕ್ಕೆ ಗಮನ ನೀಡಿದ್ದಾರೆ. ಫೆಬ್ರುವರಿಯಿಂದ ಜೂನ್‌ವರೆಗೆ ಐದು ತಿಂಗಳವರೆಗೆ ನಿರಂತರವಾಗಿ ಹೂಡಿಕೆ ಮಾಡಿದ್ದರು.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಾರದ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 27 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 68.69ಕ್ಕೆ ತಲುಪಿದೆ.

ಮಾರುಕಟ್ಟೆಯಲ್ಲಿ ಬ್ರೆಂಟ್‌ ತೈಲ ದರ ಶೇ 0.44ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 66.81 ಡಾಲರ್‌ಗಳಿಗೆ ತಲುಪಿದೆ.

ಅಂಕಿ–ಅಂಶ
*
₹ 1,385 ಕೋಟಿ-ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು
*₹ 148 ಲಕ್ಷ ಕೋಟಿ-ಷೇರುಪೇಟೆಯ ಬಂಡವಾಳ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.