ADVERTISEMENT

ಷೇರುಪೇಟೆಗಳಲ್ಲಿ ಕೊರೊನಾ ಆತಂಕ: ಸೆನ್ಸೆಕ್ಸ್ ಕುಸಿತ, ಐಆರ್‌ಸಿಟಿಸಿ ಷೇರು ಏರಿಕೆ

ಏಜೆನ್ಸೀಸ್
Published 12 ಮೇ 2020, 5:47 IST
Last Updated 12 ಮೇ 2020, 5:47 IST
ಷೇರುಪೇಟೆ ವಹಿವಾಟು– ಸಾಂಕೇತಿಕ ಚಿತ್ರ
ಷೇರುಪೇಟೆ ವಹಿವಾಟು– ಸಾಂಕೇತಿಕ ಚಿತ್ರ   

ಮುಂಬೈ: ಬ್ಯಾಂಕ್‌ ವಲಯದ ಷೇರುಗಳು ಮಂಗಳವಾರ ಮಾರಾಟ ಒತ್ತಡಕ್ಕೆ ಸಿಲುಕುತ್ತಿದ್ದಂತೆ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಯಾಯಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 517.38 ಅಂಶ ಕುಸಿಯಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಐಸಿಐಸಿಐ ಬ್ಯಾಂಕ್‌ ಷೇರುಗಳನ್ನು ಹೂಡಿಕೆದಾರರು ಮಾರಾಟ ಮಾಡುತ್ತಿದ್ದಾರೆ. ಸೆನ್ಸೆಕ್ಸ್‌ ಶೇ 1.65ರಷ್ಟು ಇಳಿಕೆಯಾಗಿ 31,043.84 ಅಂಶಗಳಲ್ಲಿ ವಹಿವಾಟು ನಡೆದಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 137.50 ಅಂಶ ಕಡಿಮೆಯಾಗಿ 9,101.70 ತಲುಪಿದೆ.

ಏಷಿಯನ್‌ ಪೇಂಟ್ಸ್‌, ಎಚ್‌ಡಿಎಫ್‌ಸಿ (ಎರಡೂ ವಲಯಗಳ ಷೇರು), ಮಾರುತಿ, ಒಎನ್‌ಜಿಸಿ, ಎಚ್‌ಯುಎಲ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ ಹಾಗೂ ಕೊಟ್ಯಾಕ್‌ ಬ್ಯಾಂಕ್‌ ಷೇರುಗಳ ಬೆಲೆ ಶೇ 2ರಿಂದ ಶೇ 3.3ರ ವರೆಗೂ ಇಳಿಕೆಯಾಗಿದೆ. ಟೆಕ್ ಮಹೀಂದ್ರಾ, ಎನ್‌ಟಿಪಿಸಿ ಷೇರುಗಳು ಗಳಿಕೆ ದಾಖಲಿಸಿವೆ.

ADVERTISEMENT

ಭಾರತೀಯ ರೈಲ್ವೆ ವಿಶೇಷ ರೈಲುಗಳ ಸಂಚಾರ ನಡೆಸುತ್ತಿದ್ದು, ಆನ್‌ಲೈನ್‌ ಬುಕ್ಕಿಂಗ್‌ಗೆ ಅವಕಾಶ ನೀಡಿರುವುದರಿಂದ ಐಆರ್‌ಸಿಟಿಸಿ ಷೇರು ಶೇ 5ರಷ್ಟು ಏರಿಕೆಯೊಂದಿಗೆ ಪ್ರತಿ ಷೇರು ಬೆಲೆ ₹1,368.70 ಮುಟ್ಟಿದೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ ಶೇ 0.26ರಷ್ಟು ಕಡಿಮೆಯಾಗಿ 31,561.22 ಅಂಶಗಳಲ್ಲಿ ವಹಿವಾಟು ಮುಗಿದಿತ್ತು. ನಿಫ್ಟು ಶೇ 0.13ರಷ್ಟು ಇಳಿಕೆಯೊಂದಿಗೆ 9,239.20 ಅಂಶ ತಲುಪಿತ್ತು. ವಿದೇಶಿ ಹೂಡಿಕೆದಾರರು ₹534.87 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಜಾಗತಿಕವಾಗಿ ಹಾಗೂ ಭಾರತದಲ್ಲಿ ಎರಡನೇ ಹಂತದ ಕೊರೊನಾ ವೈರಸ್‌ ಸೋಂಕು ವ್ಯಾಪಿಸುತ್ತಿರುವ ಆತಂಕದಿಂದ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಚೀನಾದ ವುಹಾನ್‌ನಲ್ಲಿ 6 ಹೊಸ ಪ್ರಕರಣಗಳು ಹಾಗೂ ದಕ್ಷಿಣ ಕೊರಿಯಾದಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ.

ಚೀನಾದ ಶಾಂಘೈ, ಹಾಂಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳಲ್ಲೂ ವಹಿವಾಟು ಇಳಿಮುಖವಾಗಿದೆ. ಬ್ರೆಂಟ್‌ ಕಚ್ಚಾ ತೈಲ ಶೇ 0.24ರಷ್ಟು ಏರಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 29.70 ಡಾಲರ್‌ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.