ADVERTISEMENT

ಇಷ್ಟೊಂದು ಲೈಟಾದ್ರೆ ಹೇಗೆ ಸ್ವಾಮಿ!

ರವೀಂದ್ರ ಭಟ್ಟ
Published 28 ಡಿಸೆಂಬರ್ 2025, 23:36 IST
Last Updated 28 ಡಿಸೆಂಬರ್ 2025, 23:36 IST
<div class="paragraphs"><p>ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್</p></div>

ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್

   

ಕಾಂಗ್ರೆಸ್ ಪಕ್ಷದ ಒಳಜಗಳ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದು ಬರೀ ಆ ಪಕ್ಷದ ವಿದ್ಯಮಾನ ಅಲ್ಲ. ಕಾಂಗ್ರೆಸ್ ಆಡಳಿತ ಪಕ್ಷವೂ ಆಗಿರುವುದರಿಂದ, ಅದರ ಜಗಳದ ಪರಿಣಾಮ ಇಡೀ ರಾಜ್ಯದ ಮೇಲಾಗುತ್ತಿದೆ. ರಾಜಕೀಯ ಅತಂತ್ರ ಸ್ಥಿತಿ ಇದ್ದರೆ ಆಡಳಿತ ಯಂತ್ರ ಸುಗಮವಾಗಿ ಸಾಗುವುದಿಲ್ಲ ಎನ್ನುವ ಸತ್ಯ ಆಡಳಿತ ನಡೆಸುವ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದಲೂ ಮುಖ್ಯಮಂತ್ರಿ ಬದಲಾವಣೆಯ ವಿಷಯವೇ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ ಹೇಳಿಕೆಗಳಿಂದ ಮತದಾರರ ತಲೆ ಚಿಟ್ಟು ಹಿಡಿದು ಹೋಗಿದೆ. ‘ಯಾರಾದ್ರೂ ಮುಖ್ಯಮಂತ್ರಿಯಾಗಿರಿ. ಒಳ್ಳೆಯ ಆಡಳಿತ ಕೊಡ್ರಪಾ’ ಎಂದು ಅವರು ಹೇಳುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ನಿಮ್ಮ ಕತೆ ಅಷ್ಟೆ ಎಂಬ ಸಂದೇಶವನ್ನೂ ಮತದಾರರು ಕೊಟ್ಟಾಗಿದೆ. ಆದರೂ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಮುಗುಂ ಆಗಿಯೇ ಇದೆ. ಕೈಕಮಾಂಡ್ ಲೈಟ್ ಆಗಿದೆ. ಅದರ ಲಾಭವನ್ನು ಇನ್ಯಾರೋ ಪಡೆಯುತ್ತಾರೆ. ಆದರೂ ಕೈಕಮಾಂಡ್ ಕತ್ತಲೆಯಲ್ಲಿಯೇ ಹೆಜ್ಜೆ ಇಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ‘ಹೈಕಮಾಂಡ್ ಒಪ್ಪಿದರೆ ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ’ ಎಂದು ಹೇಳಿಕೆ ಕೊಡುತ್ತಾರೆ. ಅವರ ಮಗ ಯತೀಂದ್ರ ಮಾತ್ರ ‘ನನ್ನ ತಂದೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಅದರಲ್ಲಿ ಅನುಮಾನವೇ ಬೇಡ’ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ‘ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ’ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಕೆಲವೇ ಸಮಯದಲ್ಲಿ ಅವರ ಬೆಂಬಲಿಗರು ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುಹೂರ್ತವನ್ನೇ ನಿಗದಿ ಮಾಡುತ್ತಾರೆ. ಇಲ್ಲಿ ಯಾರು ಹೈಕಮಾಂಡ್, ಯಾರು ಕೈಕಮಾಂಡ್ ಎನ್ನುವುದು ಅರ್ಥವಾಗದೆ ಮತದಾರ ತಲೆ ಕೆರೆದುಕೊಳ್ಳುತ್ತಿದ್ದಾನೆ.

ADVERTISEMENT

‘ಕಾಂಗ್ರೆಸ್ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ. ಸೂಕ್ತ ಕಾಲದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳುತ್ತಾರೆ. ಎಐಸಿಸಿ ಅಧ್ಯಕ್ಷರಿಗಿಂತಲೂ ಹೈಕಮಾಂಡ್ ಯಾರು ಎನ್ನುವ ಪ್ರಶ್ನೆ ಜನರನ್ನು ಕಾಡದೇ ಇರದು. ‘ರಾಹುಲ್ ಗಾಂಧಿ ಎಲ್ಲ ನೋಡಿಕೊಳ್ಳುತ್ತಾರೆ’ ಎಂದು ಎಐಸಿಸಿ ಅಧ್ಯಕ್ಷರು ಒಮ್ಮೆ ಹೇಳಿದರೆ ಇನ್ನೊಮ್ಮೆ ‘ರಾಜ್ಯ ಕಾಂಗ್ರೆಸ್ ಸಮಸ್ಯೆಗೂ ಹೈಕಮಾಂಡ್‌ಗೂ ಸಂಬಂಧವೇ ಇಲ್ಲ. ರಾಜ್ಯ ನಾಯಕರೇ ಅದನ್ನು ಬಗೆಹರಿಸಿಕೊಳ್ಳಬೇಕು’ ಎಂದೂ ಹೇಳುತ್ತಾರೆ. ‘ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಈಗ ರಾಹುಲ್ ಗಾಂಧಿ ಹೇಳಿದಂತೆ ಕೇಳುತ್ತೇನೆ’ ಎನ್ನುತ್ತಿದ್ದಾರೆ. ಇಲ್ಲಿ ಏನ್ ನಡೀತಿದೆ ಎನ್ನುವುದು ಜನರಿಗೂ ಅರ್ಥವಾಗುತ್ತಿಲ್ಲ. ಬಹುಶಃ ಕಾಂಗ್ರೆಸ್ ಹೈಕಮಾಂಡ್‌ಗೂ ಅರ್ಥವಾಗುತ್ತಿಲ್ಲ. ಇವೆಲ್ಲದರ ನಡುವೆ ಆಡಳಿತ ಹಳ್ಳ ಹಿಡಿದುಹೋಗಿದೆ. ಮೊದಲು ಮುಖ್ಯಮಂತ್ರಿ ಯಾರೆಂಬುದು ಇತ್ಯರ್ಥವಾಗಲಿ. ಮುಖ್ಯಮಂತ್ರಿ ಬದಲಾವಣೆ ಇಲ್ಲದಿದ್ದರೂ ಸಂಪುಟ ಪುನರ್ ರಚನೆಯೋ, ವಿಸ್ತರಣೆಯೋ ಏನೋ ಒಂದು ಆಗಲೇಬೇಕಲ್ಲ. ಅದೆಲ್ಲ ಮುಗೀಲಿ. ನಂತರ ಎಲ್ಲ ಕೆಲಸ ಮಾಡೋಣ ಎಂದು ಅಧಿಕಾರಿಗಳು ತಮ್ಮ ತಮ್ಮ ಲಾಭ ನೋಡಿಕೊಂಡು ಇದ್ದಾರೆ.

‘ಪರಸ್ಪರ ಹೊಂದಾಣಿಕೆಯಿಂದ ಹೋಗಿ. ಇಬ್ಬರೂ ಒಂದಾಗಿದ್ದೀರಿ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ನೀಡಿ’ ಎಂಬ ಹೈಕಮಾಂಡ್ ಸೂಚನೆಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದೂ ಆಯಿತು. ಅವರು ಇವರ ಮನೆಗೆ ಬಂದರು. ಇವರು ಅವರ ಮನೆಗೆ ಹೋದರು. ಅಲ್ಲಿಗೆ ಎಲ್ಲವೂ ಸುಖಾಂತ್ಯವಾಯಿತು ಎನ್ನುವ ಹೊತ್ತಿಗೆ ಮತ್ತೆ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂಬ ಹೇಳಿಕೆ ನೀಡಿದರು. ಮತ್ತೆ ಆ ಕಡೆ ಈ ಕಡೆ ಹೇಳಿಕೆಗಳು ಪುಂಖಾನುಪುಂಖವಾಗಿ ಹೊರಬರತೊಡಗಿದವು. ‘ಬಾಯಿ ಮುಚ್ಚಿಕೊಂಡು ಕುಳಿತುಕೊ’ ಎಂದು ಸಿದ್ದರಾಮಯ್ಯ ಅವರೂ ತಮ್ಮ ಮಗನಿಗೆ ಹೇಳಲಿಲ್ಲ. ಹೈಕಮಾಂಡ್ ಕೂಡ ಖಡಕ್ ಎಚ್ಚರಿಕೆಯನ್ನು ಎರಡೂ ಬಣದವರಿಗೆ ಕೊಡಲಿಲ್ಲ. ಇದರಿಂದ ಸ್ಪಷ್ಟವಾಗುವ ಅಂಶ ಏನೆಂದರೆ, ಮಗ ಹೇಳಿದ್ದರ ಬಗ್ಗೆ ಅಪ್ಪನಿಗೂ ಸಹಮತ ಇದೆ ಎನ್ನುವುದು. ಇನ್ನೊಂದು ಯಾರಿಗೂ ಸ್ಪಷ್ಟ ಸಂದೇಶ ನೀಡದಷ್ಟು ಕೈಕಮಾಂಡ್ ದುರ್ಬಲ ಆಗಿದೆ ಎನ್ನುವುದು. ದೇಶದೆಲ್ಲೆಡೆ ಅಧಿಕಾರ ಕಳೆದುಕೊಂಡು ಮೂರು ಮತ್ತೊಂದು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಇಷ್ಟೊಂದು ಲೈಟ್ ಆದರೆ ಹೇಗೆ ಸ್ವಾಮಿ?

ಸಿದ್ದರಾಮಯ್ಯ ಅವರು ‘ಅಹಿಂದ’ ನಾಯಕರು. ಹಿಂದುಳಿದ ವರ್ಗಗಳ ಮುಖಂಡ. ಅವರ ಪದಚ್ಯುತಿಯಾದರೆ ಹಿಂದುಳಿದ ವರ್ಗಗಳು ಮುನಿಸಿಕೊಳ್ಳಬಹುದು. ‘ಅಹಿಂದ’ ವರ್ಗದ ಮತ ಬಾರದೇ ಇರಬಹುದು. ಕೇರಳ ಮತ್ತು ಇತರ ರಾಜ್ಯಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎನ್ನುವ ಚಿಂತೆ ಹೈಕಮಾಂಡ್‌ಗೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡದೇ ಇದ್ದರೆ ರಾಜ್ಯದಲ್ಲಿ ಒಕ್ಕಲಿಗರು ಸಿಟ್ಟಾಗಬಹುದು. ಕಳೆದ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರು ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಭರವಸೆಯ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಅವರು ಮುಖ್ಯಮಂತ್ರಿ ಆಗದಿದ್ದರೆ ಮುಂದಿನ ಚುನಾವಣೆಯಲ್ಲಿ ಒಕ್ಕಲಿಗರು ಜೆಡಿಎಸ್ ಕಡೆಗೆ ವಾಲುವುದು ಗ್ಯಾರಂಟಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತ ಪಡೆಯುವುದು ಗ್ಯಾರಂಟಿ ಎಂಬುದು ಒಕ್ಕಲಿಗರ ವಾದ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೂ ಕಷ್ಟ. ಶಿವಕುಮಾರ್‌ಗೆ ಹುದ್ದೆ ಕೊಡದಿದ್ದರೂ ಕಷ್ಟ. ಅಡಕತ್ತರಿಯಲ್ಲಿ ಸಿಲುಕಿದ ಕೈಕಮಾಂಡ್ ಆಲೋಚಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ಈ ನಡುವೆ ದಲಿತ ಮುಖ್ಯಮಂತ್ರಿ ಎನ್ನುವ ಬಾಣ ಪ್ರಯೋಗವೂ ಆಗಿದೆ. ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಇದು ಸಕಾಲವಾದರೂ ಅದನ್ನು ಮಾಡುವಷ್ಟು ಧೈರ್ಯ ಕೈಕಮಾಂಡ್‌ಗೆ ಇದ್ದ ಹಾಗೆ ಕಾಣುತ್ತಿಲ್ಲ. ದಲಿತ ಮುಖ್ಯಮಂತ್ರಿ ಎನ್ನುವುದು ರಾಜಕೀಯದಾಟವೇ ವಿನಾ, ನಿಜವಾಗಿಯೂ ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯ ಪ್ರತೀಕ ಅಲ್ಲ ಎನ್ನುವುದು ಎಳೆಯರಿಗೂ ಅರ್ಥವಾಗುವಂತಿದೆ.

ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಮೂರೇ ರಾಜ್ಯಗಳಲ್ಲಿ. ಅದರಲ್ಲೂ ಕರ್ನಾಟಕ ಪ್ರಮುಖ ರಾಜ್ಯ. ಈಗ ಸದ್ಯದಲ್ಲಿಯೇ ಕೇರಳ ವಿಧಾನಸಭೆ ಚುನಾವಣೆ ಬರಲಿದೆ. ಆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಶುಭ ಸೂಚನೆಯನ್ನೂ ನೀಡಿದೆ. ಇಂತಹ ಸಮಯದಲ್ಲಿ ಪಕ್ಕದ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಸಮಸ್ಯೆ ಮಾಡಿಕೊಳ್ಳುವುದಕ್ಕಿಂತ ಇಬ್ಬರನ್ನೂ ಸಂಭಾಳಿಸಿ ಇಬ್ಬರಿಂದಲೂ ‘ಲಾಭ’ ಮಾಡಿಕೊಳ್ಳುವ ಯೋಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇರುವಂತೆ ಕಾಣುತ್ತಿದೆ.

‘ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ನಾವಿಬ್ಬರೂ ಒಂದಾಗಿದ್ದೇವೆ’ ಎಂದು ಡಿ.ಕೆ. ಶಿವಕುಮಾರ್ ಪದೇ ಪದೇ ಹೇಳುತ್ತಾರೆ. ಆದರೆ, ಅದನ್ನು ನಂಬುವ ಸ್ಥಿತಿಯಲ್ಲಿ ಮತದಾರರು ಇಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸಮ್ಮುಖದಲ್ಲಿಯೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಒಪ್ಪಂದ ಆಗಿದೆ. ಎರಡೂವರೆ ವರ್ಷದ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕು ಎಂದು ಇತ್ಯರ್ಥವಾಗಿದೆ. ಸಿದ್ದರಾಮಯ್ಯ ಅವರು ಡಿ.ಕೆ. ಸುರೇಶ್ ಅವರ ತಲೆಯ ಮೇಲೆ ಕೈ ಇಟ್ಟು ‘ಗಡುವಿನ ಒಂದು ವಾರಕ್ಕೆ ಮೊದಲೇ ನಿನ್ನ ಅಣ್ಣನಿಗೆ ಹುದ್ದೆ ಬಿಟ್ಟು ಕೊಡುತ್ತೇನೆ’ ಎಂದು ಮಾತುಕೊಟ್ಟಿದ್ದಾರೆ. ಈಗ ಅವರು ಮಾತು ಉಳಿಸಿಕೊಳ್ಳಬೇಕು ಅಷ್ಟೆ ಎಂದು ಶಿವಕುಮಾರ್ ಬೆಂಬಲಿಗರು ಗುಸುಗುಸು ಪಿಸಪಿಸ ಮಾಡುತ್ತಿದ್ದಾರೆ. ‘ನಮ್ಮಿಬ್ಬರ ನಡುವೆ ಯಾವ ಒಪ್ಪಂದವೂ ಆಗಿಲ್ಲ’ ಎಂದು ಸಿದ್ದರಾಮಯ್ಯ ಅವರು ವಿಧಾನಮಂಡಲದಲ್ಲಿಯೇ ಹೇಳಿದ್ದರೆ, ‘ನಮ್ಮಿಬ್ಬರ ನಡುವೆ ಒಪ್ಪಂದ ಆಗಿರುವುದು ನಿಜ’ ಎಂದು ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಮೌನವಾಗಿಯೇ
ಇದೆ.

ಈ ಗೊಂದಲಗಳ ನಡುವೆ ರಾಜ್ಯದ ಮತದಾರರ ಸ್ಥಿತಿ ಊದೋದು ಕೊಟ್ಟು ಬಾರಿಸೋದು ಕೊಂಡಂತೆ ಆಗಿದೆ. ಬಿಜೆಪಿ ಕೋಮುವಾದಿ ಪಕ್ಷ, ಮಿತಿ ಮೀರಿದ ಭ್ರಷ್ಟಾಚಾರ ಇದೆ, ಶೇ 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿಯೂ ಭ್ರಷ್ಟಾಚಾರ ಕಡಿಮೆಯಾಗಿರುವ ಲಕ್ಷಣ ಕಾಣುತ್ತಿಲ್ಲ. ಶೇ 40ರಷ್ಟಿದ್ದ ಭ್ರಷ್ಟಾಚಾರ ಶೇ 63ರಷ್ಟಾಗಿದೆ ಎಂಬ ಹೇಳಿಕೆಗಳು ಬರುತ್ತಿವೆ. ಗುತ್ತಿಗೆದಾರರು ಈ ಸರ್ಕಾರದ ವಿರುದ್ಧವೂ ಆರೋಪ ಮಾಡುತ್ತಿದ್ದಾರೆ.

ಇದೆಲ್ಲ ಗೊಂದಲ ಹೀಗೆಯೇ ಮುಂದುವರಿದರೆ ಪಂಚ ಗ್ಯಾರಂಟಿಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬೀಳ್ಕೊಡುಗೆಯ ಗ್ಯಾರಂಟಿ ಕರುಣಿಸುವುದಂತೂ ಪಕ್ಕಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.