ADVERTISEMENT

45 ನಿಮಿಷ ವಹಿವಾಟು ಸ್ಥಗಿತದ ಬಳಿಕ 2,050 ಅಂಶ ಜಿಗಿದ ಸೆನ್ಸೆಕ್ಸ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 5:15 IST
Last Updated 13 ಮಾರ್ಚ್ 2020, 5:15 IST
ಮುಂಬೈ ಷೇರುಪೇಟೆ ಮುಂದೆ ಸೂಚ್ಯಂಕ ವೀಕ್ಷಿಸುತ್ತಿರುವವರು– ಸಾಂದರ್ಭಿಕ ಚಿತ್ರ
ಮುಂಬೈ ಷೇರುಪೇಟೆ ಮುಂದೆ ಸೂಚ್ಯಂಕ ವೀಕ್ಷಿಸುತ್ತಿರುವವರು– ಸಾಂದರ್ಭಿಕ ಚಿತ್ರ   
""

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ವಹಿವಾಟು ಆರಂಭದಲ್ಲಿಯೇ ದಿಢೀರ್‌ ಕುಸಿತವಾಗಿಸರ್ಕ್ಯೂಟ್‌ ಬ್ರೇಕ್‌ ಆಗಿತ್ತು.ಇದರಿಂದಾಗಿ ಷೇರುಪೇಟೆ ವಹಿವಾಟುಗಳನ್ನು 45 ನಿಮಿಷಗಳ ವರೆಗೂ ಸ್ಥಗಿತಗೊಳಿಸಲಾಗಿತ್ತು. ಮತ್ತೆ ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ 2,050 ಅಂಶಗಳು ಜಿಗಿಯಿತು.

ಕೋವಿಡ್–19 ಆತಂಕದಿಂದ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕಗಳು ಇಳಿಮುಖವಾಗಿವೆ. ವಹಿವಾಟು ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಸೆನ್ಸೆಕ್ಸ್‌3090.62 ಅಂಶ (ಶೇ9.43) ಕುಸಿದು29,687.52 ಅಂಶ ತಲುಪಿತು. ನಿಫ್ಟಿ966.10 (ಶೇ 10.07) ಕಡಿಮೆಯಾಗಿ8,624.05 ಅಂಶಗಳಿಗೆ ಇಳಿಯಿತು.ದಿಢೀರ್‌ ಕುಸಿತದಿಂದಾಗಿ ಷೇರುಪೇಟೆ ವಹಿವಾಟುಗಳನ್ನು 45 ನಿಮಿಷಗಳ ವರೆಗೂ ಸ್ಥಗಿತಗೊಳಿಸಲಾಯಿತು.

ಬೆಳಿಗ್ಗೆ 10:20ಕ್ಕೆ ಪುನಃ ಆರಂಭಗೊಂಡ ವಹಿವಾಟು ಅಲ್ಪ ಚೇತರಿಕೆ ಕಂಡಿತು. ಸೆನ್ಸೆಕ್ಸ್‌783.02 ಅಂಶ (ಶೇ 2.39) ಹೆಚ್ಚಳದೊಂದಿದೆ 31,995.12ಅಂಶ ತಲುಪಿದೆ. ನಿಫ್ಟಿ182.05 ಅಂಶ (ಶೇ 1.90) ಏರಿಕೆಯಾಗಿ9,408.10 ಮುಟ್ಟಿದೆ. ಆದರೆ, ಗುರುವಾರದ ವಹಿವಾಟು ಅಂತ್ಯಕ್ಕಿಂತಲೂ ಸೂಚ್ಯಂಕ ಕಡಿಮೆ ಮಟ್ಟದಲ್ಲಿದೆ.

ADVERTISEMENT

ಸನ್‌ ಫಾರ್ಮಾ, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ಭಾರ್ತಿ ಏರ್‌ಟೆಲ್‌ ಸೇರಿದಂತೆ ಬೆರಳೆಣಿಕೆಯಷ್ಟು ಕಂಪನಿಗಳ ಷೇರುಗಳು ಮಾತ್ರ ಸಕಾರಾತ್ಮಕ ವಹಿವಾಟು ಕಂಡಿವೆ. ರಿಲಯನ್ಸ್‌, ಐಟಿಸಿ, ಇನ್ಫೊಸಿಸ್‌, ಟಿಸಿಎಸ್‌ ಸೇರಿದಂತೆ ಹಲವು ಕಂಪನಿಗಳ ಷೇರುಗಳು ನಷ್ಟಕ್ಕೆ ಒಳಗಾಗಿವೆ.

ಗುರುವಾರ ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ₹11.43 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಬಂಡವಾಳ ಮೌಲ್ಯವು ₹137.13 ಲಕ್ಷ ಕೋಟಿಗಳಿಂದ ₹125.70 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ. ನಿನ್ನೆ ಸೆನ್ಸೆಕ್ಸ್‌2,919 ಅಂಶಗಳ ಸಾರ್ವಕಾಲಿಕ ಗರಿಷ್ಠ ಕುಸಿತ ಕಂಡು 32,778 ಅಂಶಗಳಿಗೆ ಇಳಿಯಿತು. ವಹಿವಾಟಿನ ಒಂದು ಹಂತದಲ್ಲಿ 3,204 ಅಂಶಗಳವರೆಗೂ ಕುಸಿತ ಕಂಡಿತ್ತು. ನಿಫ್ಟಿ 868 ಅಂಶ ಕುಸಿತ ಕಂಡು 9,590 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.