ಮುಂಬೈ: ದೇಶದ ಷೇರುಪೇಟೆಯಲ್ಲಿ ಶುಕ್ರವಾರ ಗೂಳಿ ಆರ್ಭಟದಿಂದಾಗಿ ಸೂಚ್ಯಂಕಗಳು ಶೇ 2ರಷ್ಟು ಏರಿಕೆ ದಾಖಲಿಸಿವೆ. ಹೂಡಿಕೆದಾರರ ಸಂಪತ್ತು ₹7.85 ಲಕ್ಷ ಕೋಟಿ ವೃದ್ಧಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಮೇಲೆ ವಿಧಿಸಿರುವ ಶೇ 26ರಷ್ಟು ಪ್ರತಿ ಸುಂಕ ಜಾರಿಯನ್ನು ಜುಲೈ 9ರ ವರೆಗೆ ಮುಂದೂಡಿದೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕರಡಿ ಕುಣಿತ ಜೋರಾಗಿದೆ. ಇದರ ಹೊರತಾಗಿಯೂ ದೇಶೀಯ ಷೇರುಪೇಟೆ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,310 ಅಂಶ ಏರಿಕೆ ಕಂಡು 75,157 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 1,620 ಅಂಶ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 429 ಅಂಶ ಏರಿಕೆ ಕಂಡು 22,828 ಅಂಶಗಳಲ್ಲಿ ಸ್ಥಿರಗೊಂಡಿತು.
ಸೆನ್ಸೆಕ್ಸ್ ಗುಚ್ಛದಲ್ಲಿನ ಟಾಟಾ ಸ್ಟೀಲ್, ಪವರ್ ಗ್ರಿಡ್, ಎನ್‌ಟಿಪಿಸಿ, ಕೋಟಕ್ ಮಹೀಂದ್ರ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಅದಾನಿ ಪೋರ್ಟ್ಸ್ ಷೇರಿನ ಮೌಲ್ಯ ಏರಿಕೆ ಕಂಡಿದೆ. ಏಷ್ಯನ್ ಪೇಂಟ್ಸ್, ಟಿಸಿಎಸ್ ಷೇರಿನ ಮೌಲ್ಯ ಇಳಿದಿದೆ.
‘ಜಾಗತಿಕ ಮಟ್ಟದಲ್ಲಿ ತಲೆದೋರಿದ್ದ ಅನಿಶ್ಚಿತ ಸ್ಥಿತಿಯು ನಡುವೆಯೇ ಪ್ರತಿ ಸುಂಕ ಜಾರಿಗೆ ಟ್ರಂಪ್ ಆಡಳಿತವು 90 ದಿನ ವಿರಾಮ ನೀಡಿದೆ. ಈ ಅನಿರೀಕ್ಷಿತ ಕ್ರಮವು ದೇಶೀಯ ಷೇರುಪೇಟೆ ಏರಿಕೆ ಕಾಣಲು ನೆರವಾಗಿದೆ’ ಎಂದು ಜಿಯೊಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಜಾಗತಿಕ ಷೇರುಪೇಟೆಗಳ ಕಥೆ:
ಟೋಕಿಯೊ ಮತ್ತು ದಕ್ಷಿಣ ಕೊರಿಯಾ ಷೇರುಪೇಟೆ ಇಳಿಕೆ ಕಂಡಿದ್ದರೆ, ಶಾಂಘೈ, ಹಾಂಗ್‌ಕಾಂಗ್ ಏರಿಕೆ ಕಂಡಿವೆ. ಯುರೋಪ್ ಮಾರುಕಟ್ಟೆಗಳಲ್ಲೂ ನಕಾರಾತ್ಮಕ ವಹಿವಾಟು ನಡೆದಿದೆ.
ಗುರುವಾರದ ವಹಿವಾಟಿನಲ್ಲಿ ಅಮೆರಿಕದ ನಾಸ್ಡಾಕ್ ಕಂಪೋಸಿಟ್ ಶೇ 4.31, ಎಸ್ ಆ್ಯಂಡ್ ಪಿ 500 ಶೇ 3.46ರಷ್ಟು ಹಾಗೂ ಡೌ ಜೋನ್ಸ್ ಶೇ 2.50ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.