ADVERTISEMENT

ಜಗತ್ತಿನ ಲೌಕಿಕ ದೃಷ್ಟಿ

ಡಾ. ಗುರುರಾಜ ಕರಜಗಿ
Published 20 ಫೆಬ್ರುವರಿ 2019, 20:30 IST
Last Updated 20 ಫೆಬ್ರುವರಿ 2019, 20:30 IST
   

ಸತ್ಯವೆಂಬುದದೇನು ಬ್ರಹ್ಮಾಂಡ ತಾಂಡವದಿ ? |
ನೃತ್ಯವೇ ಸತ್ಯವಲ ಕಡಲಲೆಯ ಬಾಳೊಳ್ ||
ಮಿಥ್ಯೆಯೆಂಬುದೆ ಮಿಥ್ಯೆ; ಜೀವನಾಟಕ ಸತ್ಯ |
ಕೃತ್ಯವಿದು ಬೊಮ್ಮನದು – ಮಂಕುತಿಮ್ಮ || 96 ||

ಪದ-ಅರ್ಥ: ಸತ್ಯವೆಂಬುದದೇನು=ಸತ್ಯ+ಎಂಬುದು+ಅದೇನು, ಕಡಲಲೆಯ=ಕಡಲ+ಅಲೆಯ, ಮಿಥ್ಯೆ=ಸುಳ್ಳು, ಕೃತ್ಯ=ಕೆಲಸ
ವಾಚ್ಯಾರ್ಥ: ಈ ಬ್ರಹ್ಮಾಂಡದ ತಾಂಡವ ನೃತ್ಯದಲ್ಲಿ ಸತ್ಯ ಎಂಬುದು ಏನು? ಕಡಲ ಅಲೆಯಂತಿರುವ ಈ ಬಾಳಿನಲ್ಲಿ ಆ ಅಲೆಗಳ ನೃತ್ಯವೇ ಸತ್ಯವಲ್ಲವೆ? ನಾವು ಅನುಭವಿಸುವ, ನೋಡುವ ಜೀವನಾಟಕ ಸತ್ಯವೆಂದ ಮೇಲೆ ಮಿಥ್ಯೆ ಎಂದು ಹೇಳುವುದೇ ಮಿಥ್ಯೆ. ಇದೆಲ್ಲ ಬ್ರಹ್ಮವಸ್ತುವಿನ ಆಟವೇ.

ವಿವರಣೆ: ಈ ಜಗತ್ತು ಸುಳ್ಳಲ್ಲ. “ಜಗನ್ಮಿಥ್ಯಾ” ಎನ್ನುವ ಮಾತು ಬ್ರಹ್ಮದೃಷ್ಟಿಯಿಂದ ಸರಿ ಎನ್ನಿಸಬಹುದೇ ವಿನ: ಮನುಷ್ಯ ಜೀವನದ ದೃಷ್ಟಿಯಿಂದ ಅಲ್ಲ. ನೋವು, ನಲಿವುಗಳನ್ನು ಅನುಭವಿಸುವ ಜೀವಿಗೆ ಈ ಜಗತ್ತು ಮತ್ತದರ ಅನುಭವ ಸತ್ಯವೇ. ಜೀವಿಯ ಪುಣ್ಯ ಪಾಪಗಳಿಗೆ ಅವಕಾಶ ಕೊಡುವುದೂ ಈ ಜಗತ್ತೇ. ನಮ್ಮ ಜೀವನಕ್ಕೆ ಶಾಂತಿಯನ್ನು, ತೃಪ್ತಿಯನ್ನು, ಸಂತೋಷವನ್ನು ನೀಡುವುದು ನಮ್ಮ ಅನುಭವಕ್ಕೆ ಬರುವ ಜಗತ್ತು.

ADVERTISEMENT

ಅದರಂತೆ ನಮ್ಮ ಬದುಕನ್ನು ಕೆಣಕಿ, ಆಸೆ ತೋರಿಸಿ, ನಿರಾಸೆಪಡಿಸಿ, ಭಾವನೆಗಳನ್ನು ಕುಕ್ಕಿ ಅಶಾಂತಿಯನ್ನು ತುಂಬುವ ಜಗತ್ತು ಇದೇ. ಇದೊಂದು ಪ್ರಯೋಗಶಾಲೆ. ನಮ್ಮ ಜೀವನದ ಶುಭಗಳು, ಶೀಲಗಳು, ಶಕ್ತಿಗಳು ಹಾಗೂ ಗುಣಗಳ ಪರೀಕ್ಷೆಯಾಗವುದು ಇಲ್ಲಿಯೇ. ಈ ಲೋಕದ ಸೌಂದರ್ಯ, ವೈಚಿತ್ರ್ಯಗಳು ಈ ಪ್ರಕೃತಿಯ ಸಂಜ್ಞೆ ಆಜ್ಞೆಗಳು. ಇದನ್ನು ಭಗವದ್ಗೀತೆ ಹೇಳುವುದು ಹೀಗೆ.

ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶ: |
ಪ್ರಕೃತಿಸ್ತ್ಪಾಂ ನಿಯೋಕ್ಷ್ಯತಿ |

ಅಂದರೆ ಈ ಪ್ರಕೃತಿ ಸತ್ಯವಾದದ್ದು, ದೇಹ ಸತ್ಯವಾದದ್ದು, ಇಂದ್ರಿಯಗಳು ಹಾಗೂ ಅವುಗಳ ಅನುಭವಗಳು ಸತ್ಯ, ಜಗತ್ತಿನ ವಸ್ತುಗಳು, ಬೆರಗುಗಳು, ಬೆರಗುಗಳೆಲ್ಲ ಸತ್ಯ. ತಲೆಯ ಮೇಲೆ ಮೊಟ್ಟೆಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಬಡವನೊಬ್ಬ ಕನಸು ಕಂಡ. ಕನಸಿನಲ್ಲಿ ಮೊಟ್ಟೆಗಳು ಕೋಳಿಗಳಾದವು, ಆ ಕೋಳಿಗಳಿಂದ ಮತ್ತಷ್ಟು ಕೋಳಿಗಳು. ಅವುಗಳಿಂದ ಕೋಟ್ಯಾಂತರ ಕೋಳಿಗಳು! ಅವುಗಳಿಂದ ಕೋಟ್ಯಾಂತರ ರೂಪಾಯಿಗಳ ಆದಾಯ. ಅದರಿಂದ ಒಂದು ಅರಮನೆಯ ನಿರ್ಮಾಣ. ಅಲ್ಲೊಬ್ಬ ಚೆಲುವೆ ಹೆಂಡತಿಯಾಗಿ ಬಂದಳು. ಸುಂದರ ಸಂಸಾರ. ಒಂದು ಗಳಿಗೆ ಗಂಡಹೆಂಡಿರ ನಡುವೆ ಕಲಹ. ಗಂಡ ಕೋಪದಿಂದ ತಲೆ ಅಲ್ಲಾಡಿಸಿದ. ತಲೆಯ ಮೇಲಿನ ಮೊಟ್ಟೆಗಳು ಕೆಳಗೆ ಬಿದ್ದು ಅವೂ ಒಡೆದವು, ಕನಸೂ ಒಡೆಯಿತು. ಕನಸೆಲ್ಲ ಸುಳ್ಳೇ ನಿಜ. ಆದರೆ ಅನುಭವಿಸಿದ ಸಂತೋಷ, ಸಂಕಟ ಸುಳ್ಳಲ್ಲವಲ್ಲ? ಮೊಟ್ಟೆಗಳು ಒಡೆದದ್ದು ಸತ್ಯ.

ಕಗ್ಗದ ಮಾತು ತುಂಬ ಚೆಂದ. ನಾವು ಇರುವುದು ಕಡಲಿನ ಅಲೆಗಳ ಬದುಕಿನಲ್ಲಿ. ಹಾಗಿದ್ದರೆ ಕಡಲೇ ಸತ್ಯವಲ್ಲವೇ? ಇಡೀ ಬ್ರಹ್ಮಾಂಡವೆ ನಮ್ಮ ಕಣ್ಣ ಮುಂದೆ ಕುಣಿಯುತ್ತಿದೆ. ಹಿಂದೆ ಆಗಿ ಹೋದದ್ದೆಲ್ಲ ಇತಿಹಾಸವಾಗಿದೆ. ಅದೆಲ್ಲ ಸತ್ಯವೆ ಅಲ್ಲವೇ? ಹಾಗಾದರೆ ಯಾವುದು ಮಿಥ್ಯೆ? ನಮ್ಮ ಕಣ್ಣಿಗೆ ಕಾಣುವ, ಅನುಭವಕ್ಕೆ ನಿಲುಕುವ ಪ್ರತಿಯೊಂದು ನಮ್ಮ ಮಟ್ಟಿಗೆ ಸತ್ಯವೇ ಆದರೆ ಮಿಥ್ಯೆ ಎಂಬುದೇ ಸುಳ್ಳು. ಈ ಜಗತ್ತಿನ ಸತ್ಯತ್ಪದ ಕಾರ್ಯ ಪರಬ್ರಹ್ಮನದು. ಈ ದೃಷ್ಟಿ ಲೌಕಿಕವಾದದ್ದು, ಭೌತಿಕವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.