ADVERTISEMENT

ಅನುಸಂಧಾನ ಅಂಕಣ: ಮತದಾರನೇ ಮಂಕುತಿಮ್ಮನು!

ರವೀಂದ್ರ ಭಟ್ಟ
Published 26 ಫೆಬ್ರುವರಿ 2026, 23:30 IST
Last Updated 26 ಫೆಬ್ರುವರಿ 2026, 23:30 IST
   
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಷ್ಟು ಅಸಹಾಯಕ ಬೇರೊಬ್ಬರಿಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿನ ಸದ್ಯದ ಸ್ಥಿತಿ ನಿದರ್ಶನದಂತಿದೆ. ಮುಖ್ಯಮಂತ್ರಿ ಕುರ್ಚಿಯ ಸುತ್ತ ಗಿರಕಿ ಹೊಡೆಯುತ್ತಿರುವ ರಾಜಕಾರಣದಿಂದಾಗಿ ಆಡಳಿತ ಯಂತ್ರ ತೂಕಡಿಸುತ್ತಿದೆ; ಅಭಿವೃದ್ಧಿ ಚಟುವಟಿಕೆಗಳು ಕುಂಟುತ್ತಿವೆ. ಮತದಾರನೀಗ ಇಂಗು ತಿಂದ ಮಂಗ.

‘ಸರಕಾರ ಹರಿಗೋಲು, ತೆರೆಸುಳಿಗಳತ್ತಿತ್ತ, ಸುರೆಕುಡಿದವರು ಕೆಲರು ಹುಟ್ಟು ಹಾಕುವರು, ಬಿರುಗಾಳಿ ಬೀಸುವುದು, ಜನವೆದ್ದು ಕುಣಿಯುವುದು, ಉರುಳದಿಹುದಚ್ಚರಿಯು–ಮಂಕುತಿಮ್ಮ’.

ಸುಮಾರು ಎಂಟು ದಶಕಗಳ ಹಿಂದೆ ಡಿವಿಜಿ ಅವರು ಇಂತಹ ಮಾತೊಂದನ್ನು ಹೇಳಿದ್ದರು. ಆಗ ರಾಜಕೀಯ ಇಷ್ಟು ಕೆಟ್ಟಿರಲಿಲ್ಲ. ಸಾರ್ವಜನಿಕ ಜೀವನವೂ ಇಷ್ಟು ಹಾಳಾಗಿರಲಿಲ್ಲ. ರಾಜಕಾರಣಿಗಳಲ್ಲಿ ಅಷ್ಟೋ ಇಷ್ಟೋ ಪ್ರಾಮಾಣಿಕತೆ ಇತ್ತು. ಅಂತಹ ಸಂದರ್ಭದಲ್ಲಿಯೇ ಡಿವಿಜಿ ಇಂತಹ ಮಾತನ್ನು ಹೇಳಿದ್ದಾರೆಂದರೆ, ಈಗ ಅವರು ಬದುಕಿದ್ದರೆ ಏನು ಹೇಳುತ್ತಿದ್ದರೋ ಏನೋ?

‘ಮಂಕುತಿಮ್ಮನ ಕಗ್ಗ’ದಲ್ಲಿ ಬರುವ ಈ ಪದ್ಯ ಇಂದಿನ ರಾಜಕೀಯಕ್ಕೆ ಎಷ್ಟು ಹತ್ತಿರವಾಗಿದೆ ಎಂದರೆ, ಇಂದಿನ ಸ್ಥಿತಿಯನ್ನು ನೋಡಿಯೇ ಅವರು ಬರೆದಿದ್ದಾರೇನೋ ಎನ್ನುವಂತಿದೆ. ಸರಕಾರವೆಂಬುದು ಒಂದು ದೋಣಿಯಂತೆ. ರಾಜಕೀಯ ಅಸ್ಥಿರತೆಗೆ ಸಿಕ್ಕು ಅದು ಅಲುಗಾಡುತ್ತಿದೆ. ಅಧಿಕಾರದ ಅಹಂಕಾರ ಮತ್ತು ಭ್ರಷ್ಟಾಚಾರದಲ್ಲಿ ಮಗ್ನರಾಗಿರುವ ನಾಯಕರು ದೋಣಿಯನ್ನು ಮುನ್ನಡೆಸುತ್ತಿದ್ದಾರೆ. ರಾಜಕೀಯ ಅಸ್ಥಿರತೆ ಮತ್ತು ಜನಾಕ್ರೋಶದ ಬಿರುಗಾಳಿ ಬೀಸುತ್ತಿದೆ. ಆದರೂ ದೋಣಿ ಮುಳುಗದೇ ಇರುವುದು, ಅಂದರೆ ಸರ್ಕಾರ ನಡೆಯುತ್ತಿರುವುದೇ ಅಚ್ಚರಿ ಎಂಬುದು ಅವರ ಮಾತಿನ ಸಾರಾಂಶ. ಸದ್ಯದ ರಾಜ್ಯ ರಾಜಕೀಯ ಮತ್ತು ಸರ್ಕಾರದ ನಡೆಯನ್ನು ನೋಡಿದರೆ ನಮಗೂ ಹಾಗೆಯೇ ಅನ್ನಿಸುತ್ತದೆ.

ADVERTISEMENT

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಕೇಳಿಬರುತ್ತಿರುವ ಎರಡೇ ಶಬ್ದಗಳೆಂದರೆ ಅದು ‘ಅಧಿಕಾರ ಹಸ್ತಾಂತರ’. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡ್ತಾರಾ? ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾ? ಎನ್ನುವ ಪ್ರಶ್ನೆಗಳ ಸುತ್ತಲೇ ರಾಜ್ಯದ ರಾಜಕೀಯ ಗಿರಕಿ ಹೊಡೆಯುತ್ತಿದೆ. ಇದರಿಂದಾಗಿ ಆಡಳಿತ ಯಂತ್ರವೂ ಸ್ಥಗಿತವಾಗಿದೆ. ಅಭಿವೃದ್ಧಿ ಕೆಲಸಗಳಿಗೆ ಗ್ರಹಣ ಹಿಡಿದಿದೆ. ಅಧಿಕಾರಶಾಹಿಗಳು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಸಮಸ್ಯೆ ಬಗೆಹರಿಯಲಿ. ಆ ನಂತರವೇ ಕೆಲಸ ಮಾಡಿದರಾಯಿತು ಎನ್ನುವ ಮೂಡಿನಲ್ಲಿದ್ದಾರೆ. ‘ಬಡವನ ಸಿಟ್ಟು ದವಡೆಗೆ ಮೂಲ’ ಎನ್ನುವ ಹಾಗೆ ಜನಸಾಮಾನ್ಯರ ಆಕ್ರೋಶ ಪ್ರಭುತ್ವವನ್ನು ತಾಗುತ್ತಿಲ್ಲ. ಜನರು ಚುನಾವಣೆ ಬರುವವರೆಗೆ ಕಾಯಬೇಕು ಅಷ್ಟೆ. ಅವರು ಬಡಿಗೆ ಹಿಡಿದುಕೊಂಡು ಕಾಯುತ್ತಿದ್ದಾರೆ. ರಾಜ್ಯದ ಆಡಳಿತ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಾಗಲೆಲ್ಲ ಮತದಾರರು ತಮ್ಮ ಕೈಯಲ್ಲಿರುವ ಲಾಠಿ ಬೀಸಿದ್ದಾರೆ. ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ. ಆದರೂ ಅವರು ಪಾಠ ಕಲಿತಿಲ್ಲ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಒಂದು ನಿರ್ದಿಷ್ಟ ತೀರ್ಮಾನವನ್ನು ಕೈಗೊಳ್ಳದೆ ಪಕ್ಷದ ರಾಜ್ಯ ಘಟಕವನ್ನೂ, ರಾಜ್ಯವನ್ನೂ ಅಸ್ಥಿರತೆಯಲ್ಲಿ ಸಿಲುಕಿಸಿದ ಹೊಣೆಯನ್ನು ಕಾಂಗ್ರೆಸ್ ಹೈಕಮಾಂಡ್ ಹೊರಲೇಬೇಕಿದೆ. ಎರಡೂವರೆ ವರ್ಷದ ನಂತರ ಅಧಿಕಾರ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಒಪ್ಪಂದವಾಗಿದೆ. ಇದು ನಾಲ್ಕು ಗೋಡೆಯ ನಡುವೆ ನಡೆದ ರಹಸ್ಯ ಒಪ್ಪಂದವಲ್ಲ. ಹೈಕಮಾಂಡ್ ಎದುರಿಗೇ ಆಗಿದೆ ಎಂದು ಡಿ.ಕೆ. ಶಿವಕುಮಾರ್ ಪದೇ ಪದೇ ಹೇಳುತ್ತಿದ್ದಾರೆ. ಅಂತಹ ಯಾವುದೇ ಒಪ್ಪಂದ ಆಗಿಲ್ಲ. ಸಿದ್ದರಾಮಯ್ಯ ಐದು ವರ್ಷಕ್ಕೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬೆಂಬಲಿಗರು ಹೇಳುತ್ತಾರೆ. ಒಪ್ಪಂದ ಆಗಿದೆ ಅಥವಾ ಇಲ್ಲ ಎಂದು ಹೇಳುವ ಹೊಣೆ ಕಾಂಗ್ರೆಸ್ ಹೈಕಮಾಂಡ್‌ನದ್ದೇ ಆಗಿದೆ. ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಳ್ಳಲು ಹೈಕಮಾಂಡ್‌ಗೆ ಹಲವಾರು ಸಮಸ್ಯೆ ಇರಬಹುದು. ಆದರೆ, ಅದು ರಿಸ್ಕ್ ತೆಗೆದುಕೊಳ್ಳದಿದ್ದರೆ ಕರ್ನಾಟಕದ ಮತದಾರ ಒಂದು ಗಟ್ಟಿ ನಿರ್ಧಾರಕ್ಕೆ ಬರುವುದಂತೂ ನಿಜ.

ಕೇರಳ, ತಮಿಳುನಾಡು, ಅಸ್ಸಾಂ ರಾಜ್ಯಗಳಲ್ಲಿ ಚುನಾವಣೆ ಇದೆ. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದರೆ ತಪ್ಪು ಸಂದೇಶ ಹೋಗಬಹುದು ಎಂಬ ಭಯ ಹೈಕಮಾಂಡ್ ಅನ್ನು ಕಾಡುತ್ತಿರಬಹುದು. ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಪ್ರದರ್ಶಿಸುತ್ತಿರುವ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಇಳಿಸುವ ತೀರ್ಮಾನ ಕೈಗೊಂಡರೆ, ಈ ವರ್ಗಗಳು ಪಕ್ಷದಿಂದ ದೂರ ಸರಿಯಬಹುದು ಎಂಬ ಭೀತಿಯೂ ಇರಬಹುದು. ಅಂತಹ ನಿರ್ಧಾರದಿಂದ ದೇಶದಾದ್ಯಂತ ನಡೆಸುತ್ತಿರುವ ಹೋರಾಟಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕವೂ ಇರಬಹುದು. ಯಾವುದೇ ನಿರ್ಧಾರ ಕೈಗೊಳ್ಳದೆ ಇದ್ದು, ನಡೆಯುವಷ್ಟು ದಿನ ನಡೆಯಲಿ ಎಂಬ ಉದಾಸೀನವೂ ಇರಬಹುದು. ಆದರೆ, ಇದೆಲ್ಲವೂ ರಾಜ್ಯದ ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದೇ ಒಂದು ಮತ್ತೊಂದು ರಾಜ್ಯದಲ್ಲಿ. ಈಗಲೂ ಗಟ್ಟಿ ನಿರ್ಧಾರ ಕೈಗೊಳ್ಳದೇ ಇದ್ದರೆ ಇದ್ದ ಒಂದು ರಾಜ್ಯವೂ ಕೈ ತಪ್ಪಿ ಹೋಗಬಹುದು.

ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರವೂ ಇದೆ. ಅವರ ಸಂಘಟನಾ ಚಾತುರ್ಯ ಕೆಲಸ ಮಾಡಿದೆ. ಒಕ್ಕಲಿಗ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿರುವುದರಲ್ಲಿ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮುಂದಾಲೋಚನೆ ಇತ್ತು. ಶಿವಕುಮಾರ್ ಅವರ ಸಂಘಟನಾ ಶಕ್ತಿ ಏನು ಎನ್ನುವುದು ಹೈಕಮಾಂಡ್‌ಗೆ ಗೊತ್ತಿಲ್ಲದ ವಿಷಯ ಏನಲ್ಲ. ಅದು ಅಸ್ಸಾಂ ಆಗಲಿ, ಗುಜರಾತ್ ಆಗಲಿ, ತೆಲಂಗಾಣ ಆಗಲಿ, ಎಲ್ಲಿಯಾದರೂ ಪಕ್ಷಕ್ಕೆ ಸಂಕಷ್ಟ ಬಂದಿದೆ ಎಂದಾದರೆ ಮೊದಲು ಕರೆ ಬರುವುದು ಶಿವಕುಮಾರ್ ಅವರಿಗೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಶಿವಕುಮಾರ್ ಈಗ ಮುಖ್ಯಮಂತ್ರಿ ಆಗದೇ ಇದ್ದರೆ ಒಕ್ಕಲಿಗರು ಮುನಿಸಿಕೊಂಡಾರು ಎಂಬ ಭಯವೂ ಹೈಕಮಾಂಡ್‌ಗೆ ಇದೆ. ಕೇರಳ ಮತ್ತು ಅಸ್ಸಾಂನಲ್ಲಿ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ತಮಿಳುನಾಡಿನಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಯಾವ ಸಾಧ್ಯತೆಯೂ ಇಲ್ಲ. ಹೀಗಿರುವಾಗ ಇಲ್ಲಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಅಡ್ಡಿ ಏನು ಎಂಬುದು ಅವರ ಬೆಂಬಲಿಗರ ವಾದ. ಸಂಕಷ್ಟ ಪರಿಹಾರಕ್ಕೆ ಬೇಕು; ಅಧಿಕಾರಕ್ಕೆ ಬೇಡ ಎಂದರೆ ಇದ್ಯಾವ ಸೀಮೆ ನ್ಯಾಯ ಎಂದು ಶಿವಕುಮಾರ್ ಬೆಂಬಲಿಗರು ಕೇಳುತ್ತಿದ್ದಾರೆ. ಆದರೂ ಕಾಂಗ್ರೆಸ್ ಹೈಕಮಾಂಡ್ ಮುಗುಂ ಆಗಿಯೇ ಇದೆ.

ಇನ್ನು ಮತದಾರರ ಕತೆ ಕೇಳಿ. ಅವರಿಗೆ ಯಾರು ಮುಖ್ಯಮಂತ್ರಿಯಾಗಿದ್ದಾರೆ; ಯಾರು ಮುಖ್ಯಮಂತ್ರಿಯಾಗುತ್ತಾರೆ ಎನ್ನುವುದು ಮುಖ್ಯವೇ ಅಲ್ಲ. ಅಧಿಕಾರ ಹಸ್ತಾಂತರದ ಒಪ್ಪಂದ ಆಗಿದೆಯೋ ಇಲ್ಲವೋ ಎನ್ನುವುದೂ ಅವರಿಗೆ ಬೇಕಾಗಿಲ್ಲ. ಕುರುಬನೋ, ಒಕ್ಕಲಿಗನೋ, ದಲಿತನೋ ಯಾವುದೇ ಜಾತಿಯವನು ಮುಖ್ಯಮಂತ್ರಿಯಾಗಲಿ. ಜನರ ಕಷ್ಟ ಸುಖ ವಿಚಾರಿಸಲಿ, ಆಡಳಿತ ಸರಿಯಾಗಿ ನಡೆಸಲಿ. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಿಕೊಂಡು ಹೋಗಲಿ. ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಲಿ. ಭ್ರಷ್ಟಾಚಾರ ಕಡಿಮೆಯಾಗಲಿ. ಇದನ್ನೆಲ್ಲ ಮಾಡುವವನೊಬ್ಬ ಮುಖ್ಯಮಂತ್ರಿಯಾಗಲಿ ಎನ್ನುವುದಷ್ಟೇ ಅವರ ಬಯಕೆ. ಅದಕ್ಕೊಂದು ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಹುಡುಕಬೇಕಾಗಿದೆ.  

ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಬಯಸುವುದು ಸಹಜ ಕ್ರಿಯೆ. ಅದಕ್ಕೆ ಅವರು ತಮ್ಮ ಪ್ರಭಾವವನ್ನೂ ಬಳಸುತ್ತಾರೆ. ತಂತ್ರಗಳನ್ನು ಹೆಣೆಯುತ್ತಾರೆ. ದಲಿತ ಮುಖ್ಯಮಂತ್ರಿ ಎಂಬ ಬಾಣವನ್ನೂ ಬಿಡುತ್ತಾರೆ. ಜಾತಿಯನ್ನು ಪ್ರಸ್ತಾಪಿಸುತ್ತಾರೆ. ‘ಅಹಿಂದ ಕಾರ್ಡ್’ ಬಳಸುತ್ತಾರೆ. ಎಲ್ಲವೂ ಸಹಜ. ಅಧಿಕಾರದಿಂದ ಇಳಿಯುವುದು ಯಾರಿಗೂ ಖುಷಿ ಕೊಡುವ ಸಮಾಚಾರ ಅಲ್ಲ. ಉಳಿಸಿಕೊಳ್ಳಲು ಸರ್ವ ಪ್ರಯತ್ನವನ್ನೂ ನಡೆಸುವುದು ಸರಿಯೇ ಸರಿ. ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಯತೀಂದ್ರ ಅಂತೂ ದಿನಾ ಬೆಳಿಗ್ಗೆ ತನ್ನ ತಂದೆ ಐದೂ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳುತ್ತಲೇ ಇರುತ್ತಾರೆ. ಸಿದ್ದರಾಮಯ್ಯ ಬೆಂಬಲಿಗರೂ ಅಷ್ಟೆ. ಇದರಲ್ಲಿ ಅಚ್ಚರಿ ಎನ್ನುವುದು ಏನೂ ಇಲ್ಲ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ಮುಖ್ಯಮಂತ್ರಿ ಗಾದಿಯನ್ನು ಪಡೆಯಲು ಯತ್ನ ನಡೆಸುತ್ತಲೇ ಇದ್ದಾರೆ. ಅವರ ಬೆಂಬಲಿಗರೂ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುಹೂರ್ತವನ್ನು ನಿಗದಿ ಮಾಡುತ್ತಲೇ ಇದ್ದಾರೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಅವರು ತಮ್ಮ ಅಣ್ಣ ಶಿವಕುಮಾರ್ ಮುಖ್ಯಮಂತ್ರಿಯಾಗುವ ದಿನಕ್ಕಾಗಿ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಶಿವಕುಮಾರ್ ಬೆಂಬಲಿಗರೂ ತಂತ್ರಗಳನ್ನು ಹೆಣೆಯುತ್ತಾರೆ. ಅದೂ ಸಹಜ. ಎಷ್ಟೇ ಪ್ರಭಾವಿಯಾಗಿದ್ದರೂ ಅಧಿಕಾರದ ಗದ್ದುಗೆ ಏರುವುದು ಕಷ್ಟ. ಎಷ್ಟೇ ದುರ್ಬಲನಾಗಿದ್ದರೂ ಅಧಿಕಾರದಿಂದ ಇಳಿಸುವುದು ಕಷ್ಟ. ಇದು ಈಗ ಶಿವಕುಮಾರ್ ಅರಿವಿಗೆ ಬಂದಿರಬಹುದು.

ಗ್ಯಾರಂಟಿಯನ್ನು ನಂಬಿಯೋ, ಬಿಜೆಪಿ ಸರ್ಕಾರದ ಆಡಳಿತದ ವೈಖರಿಗೆ ಕಂಗೆಟ್ಟೋ, ಅಂತೂ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದ ಕರ್ನಾಟಕದ ಮತದಾರರ ಸ್ಥಿತಿ ಏನಾಗಿದೆ? ಇಂಗು ತಿಂದ ಮಂಗನಂತಾಗಿದೆ. ಮತದಾರನೇ ಈಗ ‘ಮಂಕುತಿಮ್ಮ’ ಎನ್ನುವುದೂ ಸಾಬೀತಾಗಿದೆ. ಮತದಾರ ‘ಮಂಕುತಿಮ್ಮ’ನಾದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಸ್ಥಿತಿ? ಅವ ‘ಮಂಕುತಿಮ್ಮ’ನ ತಮ್ಮ ಅಷ್ಟೆ.

ರವೀಂದ್ರ ಭಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.