ADVERTISEMENT

ಬೆರಗಿನ ಬೆಳಕು ಅಂಕಣ| ಮುಕ್ತಿ ಸಾಧನ - ಸಂಗೀತ

ಡಾ. ಗುರುರಾಜ ಕರಜಗಿ
Published 19 ಜುಲೈ 2023, 23:32 IST
Last Updated 19 ಜುಲೈ 2023, 23:32 IST
ಬೆರಗಿನ ಬೆಳಕು- ಗುರುರಾಜ ಕರಜಗಿ
ಬೆರಗಿನ ಬೆಳಕು- ಗುರುರಾಜ ಕರಜಗಿ   

ವೇದಾಂತವಾಕ್ಯಗಳ ನಮಕಾನುವಾಕಗಳ |

ಕೇದಾರಗೌಳ ಮಣಿರಂಗಾರಭಿಗಳ ||
ನಾದಂಗಳಲಿ ಮನವ ಬೆರಸಿ ನೀನುತ್ಕೃಮಿಸೆ |
ಸಾಧನವೊ ಮುಕ್ತಿಗದು – ಮಂಕುತಿಮ್ಮ || 931 ||

ಪದ-ಅರ್ಥ: ನಮಕ+ಅನುವಾಕಗಳ (ವೇದದ ಭಾಗಗಳು), ಮಣಿರಂಗಾರಭಿಗಳ=ಮಣಿರಂಗ+ಆರಭಿಗಳ, ನೀನುತ್ಕೃಮಿಸೆ=ನೀನು+ಉತ್ಕೃಮಿಸೆ(ಮರಣ ಹೊಂದಿದರೆ)
ವಾಚ್ಯಾರ್ಥ: ವೇದಾಂತದ ವಾಕ್ಯಗಳ, ವೇದದ, ಉಪನಿಷತ್ತುಗಳ
ಸಾರವನ್ನು, ಕೇದಾರ, ಗೌಳ, ಮಣಿರಂಗ, ಆರಭಿಗಳಂತಹ ರಾಗ ವಿಸ್ತಾರಗಳಲ್ಲಿ, ನಾದದಲ್ಲಿ ಮನತುಂಬಿದಾಗ ನೀನು ಮರಣ ಹೊಂದಿದರೆ ಅದು ಮುಕ್ತಿಗೆ ಸಾಧನ.

ADVERTISEMENT

ವಿವರಣೆ: ಈ ಕಗ್ಗ ಮುಕ್ತಿಯ ಬಗ್ಗೆ ಮಾತನಾಡುತ್ತದೆ. ಮುಕ್ತಿ ಎಂದರೇನು? ಅದರ ಅರ್ಥ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆಯಾಗುತ್ತದೆ. ಒಟ್ಟಾರ್ಥದಲ್ಲಿ ಮುಕ್ತಿ ಎಂದರೆ ಬಿಡುಗಡೆ? ಯಾವುದರಿಂದ ಬಿಡುಗಡೆ? ಅಧ್ಯಾತ್ಮಿಕವಾಗಿ ಅದು ಜೀವನ-ಮರಣದ ಚಕ್ರದಿಂದ ಬಿಡುಗಡೆ. ಕಳ್ಳನಿಗೆ ಜೈಲಿನಿಂದ ಬಿಡುಗಡೆ, ನಾವು
ಬಹಳಷ್ಟು ಮಂದಿಗೆ ನಾವಾಗಿಯೇ ಮಾನಸಿಕವಾಗಿ ಸೃಷ್ಟಿಸಿಕೊಂಡಿರುವ ನಕಾರಾತ್ಮಕ ಚಿಂತನೆಗಳಿಂದ ಬಿಡುಗಡೆ, ಬದುಕಿನಲ್ಲಿ ಕಷ್ಟಗಳಿಂದ ಬಿಡುಗಡೆ; ಕೆಲವೊಮ್ಮೆ ಅತಿಯಾಗಿ ಕಾಡುವ ಅನಪೇಕ್ಷಿತ ಜನರಿಂದ ಬಿಡುಗಡೆಯೂ ಮುಕ್ತಿಯಾಗುತ್ತದೆ. “ಅಂತೂ ಆ ತಲೆತಿನ್ನುವ ಗಿರಾಕಿಯಿಂದ ಮುಕ್ತಿಯಾಯಿತಪ್ಪ” ಎನ್ನುವುದಿಲ್ಲವೇ? ಸಂಗೀತಕ್ಕೆ ತಮ್ಮನ್ನು ಪೂರ್ತಿಯಾಗಿ ತೆತ್ತುಕೊಂಡವರಿಗೆ ಸಂಗೀತ ಸಾಧನೆಯೇ, ಅದರಲ್ಲಿಯ ಗುರಿ ಮುಟ್ಟುವುದೇ ಮುಕ್ತಿ. ಮುಕ್ತಿ ಒಂದು ಅಪೂರ್ವ ಆನಂದದ ನೆಲೆ. ಆ ಆನಂದ ನಮಗೆ ಯಾವ ಬಗೆಯಿಂದಲಾದರೂ ದೊರೆಯಬಹುದು.

ಈ ಕಗ್ಗದಲ್ಲಿ, ಸಂಗೀತದಿಂದ ಅಮೂರ್ತವಾದ, ಅಲೌಕಿಕ ಆನಂದ ಸಾಕಾರಗೊಳ್ಳುವುದು ಸಾಧ್ಯ ಎಂದು ಹೇಳಲಾಗುತ್ತದೆ. ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘Music is a vehicle through which highest of sentiments of human heart find expression’.. ಮನುಷ್ಯ ಹೃದಯದ ಉತ್ತಮೋತ್ತಮ ಭಾವನೆಗಳನ್ನು ವ್ಯಕ್ತಪಡಿಸಲು ಸಂಗೀತವೊಂದು ಮಹತ್ತರ ಸಾಧನ. ಭಾರತದಲ್ಲಿ ಸಂಗೀತದ ಸಂಬಂಧವನ್ನು ಧರ್ಮದ ಜೊತೆಗೆ ಕೂಡಿಸಿದರು. ಪುರುಷಾರ್ಥ ಸಾಧನೆಗೆ ಸಂಗೀತವೂ ಸಾಧನ ಎಂದು ಭಾವಿಸಿದರು. ಅಂತೆಯೇ ಶಾರದೆ ವೀಣಾಪಾಣಿ, ನಾರದ, ತುಂಬುರರು ಸಂಗೀತದ ತವನಿಧಿಗಳು. ಸಾಮವೇದ ಸಂಗೀತಮಯವಾದದ್ದು. ಕಗ್ಗ ವಿವರಿಸುತ್ತದೆ, ವೇದಾಂತದ, ಅಂದರೆ ಉಪನಿಷತ್ತುಗಳಲ್ಲಿರುವ, ವೇದದ ಸೂಕ್ತಗಳಲ್ಲಿರುವ ಸಂಗೀತದ ನಾದವನ್ನು ಅನುಭವಿಸು. ಅದರೊಂದಿಗೆ ಕೇದಾರ, ಗೌಳ, ಮಣಿರಂಗ, ಆರಭಿಯಂಥ ಸುಂದರ ರಾಗಗಳ ನಾದದಲ್ಲಿ ಮನಸ್ಸನ್ನು ತೊಡಗಿಸು. ಅದನ್ನು ಸಂಪೂರ್ಣವಾಗಿ ಆನಂದಿಸು. ಅತ್ಯುತ್ತಮ ಸಂಗೀತ ಶಿವಸಾಕ್ಷಾತ್ಕಾರದ ಸಾಧನ. ಅತ್ಯಂತ ಪ್ರತಿಭಾಶಾಲಿಯಾದ ಗಾಯಕ/ಗಾಯಕಿ ಹಾಡುತ್ತಿರುವಾಗ, ನಿಮ್ಮ ಮೆಚ್ಚಿನ ರಾಗದ ಪ್ರಸಾರ ಬಂದಾಗ, ಕಣ್ಮುಚ್ಚಿ ಕುಳಿತು, ರಾಗದಲ್ಲಿಯೇ ಮುಳುಗಿ ಹೋದಾಗ, ಆ ಕ್ಷಣಗಳಲ್ಲಿ, ಪ್ರಪಂಚದ ಜಂಜಡಗಳೆಲ್ಲ ಕರಗಿ ಹೋಗಿ, ವೈಯಕ್ತಿಕ ಸಮಸ್ಯೆಗಳೆಲ್ಲ ಮಾಯವಾಗಿ, ನೀವು ಸಂಗೀತವೇ ಆಗಿ ಹೋದಾಗ ಅದೇ ಮುಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.