ADVERTISEMENT

ನಿಸರ್ಗ ಮುನಿದರೆ ಮನುಷ್ಯನಿಗಷ್ಟೇ ಕಷ್ಟ!

ರವೀಂದ್ರ ಭಟ್ಟ
Published 27 ಫೆಬ್ರುವರಿ 2019, 20:15 IST
Last Updated 27 ಫೆಬ್ರುವರಿ 2019, 20:15 IST
   

ಕೊರಿಯಾದಲ್ಲಿ ಒಂದು ಪ್ರಯೋಗ ನಡೆಸಲಾಯಿತು. ಬಿಸಿ ನೀರು ತುಂಬಿದ್ದ ತಪ್ಪಲೆಗೆ ಒಂದು ಕಪ್ಪೆಯನ್ನು ಹಾಕಿದರು. ನೀರಿನ ಬಿಸಿ ತಾಗಿದ ತಕ್ಷಣ ಕಪ್ಪೆ ಮೇಲಕ್ಕೆ ನೆಗೆದು ತನ್ನ ಪ್ರಾಣ ಉಳಿಸಿಕೊಂಡಿತು. ಮತ್ತೊಂದು ಪ್ರಯೋಗ ಮಾಡಿದರು. ತಣ್ಣೀರಿನ ತಪ್ಪಲೆಗೆ ಕಪ್ಪೆಯನ್ನು ಹಾಕಿ ನಿಧಾನವಾಗಿ ನೀರನ್ನು ಬಿಸಿ ಮಾಡಲು ಆರಂಭಿಸಿದರು. ಹಂತ ಹಂತವಾಗಿ ನೀರು ಬಿಸಿಯಾಗುತ್ತಿದ್ದುದರಿಂದ ಕಪ್ಪೆ ಅದನ್ನು ಸಹಿಸಿಕೊಳ್ಳಲು ಆರಂಭಿಸಿತು. ಬಿಸಿ ಹೆಚ್ಚಾಗುತ್ತಾ ಹೋಗಿ ಕಪ್ಪೆ ಬಿಸಿ ನೀರಿನಲ್ಲಿ ಬೆಂದು ಹೋಯಿತು. ಕಪ್ಪೆಗೆ ನೀರು ಬಿಸಿಯಾಗುವುದು ಗೊತ್ತಾಗುತ್ತಿತ್ತು. ಆದರೆ ಅದನ್ನು ಸಹಿಸಿಕೊಳ್ಳುತ್ತಿತ್ತು. ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಈಗ ನಮ್ಮ ಸ್ಥಿತಿಯೂ ಹಾಗೆಯೇ ಆಗಿದೆ. ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದೆ. ಈ ಬಾರಿ ಫೆಬ್ರುವರಿ ತಿಂಗಳಿನಲ್ಲಿಯೇ ಬಿಸಿಲು 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮುಂದೆ ಇದು 40–45ಕ್ಕೂ ಏರಬಹುದು. ಆಗಲೂ ನಾವು ಸಹಿಸಿಕೊಳ್ಳುತ್ತೇವೆ. ಯಾಕೆಂದರೆ ನಾವು ತಪ್ಪಿಸಿಕೊಳ್ಳಲು ಸಿದ್ಧರಿಲ್ಲ.

ಹಂತ ಹಂತವಾಗಿ ಏರುತ್ತಿರುವ ತಾಪಮಾನವನ್ನು ತಡೆಯುವುದು ನಮ್ಮ ಕೈಯಲ್ಲಿಯೇ ಇದೆ. ಯಾಕೆಂದರೆ ನಿಸರ್ಗ ಮುನಿದಷ್ಟೂ ತೊಂದರೆಗೆ ಸಿಲುಕುವುದು ಮನುಷ್ಯನೇ ವಿನಾ ಪ್ರಾಣಿಗಳಲ್ಲ. ಪರಿಸರವನ್ನು ಹಾಳು ಮಾಡಿದ್ದು ಸಹ ಆತನೇ ವಿನಾ ಇತರ ಪ್ರಾಣಿಗಳಲ್ಲ. ಮನುಷ್ಯ ಈಗ ನಿಸರ್ಗದ ಕೂಸಾಗಿ ಉಳಿದಿಲ್ಲ. ನಿಸರ್ಗವನ್ನು ಹಾಳು ಮಾಡುವುದರಲ್ಲಿಯೇ ಅವನ ಚಿತ್ತ ನೆಟ್ಟಿದೆ. ಆದರೆ ಮನುಷ್ಯನನ್ನು ಬಿಟ್ಟು ಉಳಿದ ಎಲ್ಲ ಪ್ರಾಣಿಗಳೂ ನಿಸರ್ಗಕ್ಕೆ ಹೊಂದಿಕೊಂಡು ಬಾಳುತ್ತಿವೆ. ಮನುಷ್ಯನನ್ನು ಬಿಟ್ಟು ಬೇರೆ ಯಾವುದೇ ಪ್ರಾಣಿಗಳಿಗೆ ವಾಸ ಮಾಡಲು ಕಾಂಕ್ರೀಟ್ ಕಾಡು ಬೇಕಿಲ್ಲ. ಯಾವುದೇ ಪ್ರಾಣಿಗಳಿಗೆ ಹಗಲು ರಾತ್ರಿಯಾಗಬೇಕಿಲ್ಲ. ರಾತ್ರಿ ಹಗಲಾಗಬೇಕಿಲ್ಲ. ರಾತ್ರಿ ಮಾಡುವ ಕೆಲಸವನ್ನು ಅವು ರಾತ್ರಿಯೇ ಮಾಡುತ್ತವೆ. ಹಗಲು ಮಾಡುವ ಕೆಲಸವನ್ನು ಹಗಲಿನಲ್ಲಿಯೇ ಮಾಡುತ್ತವೆ. ಮನುಷ್ಯನಿಗೆ ಇದರ ಹಂಗಿಲ್ಲ. ಆತ ಹಗಲಿನ ಕೆಲಸವನ್ನು ರಾತ್ರಿಯೂ, ರಾತ್ರಿಯ ಕೆಲಸವನ್ನು ಹಗಲಿನಲ್ಲಿಯೂ ಮಾಡುತ್ತಾನೆ. ರಾತ್ರಿಯನ್ನೇ ಹಗಲು ಮಾಡುತ್ತಾನೆ. ನಿಸರ್ಗದಿಂದ ದೂರವಾಗುತ್ತಿರುವುದರಿಂದಲೇ ಅಪಾಯದ ತೂಗುಗತ್ತಿಯನ್ನು ನೇತು ಹಾಕಿಕೊಂಡೇ ಬದುಕುತ್ತಿದ್ದಾನೆ. ಅಪಾಯ ಇನ್ನೂ ಬಹಳ ದೂರದಲ್ಲಿದೆ ಎಂದು ಸುಖವಾಗಿದ್ದಾನೆ. ಅಪಾಯದ ಎಚ್ಚರಿಕೆಯ ಗಂಟೆ ಕೂಡ ಅವನ ಕಿವಿಗಳಿಗೆ ಕೇಳಿಸುತ್ತಿಲ್ಲ.

ಎಲ್ಲಿಯೇ ಭೂಕಂಪವಾಗಲಿ, ಭೂಮಿ ಕುಸಿಯಲಿ, ಸುನಾಮಿಯಾಗಲಿ, ಕಾಡಿಗೆ ಬೆಂಕಿ ಬೀಳಲಿ ಪ್ರಾಣಿಗಳು ಅವುಗಳಿಂದ ತಪ್ಪಿಸಿಕೊಳ್ಳುತ್ತವೆ. ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಿ ಭೂಕುಸಿತವಾದಾಗ ವನ್ಯಪ್ರಾಣಿಗಳಿಗೆ ಹಾನಿಯಾಗಿದ್ದು ಕಡಿಮೆ. ಬಂಡೀಪುರ ಅರಣ್ಯದಲ್ಲಿ ಸಂಭವಿಸಿರುವ ಬೆಂಕಿ ಅವಘಡದಲ್ಲಿ ಕೂಡ ವನ್ಯಪ್ರಾಣಿಗಳು ಅದರಿಂದ ತಪ್ಪಿಸಿಕೊಂಡಿವೆ. 10 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದ ಅರಣ್ಯ ಬೆಂಕಿಗೆ ಆಹುತಿಯಾದರೂ ಪ್ರಾಣಿಗಳು ಪಾರಾಗಿವೆ. ಮಾನವ ಮಾತ್ರ ಸಂಕಟ ಪಡುತ್ತಿದ್ದಾನೆ. ಯಾಕೆಂದರೆ ನಿಸರ್ಗಕ್ಕೆ ಬೆಂಕಿ ಕೊಟ್ಟವನೇ ಅವನು. ಮಾಡಿದ್ದುಣ್ಣೋ ಮಾರಾಯ ಎನ್ನುವ ಸ್ಥಿತಿ.

ADVERTISEMENT

ಮಾನವನನ್ನು ಅತ್ಯಂತ ಬುದ್ಧಿವಂತ ಪ್ರಾಣಿ ಎನ್ನಲಾಗುತ್ತದೆ. ಆದರೆ ಆಧುನಿಕ ಮಾನವನಿಗೆ ಪ್ರಾಣಿಗಳ ಭಾಷೆ ತಿಳಿಯುವುದಿಲ್ಲ. ನಿಮ್ಮ ಮನೆಯಲ್ಲಿ ಸಾಕಿದ ನಾಯಿಗೆ ನೀವು ಹೇಳಿದ ಎಲ್ಲ ಮಾತುಗಳೂ ಅರ್ಥವಾಗುತ್ತವೆ. ನೀವು ಕನ್ನಡದಲ್ಲಿ ಮಾತನಾಡಿದರೆ ಅದನ್ನು ತಿಳಿದುಕೊಳ್ಳುತ್ತದೆ. ಇಂಗ್ಲಿಷ್, ಹಿಂದಿ, ತೆಲುಗು ಹೀಗೆ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ನಾಯಿಗಳು ಅರ್ಥ ಮಾಡಿಕೊಳ್ಳುತ್ತವೆ. ನಿಮ್ಮ ಮನೆಯಲ್ಲಿ ಸಾಕಿದ ಬೆಕ್ಕು, ಹಸು ಕೂಡ ಮಾನವನ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲವು. ಆದರೆ ನಾಯಿ ಕೂಗಿದರೆ, ಬೆಕ್ಕು ಕೂಗಿದರೆ, ಹಸು ಅಂಬಾ ಎಂದರೆ ಆಧುನಿಕ ಮಾನವನಿಗೆ ಅರ್ಥವಾಗುವುದಿಲ್ಲ. ಅವು ಕೂಗಿದಷ್ಟೂ ಇವನಿಗೆ ಕಿರಿಕಿರಿ ಆಗುತ್ತದೆ ಅಷ್ಟೆ. ನಿಸರ್ಗಕ್ಕೆ ಸಂಬಂಧಿಸಿದಂತೆ ಮನುಷ್ಯ ಬುದ್ಧಿವಂತ ಎನ್ನುವುದು ಭ್ರಮೆ ಅಷ್ಟೆ.

ಚಿಂಪಾಂಜಿ ಮನುಷ್ಯನ ಜೊತೆಗೆ ಬಹಳ ಕಾಲ ಇದ್ದರೆ ಆತನ ಭಾಷೆ ಅರ್ಥ ಮಾಡಿಕೊಳ್ಳಬಹುದು. ಮನುಷ್ಯನ ಜೊತೆಗೆ ಸಂವಹನವನ್ನೂ ಮಾಡಬಹುದು. ಮನುಷ್ಯನ ಬೆಸ್ಟ್ ಫ್ರೆಂಡ್ ಎಂದು ಗುರುತಿಸಲಾಗುವ ಡಾಲ್ಫಿನ್ ಕೂಡ ಆತನಿಗೆ ಹತ್ತಿರವಾಗಬಲ್ಲದು. ತನಗೆ ಬರುವ ಯಾವುದೇ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಶಕ್ತಿ ಅದಕ್ಕೆ ಇದೆ. ಪೆಂಗ್ವಿನ್ ಕೂಡ ಬುದ್ಧಿವಂತ ಪ್ರಾಣಿ. ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡರೂ ಅದು ತನ್ನದೇ ಪ್ರತಿಬಿಂಬ ಎಂದು ತಿಳಿದುಕೊಳ್ಳುವಷ್ಟು ಬುದ್ಧಿ ಅದಕ್ಕೆ ಇದೆ. ಇನ್ನು ಗಿಳಿಗಳ ಬಗ್ಗೆ ಕೇಳುವುದೇ ಬೇಡ. ಅವು ಮನುಷ್ಯನಂತೆಯೇ ಮಾತನಾಡುತ್ತವೆ. ನಾವು ಹೇಳಿದ ಕೆಲಸಗಳನ್ನೂ ಮಾಡುತ್ತವೆ. ಆನೆ, ನಾಯಿ, ಇರುವೆ ಎಲ್ಲವನ್ನೂ ಮನುಷ್ಯ ಪಳಗಿಸಬಹುದು. ನಿಸರ್ಗದಲ್ಲಿ ಇರುವ ಎಲ್ಲ ಪ್ರಾಣಿಗಳನ್ನೂ ತಾನು ಪಳಗಿಸಬಲ್ಲೆ ಎಂಬ ಹಮ್ಮು ಮನುಷ್ಯನಿಗೆ ಇದೆ. ಆದರೆ ನಿಸರ್ಗದೊಂದಿಗೆ ಹೊಂದಿಕೊಂಡು ಹೋಗುವುದನ್ನು ಮಾತ್ರ ಆತ ಇನ್ನೂ ಕಲಿತಿಲ್ಲ ಅಥವಾ ಮರೆತುಬಿಟ್ಟಿದ್ದಾನೆ. ತನ್ನನ್ನು ಬಿಟ್ಟು ಉಳಿದ ಎಲ್ಲ ಪ್ರಾಣಿಗಳೂ ನಿಸರ್ಗದ ಜೊತೆಗೆ ಹೊಂದಿಕೊಂಡು ಬದುಕುತ್ತಿವೆ ಎಂಬ ಸತ್ಯ ಆತನಿಗೆ ಗೊತ್ತು. ಅವುಗಳಿಂದ ಕಲಿಯುವುದು ಬಹಳ ಇದೆ ಎನ್ನುವುದೂ ಗೊತ್ತು. ಆದರೆ ಅವನು ಕಲಿಯುತ್ತಿಲ್ಲ. ನಿಸರ್ಗದೊಂದಿಗೆ ಹೊಂದಿಕೊಂಡು ಬದುಕುತ್ತಲೂ ಇಲ್ಲ.

ನೀರಿನ ಬುಡದಲ್ಲಿ ನಮ್ಮ ನಾಗರಿಕತೆ ಅರಳಿದೆ. ಆದರೆ ಈಗ ಮನುಷ್ಯ ತಾನಿದ್ದಲ್ಲಿಗೇ ನೀರು ಬರಬೇಕು ಎಂದು ಹಟಕ್ಕೆ ಬಿದ್ದಿದ್ದಾನೆ. ಅದಕ್ಕೇ ಈಗ ನೀರು ಖಾಲಿಯಾಗುತ್ತಿದೆ. ಅಂತರ್ಜಲ ಬರಿದಾಗಿದೆ. ನದಿ, ಹಳ್ಳ, ಕೊಳ್ಳ, ಕೆರೆ ಎಲ್ಲವೂ ಬರಿದಾಗಿವೆ. ನೆಲದಾಳದಲ್ಲಿ ನೀರು ಬರಿದಾದಷ್ಟೂ ಬಿಸಿಲು ಹೆಚ್ಚಾಗುತ್ತದೆ. ಮಳೆಯೂ ಕಡಿಮೆಯಾಗುತ್ತಿದೆ. ನಿಸರ್ಗಯಾವಾಗಲೂ ದುರಂತದ ಸೂಚನೆಯನ್ನು ಕೊಡುತ್ತಲೇ ಇರುತ್ತದೆ. ಆದರೆ ಈಗ ಮನುಷ್ಯ ಆ ಸೂಕ್ಷ್ಮವನ್ನು ಅರಿಯುವ ಶಕ್ತಿಯನ್ನು ಕಳೆದುಕೊಂಡಿದ್ದಾನೆ ಅಥವಾ ಅರಿತರೂಮೊಂಡು ಧೈರ್ಯ ಪ್ರದರ್ಶಿಸುತ್ತಿದ್ದಾನೆ. ಯಾಕೆಂದರೆ ಮೊದಲಿನ 40–50 ಸಾವಿರ ವರ್ಷಗಳ ಕಾಲ ಮನುಷ್ಯ ಇದ್ದಿದ್ದು ಅರಣ್ಯದಲ್ಲಿಯೆ. ಈಗ ನಗರಕ್ಕೆ ಬಂದು ಅರಣ್ಯದ ಸೂಕ್ಷ್ಮತೆ ಕಳೆದುಕೊಂಡಿದ್ದಾನೆ. ಇದರಿಂದ ನಷ್ಟ ವಾಗುವುದು ಮನುಷ್ಯನಿಗೇ ಹೊರತು ನಿಸರ್ಗಕ್ಕಲ್ಲ ಎಂಬ ಸಾಮಾನ್ಯ ಜ್ಞಾನ ಇನ್ನೂ ಆತನಿಗೆ ಬಂದ ಹಾಗೆ ಇಲ್ಲ.

ನಿಸರ್ಗದ ಯಾವುದೇ ಮಾತುಗಳೂ ಅವನಿಗೆ ಕೇಳುತ್ತಲೇ ಇಲ್ಲ. ಎಡ್ವರ್ಡ್ ರಿಚರ್ಡ್‌ನ ಒಂದು ಸಣ್ಣ ಕವಿತೆ ಹೀಗಿದೆ. ‘ಮರದ ಕೊಂಬೆಯ ಮೇಲೆ ಕೂತಿತ್ತು ಒಂದು ಬುದ್ಧಿವಂತ ಮುದಿ ಗೂಬೆ. ಹೆಚ್ಚೆಚ್ಚು ನೋಡಿದಷ್ಟೂ ಕಡಿಮೆ ಕಡಿಮೆ ಮಾತು ಅದರದು. ಕಡಿಮೆ ಮಾತನಾಡಿದಷ್ಟೂ ಹೆಚ್ಚೆಚ್ಚು ಕೇಳಿಸಿಕೊಳ್ಳುತ್ತಿತ್ತು’. ಮುದಿ ಗೂಬೆ ಮಾತನಾಡುವುದಿಲ್ಲ. ಗೂಬೆ ಮಾತ್ರ ಅಲ್ಲ. ಯಾವುದೇ ಪ್ರಾಣಿಯೂ ಮಾತನಾಡುವುದಿಲ್ಲ. ನಿಸರ್ಗ ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳುತ್ತವೆ. ಮನುಷ್ಯ ಹೆಚ್ಚು ಹೆಚ್ಚು ಮಾತನಾಡುತ್ತಾನೆ. ಕೇಳಿಸಿಕೊಳ್ಳುವುದಿಲ್ಲ. ಮನುಷ್ಯ ನಿಸರ್ಗದತ್ತ ಒಮ್ಮೆ ನೋಡಿ ಕಲಿಯದಿದ್ದರೆ, ತನ್ನ ಬಾಯಿ ಮುಚ್ಚಿ ನಿಸರ್ಗ ಹೇಳಿದ್ದನ್ನು ಕೇಳದಿದ್ದರೆ ತಣ್ಣೀರಿನ ತಪ್ಪಲೆಯಲ್ಲಿ ಬಿದ್ದ ಕಪ್ಪೆಯಂತೆ ಒಂದು ದಿನ ಬೆಂದು ಹೋಗುತ್ತಾನೆ. ಅದು ಅವನಿಗೆ ಗೊತ್ತಾಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.