
ಜಾತ್ಯತೀತ ಜನತಾ ದಳ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪ್ರಾದೇಶಿಕ ಪಕ್ಷವೊಂದರ ಈ ಸಂಭ್ರಮ ನಾಡಿನಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳಬೇಕಿತ್ತು. ರಾಜ್ಯ ರಾಜಕಾರಣದಲ್ಲಿ ಉತ್ಸಾಹ ಹುಟ್ಟಿಸಬೇಕಾಗಿತ್ತು. ಯಾಕೆ ಹಾಗಾಗಿಲ್ಲ? ಈ ಪ್ರಶ್ನೆಗೆ ಉತ್ತರವಾಗಿ, ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳ ಪರಂಪರೆ ಗಮನಿಸಬೇಕು.
2028ಕ್ಕೆ ಜಾತ್ಯತೀತ ಜನತಾ ದಳವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಹೇಳಿದ್ದಾರೆ. 93 ವಯಸ್ಸಿನ ತಾವು ಕಿಡ್ನಿ ವಿಫಲವಾಗಿದ್ದರೂ, ಡಯಾಲಿಸಿಸ್ ನಡೆಯುತ್ತಿದ್ದರೂ, ರಾಜ್ಯದಾದ್ಯಂತ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದಾಗಿ ಶಪಥ ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಮೊದಲೂ ದೇವೇಗೌಡರು ಇಂತಹದೇ ಘೋಷಣೆ ಮಾಡಿದ್ದರು. ಆಗ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ವಿಧಾನಸಭೆಯಲ್ಲಿ 40 ಸದಸ್ಯತ್ವ ಹೊಂದಿದ್ದ ಪಕ್ಷ 37ಕ್ಕೆ ಇಳಿಯಿತು. ಆದರೂ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2028ರಲ್ಲಿಯೂ ಅಂತಹದೇ ಮ್ಯಾಜಿಕ್ ನಡೆಯಬಹುದು ಎಂದು ವಯೋವೃದ್ಧರಾದ ದೇವೇಗೌಡರು ನಿರೀಕ್ಷಿಸಿರಬಹುದು. ಮಗನ ಮತ್ತು ಮೊಮ್ಮಗನ ವಿಷಯದಲ್ಲಿ ಅಂತಹ ಕನಸೊಂದನ್ನು ಅಜ್ಜನೊಬ್ಬ ಕಾಣಬಾರದು ಎಂದರೆ ಹೇಗೆ? ಅದೂ ಜೆಡಿಎಸ್ ಪಕ್ಷದ ರಜತ ಮಹೋತ್ಸವ ಸಂದರ್ಭದಲ್ಲಿ ಇಂತಹ ಭಾಷಣ ಭೂಷಣವೂ ಹೌದು.
ಜಾತ್ಯತೀತ ಜನತಾ ದಳ ಕರ್ನಾಟಕದಲ್ಲಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳಲ್ಲಿಯೇ ಅತ್ಯಂತ ಪ್ರಬಲವಾದ ಪಕ್ಷವಾಗಿತ್ತು. ಪ್ರಧಾನಿ ಹುದ್ದೆಗೆ ಏರಿದ, ರಾಜಕೀಯದ ಎಲ್ಲ ಪಟ್ಟುಗಳನ್ನು ಕರಗತ ಮಾಡಿಕೊಂಡ ದೇವೇಗೌಡರ ನೇತೃತ್ವ ಆ ಪಕ್ಷಕ್ಕೆ ಇತ್ತು. ಎರಡು ಬಾರಿ ಮುಖ್ಯಮಂತ್ರಿಯಾದ
ಎಚ್.ಡಿ. ಕುಮಾರಸ್ವಾಮಿ ಅವರೂ ಜೊತೆಗಿದ್ದರು. ದೇವೇಗೌಡರು ಧೃತರಾಷ್ಟ್ರ ಪ್ರೇಮವನ್ನು ಬಿಟ್ಟಿದ್ದರೆ, ಎಲ್ಲ ಜಾತಿ, ಧರ್ಮದವರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿದ್ದರೆ ಅದು ಕನ್ನಡಿಗರ ಪಕ್ಷವೂ ಆಗುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಕರ್ನಾಟಕಕ್ಕೆ ಒಂದು ಪ್ರಬಲವಾದ ಪ್ರಾದೇಶಿಕ ಪಕ್ಷದ ಅನಿವಾರ್ಯತೆಯಂತೂ ಇದ್ದೇ ಇದೆ. ಅದಕ್ಕೆ ಬೇಕಾದ ನೆಲವೂ ಹದವಾಗಿದೆ. ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಬೇಕಾದ ಎಲ್ಲ ಸಾಧ್ಯತೆಗಳೂ ಜೆಡಿಎಸ್ ಪಕ್ಷಕ್ಕೆ ಇವೆ. ಜಾತಿಯ ಚೌಕಟ್ಟನ್ನು ಬಿಟ್ಟು, ಕುಟುಂಬದ ಭಾರವನ್ನು ಬದಿಗಿಟ್ಟು ಗೌಡರ ಕುಟುಂಬ ಕೊಂಚ ವಿಶಾಲದೃಷ್ಟಿಯಿಂದ ನಡೆದುಕೊಂಡರೆ ಅದೆಲ್ಲವೂ ಸಾಧ್ಯ.
ಎಲ್ಲ ಜಾತಿ, ಜನಾಂಗ, ಧರ್ಮದವರನ್ನು ಒಂದುಗೂಡಿಸಿ ಮುನ್ನಡೆದಾಗಲೇ ದೇವೇಗೌಡರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ದೇಶದ ಪ್ರಧಾನಿಯೂ ಆಗಿದ್ದರು. ಇದನ್ನು ಅವರು ಮತ್ತು ಅವರ ಮಕ್ಕಳು ನೆನಪಿಸಿಕೊಂಡು ಮತ್ತೆ ಅಂತಹುದೇ ಪ್ರಯತ್ನವನ್ನು ಮುಂದುವರಿಸಿದರೆ, ರಾಜ್ಯದಲ್ಲಿ ಪಕ್ಷಕ್ಕೆ ಭವಿಷ್ಯದ ಬೆಳ್ಳಿರೇಖೆ ಮೂಡೀತು. ಕೇವಲ ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವುದಷ್ಟೇ ಅಜೆಂಡಾ ಆದರೆ ಮಗನಿಗೆ ಮುಖ್ಯಮಂತ್ರಿ ಪದವಿ ಸಿಕ್ಕೀತು. ಆದರೆ ಪಕ್ಷ ಉಳಿಯುವುದು ಕಷ್ಟ. 2004ರಲ್ಲಿ ಜೆಡಿಎಸ್ ಪಕ್ಷ ಕರ್ನಾಟಕ ವಿಧಾನಸಭೆಯಲ್ಲಿ 58 ಸ್ಥಾನ ಹೊಂದಿತ್ತು. ಇದೇ ಅವಧಿಯಲ್ಲಿಯೇ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆದರೆ 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗಳಿಸಿದ್ದು ಕೇವಲ 28 ಸ್ಥಾನ. 2013ರಲ್ಲಿ ಪಕ್ಷದ ಸದಸ್ಯರ ಸಂಖ್ಯೆ 40ಕ್ಕೆ ಏರಿಕೆಯಾದರೂ 2018ರಲ್ಲಿ ಅದು 37ಕ್ಕೆ ಕುಸಿಯಿತು. ಆದರೂ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರು. ನಂತರ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ 19ಕ್ಕೆ ಇಳಿಯಿತು. ಈಗ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಬರುವ ಮಾತನಾಡುತ್ತಿದ್ದಾರೆ. ದೇವೇಗೌಡರು ಮಗನನ್ನು ಮತ್ತೆ ಮುಖ್ಯಮಂತ್ರಿ ಮಾಡುವ ಕನಸಿನಲ್ಲಿದ್ದಾರೆ.
ರಾಜ್ಯದಲ್ಲಿ ಈವರೆಗೂ ರಾಷ್ಟ್ರೀಯ ಪಕ್ಷಗಳ ಹಾವು ಏಣಿಯಾಟವೇ ನಡೆಯುತ್ತಿದೆ. ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಕನ್ನಡಿಗರನ್ನು ಪ್ರತಿನಿಧಿಸುವ ಪಕ್ಷವೊಂದು ಇನ್ನೂ ಇಲ್ಲಿ ಬೆಳೆದಿಲ್ಲ. ಪ್ರಾದೇಶಿಕ ಪಕ್ಷ ಹುಟ್ಟು ಹಾಕುವ ಪ್ರಯತ್ನಗಳು ಬಹಳ ಹಿಂದಿನಿಂದ ನಡೆದಿದ್ದರೂ ಅಧಿಕಾರದ ಗದ್ದುಗೆ ಏರುವ ಮಟ್ಟಕ್ಕೆ ಯಾವುದೂ ಬೆಳೆಯಲಿಲ್ಲ. ಕರ್ನಾಟಕದ ಮತದಾರರು ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದೇ ವಿಶ್ಲೇಷಿಸಲಾಗುತ್ತದೆ. ಆದರೆ, ಅದು ನಿಜವಲ್ಲ. ಕರ್ನಾಟಕದಲ್ಲಿ ಹುಟ್ಟಿದ ಬಹುತೇಕ ಪ್ರಾದೇಶಿಕ ಪಕ್ಷಗಳು ಅವಸರದ ಕೂಸುಗಳೇ ವಿನಾ ರಾಜ್ಯದ ಮತದಾರರ ಶ್ರೇಯೋಭಿವೃದ್ಧಿ ಇಟ್ಟುಕೊಂಡು ಸರಿಯಾದ ಸಿದ್ಧಾಂತದಲ್ಲಿ ರೂಪುಗೊಂಡ ಪಕ್ಷಗಳಲ್ಲ. ತಮ್ಮ ರಾಜಕೀಯ ಅಭಿವೃದ್ಧಿಗೆ ಹುಟ್ಟಿಕೊಂಡ ಪಕ್ಷಗಳನ್ನು ಮತದಾರರು ಬೆಂಬಲಿಸಲಿಲ್ಲ ಅಷ್ಟೆ. ದಿನಬೆಳಗಾದರೆ ಹುಟ್ಟಿಕೊಳ್ಳುವ ಪ್ರಾದೇಶಿಕ ಪಕ್ಷಗಳ ಪರಾಕ್ರಮಕ್ಕೆ ಕನ್ನಡಿಗರು ಮರುಳಾಗಲಿಲ್ಲ. 1948ರಲ್ಲಿಯೇ ಸ್ಥಾಪನೆಯಾದ, 1967ರ ವೇಳೆಗೆ ತಮಿಳುನಾಡಲ್ಲಿ ಅಧಿಕಾರ ಸೂತ್ರ ಹಿಡಿದ ಡಿಎಂಕೆ ಪಕ್ಷದಂತಾಗಲಿ, ಅದರಿಂದ ಹುಟ್ಟಿಕೊಂಡ ಎಐಎಡಿಎಂಕೆಯಂತಾಗಲಿ, ಪಕ್ಕದ ಆಂಧ್ರಪ್ರದೇಶದ ಟಿಡಿಪಿಯಂತಾಗಲಿ, ತೆಲಂಗಾಣದ ಭಾರತ ರಾಷ್ಟ್ರ ಸಮಿತಿಯಂತಾಗಲಿ ಯಶಸ್ವಿ ರಾಜಕೀಯ ಪಕ್ಷವನ್ನು ಹುಟ್ಟು ಹಾಕುವುದು ಇಲ್ಲಿಯವರೆಗೂ ಕರ್ನಾಟಕದಲ್ಲಿ ಸಾಧ್ಯವಾಗಲಿಲ್ಲ.
ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವ ಪ್ರಾದೇಶಿಕ ರಾಜಕೀಯ ಪರ್ಯಾಯ ರೂಪುಗೊಳ್ಳಲೇ ಇಲ್ಲ ಎಂದೇನಿಲ್ಲ. 1960ರ ದಶಕದ ಆರಂಭದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಇಂತಹ ಪ್ರಯತ್ನವೊಂದು ನಡೆಯಿತು. ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕ ಏಕೀಕರಣದಲ್ಲಿ ದುಡಿದಿದ್ದ ಮತ್ತು ಮಹಾತ್ಮ ಗಾಂಧೀಜಿ ಅವರ ನಿಕಟವರ್ತಿಯೂ ಆಗಿದ್ದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದರು. ಸ್ವಾತಂತ್ರ್ಯ ದೊರಕಿದ ತಕ್ಷಣ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂಬ ಗಾಂಧೀಜಿ ಕರೆಗೆ ಸ್ಪಂದಿಸಿದ ಶಿವಮೂರ್ತಿ ಸ್ವಾಮಿ ಅವರು 1962ರಲ್ಲಿ ‘ಲೋಕ ಸೇವಕ ಸಂಘ’ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದ್ದರು. ಈ ಪಕ್ಷದಿಂದಲೇ ಶಿವಮೂರ್ತಿ ಸ್ವಾಮಿ ಅವರು ಕೊಪ್ಪಳದ ಲೋಕಸಭಾ ಸದಸ್ಯರೂ ಆಗಿದ್ದರು. ಮೈಸೂರು ವಿಧಾನಸಭೆಗೆ ಈ ಪಕ್ಷದಿಂದ ಐವರು ಸದಸ್ಯರು ಆಯ್ಕೆಯಾಗಿದ್ದರು. ಆದರೆ ನಂತರದ ದಿನಗಳಲ್ಲಿ ಪಕ್ಷ ಅಸ್ತಿತ್ವದಲ್ಲಿ ಉಳಿಯಲಿಲ್ಲ. ಆ ಪಕ್ಷದಿಂದ ಗೆದ್ದವರು ಕಾಂಗ್ರೆಸ್‌ನಲ್ಲಿ ಬೆರೆತು ಹೋದರು.
ಅರವತ್ತರ ದಶಕದಲ್ಲಿಯೇ ದಕ್ಷಿಣ ಕರ್ನಾಟಕದಲ್ಲಿಯೂ ಇಂತಹ ಪ್ರಯತ್ನವೊಂದು ನಡೆದಿತ್ತು. ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ನಾಯಕರಲ್ಲಿ ಪ್ರಮುಖರಾಗಿದ್ದ ಸಾಹುಕಾರ್ ಚೆನ್ನಯ್ಯ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ವಿರುದ್ಧ ಸಡ್ಡು ಹೊಡೆದು, 1967ರಲ್ಲಿ ‘ಜನತಾ ಪಕ್ಷ’ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದರು. ಆ ಪಕ್ಷದಿಂದ ಆಯ್ಕೆಯಾದ 30ಕ್ಕೂ ಹೆಚ್ಚು ಶಾಸಕರು ವಿಧಾನಸಭೆ ಪ್ರವೇಶಿಸಿದ್ದರು. ಆದರೆ, 1969ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಜನತಾ ಪಕ್ಷದ ಎಲ್ಲ ಶಾಸಕರೂ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಸೇರುವುದರೊಂದಿಗೆ ಜನತಾ ಪಕ್ಷವೂ ನಾಮಾವಶೇಷವಾಯಿತು.
ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದೇ ಕರೆಸಿಕೊಳ್ಳುವ ಕರ್ನಾಟಕದ ರಾಜಕೀಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ದೇವರಾಜ ಅರಸು ಅವರೂ ಪ್ರಾದೇಶಿಕ ಪಕ್ಷ ಸ್ಥಾಪನೆ ಮಾಡಿದ್ದರು. ಮೊದಲು ಅವರು ಸ್ಥಾಪಿಸಿದ್ದು ಕಾಂಗ್ರೆಸ್ (ಯು) ಎಂಬ ಪಕ್ಷ. ನಂತರ ಅವರು ‘ಕ್ರಾಂತಿರಂಗ’ ಸ್ಥಾಪಿಸಿದರು. ಕ್ರಾಂತಿರಂಗಕ್ಕೆ ಸೈದ್ಧಾಂತಿಕ ಸ್ಪಷ್ಟತೆ ಇತ್ತು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇತ್ತು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರ ಕಲ್ಯಾಣದ ಗುರಿ ಇತ್ತು. ಆದರೆ, ಈ ಪಕ್ಷ ಜನರ ಹೃದಯದಲ್ಲಿ ಬೇರು ಬಿಡುವುದಕ್ಕೆ ಮೊದಲೇ ದೇವರಾಜ ಅರಸು ನಿಧನರಾದರು.
ದೇವರಾಜ ಅರಸರ ನಿಧನದ ನಂತರ ಎಸ್. ಬಂಗಾರಪ್ಪ ಅವರು ಕ್ರಾಂತಿರಂಗವನ್ನು ಮುನ್ನಡೆಸಿದರು. 1983ರ ಚುನಾವಣೆಯಲ್ಲಿ ಕ್ರಾಂತಿರಂಗ 34 ಸ್ಥಾನ ಗಳಿಸಿತು. ಒಂದು ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಇದ್ದ ಕ್ರಾಂತಿರಂಗ ಕೂಡಾ ನಂತರದ ದಿನಗಳಲ್ಲಿ ಹೋಳಾಯಿತು. ಹಾಳಾಯಿತು. ಕ್ರಾಂತಿರಂಗದ ನೇತೃತ್ವ ವಹಿಸಿದ್ದ ಬಂಗಾರಪ್ಪ ಅವರೂ ಮುಂದಿನ ದಿನಗಳಲ್ಲಿ ಕರ್ನಾಟಕ ಕ್ರಾಂತಿಕಾರಿ ಪಕ್ಷ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ ಎಂಬ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿದ್ದರೂ ಯಾವುದೂ ಯಶಸ್ವಿಯಾಗಲಿಲ್ಲ.
ಕೆಂಗಲ್ ಹನುಮಂತಯ್ಯ ‘ಸ್ವರಾಜ್ ಪಕ್ಷ’, ಎ.ಕೆ. ಸುಬ್ಬಯ್ಯ ‘ಕನ್ನಡ ನಾಡು’, ಪ್ರೊ. ಎಂ.ಡಿ. ನಂಜುಂಡಸ್ವಾಮಿ ‘ಕನ್ನಡ ದೇಶ’, ಪಿ. ಲಂಕೇಶ್ ‘ಪ್ರಗತಿ ರಂಗ’, ದೇವನೂರ ಮಹಾದೇವ ‘ಸರ್ವೋದಯ ಕರ್ನಾಟಕ’, ಶ್ರೀರಾಮುಲು ‘ಬಿಎಸ್ಆರ್ ಕಾಂಗ್ರೆಸ್’, ಬಿ.ಎಸ್. ಯಡಿಯೂರಪ್ಪ ಅವರ ‘ಕರ್ನಾಟಕ ಜನತಾ ಪಕ್ಷ’ ಎಲ್ಲವೂ ಮತದಾರರ ಮನದಾಳದಲ್ಲಿ ಇಳಿಯಲು ವಿಫಲವಾದವು.
ಕರ್ನಾಟಕದ ನಿಜವಾದ ಪ್ರಾದೇಶಿಕ ಪಕ್ಷ ಎಂದು ದೇವೇಗೌಡರು ಹೇಳಿಕೊಳ್ಳುವ ಜಾತ್ಯತೀತ ಜನತಾ ದಳ ಈಗಲೂ ಜೀವಂತವಾಗಿದೆ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಬಿಟ್ಟರೆ ರಾಜ್ಯವ್ಯಾಪಿ ಗುರುತಿಸುವ ನಾಯಕರು ಇಲ್ಲ. ಸಿದ್ಧಾಂತದ ಸ್ಪಷ್ಟತೆಯ ಕೊರತೆ, ಅಗತ್ಯಕ್ಕೆ ತಕ್ಕಂತೆ ದಿಢೀರ್ ತೆಗೆದುಕೊಳ್ಳುವ ರಾಜಕೀಯ ತೀರ್ಮಾನಗಳು, ವಿಪರೀತ ಜಾತಿ ಪ್ರೇಮ ಎಲ್ಲವೂ ಆ ಪಕ್ಷಕ್ಕೆ ಹೊರೆಯಾಗಿವೆ. ಇವೆಲ್ಲವನ್ನೂ ಕಳಚಿಕೊಂಡು ನಿರ್ದಿಷ್ಟ ಸೈದ್ಧಾಂತಿಕ ಸ್ಪಷ್ಟತೆ ಕಂಡುಕೊಂಡು ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವ ಮನಸ್ಸು ಮಾಡಿದರೆ ಜೆಡಿಎಸ್‌ಗೆ ಜನರೂ ‘ಎಸ್’ ಎಂದಾರು. ಇಲ್ಲವಾದರೆ ‘ನೋ, ಥ್ಯಾಂಕ್ಸ್’ ಎನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.