ADVERTISEMENT

ಷೇರು ಮಾತು: ಐಪಿಒ ಹೂಡಿಕೆ ಅಂದ್ರೆ ಲಾಟರಿ ಟಿಕೆಟ್ ಅಲ್ಲ!

ಶರತ್ ಎಂ.ಎಸ್.
Published 29 ನವೆಂಬರ್ 2021, 19:30 IST
Last Updated 29 ನವೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಐಪಿಒ ಎನ್ನುವುದು ಹಲವು ರೀತಿಯ ಲೆಕ್ಕಾಚಾರಗಳನ್ನು ಆಧರಿಸಿದ ಹೂಡಿಕೆ. ಅಧ್ಯಯನ ಮತ್ತು ಕಲಿಕೆ ಇದ್ದಾಗ ಮಾತ್ರ ಐಪಿಒಗಳು ದುಡ್ಡು ಬಿತ್ತಿ, ಬೆಳೆಸುವ ಸಾಧನಗಳಾಗುತ್ತವೆ.

ಐಪಿಒಗಳಲ್ಲಿ ಹೂಡಿಕೆ ಮಾಡುವ ಮುನ್ನ ಅರಿತುಕೊಂಡು ಮುನ್ನಡೆದರೆ ಲಾಭ, ಆತುರಪಟ್ಟರೆ ನಷ್ಟ ಎಂದು ಕಳೆದ ಅಂಕಣದಲ್ಲಿ ಬರೆದಿದ್ದೆ. ಆ ಮಾತಿಗೆ ಪೂರಕವಾದ ಕೆಲವು ಸಂಗತಿಗಳು ಈಚೆಗೆ ನಡೆದಿವೆ. ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸಿದ ಕಂಪನಿಯೊಂದರ ಷೇರು ಮೌಲ್ಯ ಒಂದೇ ದಿನದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿತು. ಹಣ ಹೂಡಿಕೆ ಮಾಡಿದ್ದವರು, ಹಣ ಕಳೆದುಕೊಳ್ಳುವಂತೆ ಆಯಿತು. ಲಕ್ಷಾಂತರ ಮಂದಿ ಸಣ್ಣ ಹೂಡಿಕೆದಾರರ ಭರವಸೆಯ ಸೌಧಕ್ಕೆ ಪೆಟ್ಟು ಬಿತ್ತು. ಉತ್ತಮ ವಹಿವಾಟಿನ ಮಾದರಿ ಹೊಂದಿರುವ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಬೇಕು ಎಂಬ ಮಾತನ್ನು ಯಾವ ಸಂದರ್ಭದಲ್ಲಿಯೂ ಮರೆಯುವಂತೆ ಇಲ್ಲ.

ಬಹುತೇಕರು ಐಪಿಒಗಳಲ್ಲಿ ಹೂಡಿಕೆ ಮಾಡುವುದನ್ನು ಲಾಟರಿ ಟಿಕೆಟ್ ಖರೀದಿ ಮಾಡಿದಂತೆ ಎಂದು ಭಾವಿಸುತ್ತಾರೆ. ಆದರೆ ಐಪಿಒ ಎನ್ನುವುದು ಹಲವು ರೀತಿಯ ಲೆಕ್ಕಾಚಾರಗಳನ್ನು ಆಧರಿಸಿದ ಹೂಡಿಕೆ. ಅಧ್ಯಯನ ಮತ್ತು ಕಲಿಕೆ ಇದ್ದಾಗ ಮಾತ್ರ ಐಪಿಒಗಳು ದುಡ್ಡು ಬಿತ್ತಿ, ಬೆಳೆಸುವ ಸಾಧನಗಳಾಗುತ್ತವೆ.

ADVERTISEMENT

ಕಂಪನಿಯ ಆಂತರಿಕ ಮೌಲ್ಯ ಎಷ್ಟು ಎಂದು ಅಂದಾಜು ಮಾಡುವ ಪ್ರಕ್ರಿಯೆ ವ್ಯಾಲ್ಯುವೇಷನ್ ಅಥವಾ ಮೌಲ್ಯಮಾಪನ. ಯಾವುದೇ ವಸ್ತುವಿನ ಬೆಲೆ ನಿಗದಿ ಅದರ ನಿಜ ಮೌಲ್ಯದ ಮೇಲೆ ಆಗಬೇಕು. ಆದರೆ ಮಾರುಕಟ್ಟೆಗೆ ಪ್ರವೇಶ ಮಾಡುವ ಕೆಲವು ಕಂಪನಿಗಳ ಷೇರು ಬೆಲೆಯನ್ನು ನಿಗದಿ ಮಾಡುವಾಗ ನಿಜವಾದ ಮೌಲ್ಯಕ್ಕಿಂತ ಅಧಿಕವಾದ ಮೌಲ್ಯಮಾಪನ ನಡೆದ ನಿದರ್ಶನ ಇದೆ. ಹಣಕಾಸಿನ ಲೆಕ್ಕಾಚಾರದ ಆಯಾಮದಿಂದ ನೋಡಿದಾಗ ಲಾಭದಲ್ಲಿ ಇಲ್ಲದ, ತೆರಿಗೆ ನಂತರದ ಲಾಭ ನಕಾರಾತ್ಮಕವಾಗಿ ಇರುವ, ನಗದು ಹರಿವಿನ ಕೊರತೆ ಮತ್ತು ನಷ್ಟದ ಇತಿಹಾಸ ಹೊಂದಿರುವ ಕಂಪನಿಗಳ ವಿಚಾರದಲ್ಲಿಯೂ ಅಧಿಕ ಮೌಲ್ಯಮಾಪನ ನಡೆದ ಉದಾಹರಣೆಗಳು ನಮ್ಮಲ್ಲಿ ಇವೆ.

ನನ್ನ ಸ್ನೇಹಿತ ಭಾಸ್ಕರ್ (ಹೆಸರು ಬದಲಾಯಿಸಲಾಗಿದೆ) ಷೇರು ಮಾರುಕಟ್ಟೆ ಹೂಡಿಕೆಗೆ ಹೊಸಬ. ತನ್ನ ಸ್ನೇಹಿತರು ‘ನೈಕಾ ಐಪಿಒದಿಂದ ಲಾಭ ಗಳಿಸಿದೆ, ತತ್ವ ಚಿಂತನ್ ಹೂಡಿಕೆಯಿಂದ ಲಾಭ ಗಳಿಸಿದೆ, ಜೊಮ್ಯಾಟೋದಿಂದ ಲಾಭ ಗಳಿಸಿದೆ‘ ಎಂದು ಹೇಳುವುದನ್ನು ಕಳೆದ ಕೆಲವು ತಿಂಗಳಿಂದ ಕೇಳುತ್ತಿದ್ದ. ಆತ ಯಾವ ಕಂಪನಿಗಳ ಪೂರ್ವಾಪರವನ್ನೂ ಗಮನಿಸಲಿಲ್ಲ. ಐಪಿಒ ವೇಳೆ ಹೂಡಿಕೆ ಮಾಡಿ, ಷೇರು ಅಲಾಟ್‌ಮೆಂಟ್ ಆದರೆ ಲಾಭ ಸಿಗುವುದು ಖಚಿತ ಎಂಬ ನಿರ್ಧಾರಕ್ಕೆ ಬಂದುಬಿಟ್ಟ. ಎಲ್ಲ ಕಂಪನಿಗಳ ಐಪಿಒಗಳಲ್ಲಿಯೂ ಹೂಡಿಕೆ ಮಾಡಲು ಶುರು ಮಾಡಿದ. ಒಂದರಲ್ಲಿ ಅಲಾಟ್‌ಮೆಂಟ್ ಸಿಗಲಿಲ್ಲವಾದರೆ ಮತ್ತೊಂದರಲ್ಲಿ, ಅದರಲ್ಲೂ ಸಿಗಲಿಲ್ಲವಾದರೆ ಇನ್ನೊಂದರಲ್ಲಿ ಎನ್ನುವಷ್ಟು ಆಸೆಬುರುಕತನ ಆತನ ತಲೆಗೆ ಹೊಕ್ಕಿತು.

ಈಚೆಗೆ ಒಂದು ಕಂಪನಿಯ ಐಪಿಒ ಸಂದರ್ಭದ ಷೇರು ಹಂಚಿಕೆಯಲ್ಲಿ, ಆತನಿಗೆ ಷೇರುಗಳು ದೊರೆತವು. ಕಂಪನಿಯು ಷೇರು ಮಾರುಕಟ್ಟೆ ಪ್ರವೇಶಿಸಿದ ದಿನ ಭರ್ಜರಿ ಲಾಭ ಸಿಗುತ್ತದೆ ಎಂದು ಆತ ಉತ್ಸಾಹದಲ್ಲಿದ್ದ. ಆದರೆ ನಿರೀಕ್ಷೆ ಸುಳ್ಳಾಯಿತು. ಪ್ರತಿ ಷೇರಿಗೆ ಹಾಕಿದ್ದ ಹಣದಲ್ಲಿ ಒಂದಿಷ್ಟು ಪಾಲು ಕರಗಿಹೋಯಿತು. ಈಗ, ‘ಐಪಿಒ ಹೂಡಿಕೆ ಅಂದರೆ ಲಾಟರಿ ಟಿಕೆಟ್ ಖರೀದಿಸಿಷ್ಟು ಸುಲಭದ ವಹಿವಾಟು ಅಲ್ಲ’ ಎಂದು ಆತನೇ ಹೇಳುತ್ತಿದ್ದಾನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.