ADVERTISEMENT

Stock Markets: ಸೆನ್ಸೆಕ್ಸ್, ನಿಫ್ಟಿ ಚೇತರಿಕೆ

ಪಿಟಿಐ
Published 19 ಏಪ್ರಿಲ್ 2024, 14:07 IST
Last Updated 19 ಏಪ್ರಿಲ್ 2024, 14:07 IST
   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ನಾಲ್ಕು ದಿನಗಳ ಕರಡಿ ಕುಣಿತಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಆರಂಭಿಕ ವಹಿವಾಟಿನಲ್ಲಿ ಇಳಿಕೆ ದಾಖಲಿಸಿದ್ದ ಷೇರು ಸೂಚ್ಯಂಕಗಳು ಬಳಿಕ ಚೇತರಿಕೆಯ ಹಳಿಗೆ ಮರಳಿದವು. ‌

ಬ್ಯಾಂಕಿಂಗ್‌ ಹಾಗೂ ಆಟೊ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರುಪೇಟೆಯಲ್ಲಿನ ನರಾಕಾತ್ಮಕ ವಹಿವಾಟು ನಡೆದಿತ್ತು. ಇದರಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರ ಮೊಗದಲ್ಲಿ ಕೊಂಚ ಹರ್ಷ ಮೂಡಿದೆ.  

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 599 ಅಂಶ (ಶೇ 0.83) ಏರಿಕೆ ಕಂಡು 73,088 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಸೆನ್ಸೆಕ್ಸ್‌, ಬಳಿಕ ಏರಿಕೆ ಕಂಡಿತು. 

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 151 ಏರಿಕೆ (ಶೇ 0.69ರಷ್ಟು) ಕಂಡಿದ್ದು, 22,147 ಅಂಶಗಳಲ್ಲಿ ಸ್ಥಿರಗೊಂಡಿತು. 

ಬಜಾಜ್‌ ಫೈನಾನ್ಸ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಎಚ್‌ಡಿಎಫ್‌ಸಿ ಬ್ಯಾಂಕ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಮಾರುತಿ, ವಿಪ್ರೊ, ಭಾರ್ತಿ ಏರ್‌ಟೆಲ್‌, ಬಜಾಜ್‌ ಫಿನ್‌ಸರ್ವ್‌, ಐಸಿಐಸಿಐ ಬ್ಯಾಂಕ್‌ ಮತ್ತು ಐಟಿಸಿ ಷೇರುಗಳು ಗಳಿಕೆ ಕಂಡಿವೆ.

ನೆಸ್ಲೆ ಇಂಡಿಯಾ, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎಲ್‌ ಆ್ಯಂಡ್‌ ಟಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಟಾಟಾ ಮೋಟರ್ಸ್‌ ಷೇರುಗಳು ಕುಸಿತ ಕಂಡಿವೆ. 

ಸಿಯೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆ ಕೂಡ ನರಾಕಾತ್ಮಕ ವಹಿವಾಟಿನಲ್ಲಿ ಮುಕ್ತಾಯಗೊಂಡಿದೆ.

ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.55ರಷ್ಟು ಏರಿಕೆ ಕಂಡಿದ್ದು, ಪ್ರತಿ ಬ್ಯಾರೆಲ್‌ಗೆ 87.62 ಡಾಲರ್‌ ಆಗಿದೆ‌.

ಇನ್ಫೊಸಿಸ್‌ ಷೇರು ಕುಸಿತ

ನವದೆಹಲಿ (ಪಿಟಿಐ): ಇನ್ಫೊಸಿಸ್‌ ಕಂಪನಿಯ ಷೇರಿನ ಮೌಲ್ಯ ಶೇ 1ರಷ್ಟು ಕುಸಿದಿದೆ. 2023–24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ನ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ. ಆದರೆ 2024–25ನೇ ಆರ್ಥಿಕ ವರ್ಷದ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಕಂಪನಿಯು ಲಾಭ ದಾಖಲಿಸಿಲ್ಲ. ಹಾಗಾಗಿ ಷೇರಿನ ಮೌಲ್ಯ ಕುಸಿದಿದೆ. ಬಿಎಸ್‌ಇಯಲ್ಲಿ ಇಂಟ್ರಾ ಡೇ ಟ್ರೇಡಿಂಗ್‌ನಲ್ಲಿ ಷೇರಿನ ಮೌಲ್ಯ ಶೇ 2.87ರಷ್ಟು ಕುಸಿದು ಪ್ರತಿ ಷೇರಿನ ಬೆಲೆ ₹1379.70ಕ್ಕೆ ತಲುಪಿತ್ತು. ಅಂತಿಮವಾಗಿ ಶೇ 0.63ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹1411.60ಕ್ಕೆ ಮುಟ್ಟಿದೆ.  ಎನ್‌ಎಸ್‌ಇಯಲ್ಲೂ ಶೇ 2.85ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ ₹1378.75ಕ್ಕೆ ತಲುಪಿತ್ತು. ಅಂತಿಮವಾಗಿ ಶೇ 0.51ರಷ್ಟು ಇಳಿಕೆಯಾಗಿದ್ದು ಪ್ರತಿ ಷೇರಿನ ಬೆಲೆ ₹1411.95 ಆಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ (ಎಂ–ಕ್ಯಾಪ್‌) ₹3655 ಕೋಟಿ ಕರಗಿದೆ. ಒಟ್ಟು ಎಂ–ಕ್ಯಾಪ್‌ ₹5.85 ಲಕ್ಷ ಕೋಟಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.