ADVERTISEMENT

ಹಿರಿಯರಿಗೆ ತೋರಬೇಕಾದ ಗೌರವ

ಡಾ. ಗುರುರಾಜ ಕರಜಗಿ
Published 30 ಏಪ್ರಿಲ್ 2019, 20:06 IST
Last Updated 30 ಏಪ್ರಿಲ್ 2019, 20:06 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಬ್ರಹ್ಮದತ್ತ ವಾರಣಾಸಿಯಲ್ಲಿ ರಾಜ್ಯಮಾಡುತ್ತಿದ್ದಾಗ ಬೋಧಿಸತ್ವ ತನ್ನ ಅತ್ಯಂತ ಶ್ರೇಷ್ಠಗುಣಗಳಿಂದ ದೇವೇಂದ್ರ ಶಕ್ರನಾದ. ಬ್ರಹ್ಮದತ್ತನಿಗೆ ಯಾಕೋ, ಯಾವ ಕಾರಣಕ್ಕೋ ವೃದ್ಧರ ಮೇಲೆ ಅತಿಯಾದ ಕೋಪ ಬಂತು. ಆತ ಮುದಿ ಕುದುರೆಗಳನ್ನು, ಮುದಿ ಆನೆಗಳನ್ನು ಕೂಡ ಹಿಂಸೆ ಮಾಡಲಾರಂಭಿಸಿದ. ನಗರದಲ್ಲಿರುವ ವೃದ್ಧ ಮಹಿಳೆ, ಪುರುಷರನ್ನು ಅರಮನೆಗೆ ಕರೆಸಿಕೊಂಡು ಅವರಿಂದ ಅಸಾಧ್ಯವಾದ ದೈಹಿಕ ಚಟುವಟಿಕೆಗಳನ್ನು ಮಾಡಲು ಹೇಳಿ ಅವರಿಂದ ಆಗದಿದ್ದಾಗ ಅವರ ಹೊಟ್ಟೆಯ ಮೇಲೆ ಹೊಡೆದು ನೋವುಂಟುಮಾಡುತ್ತಿದ್ದ.

ಹೀಗಾಗಿ ವಾರಣಾಸಿಯಲ್ಲಿರಲು ವಯಸ್ಸಾದವರು ಬಯಸುತ್ತಿರಲಿಲ್ಲ. ಮಕ್ಕಳು ಕೂಡ ತಂದೆ-ತಾಯಿ ಇಲ್ಲಿದ್ದರೆ ಎಲ್ಲಿ ಅವಮಾನವನ್ನು ಸಹಿಸಬೇಕಾಗುತ್ತದೋ ಎಂದು ಬೇರೆ ಊರಿಗೆ ಕಳುಹಿಸುತ್ತಿದ್ದರು. ಹೀಗಾಗಿ ನಗರದಲ್ಲಿ ಯಾವ ಮನೆಯಲ್ಲೂ ಹಿರಿಯರು ಉಳಿಯಲಿಲ್ಲ. ತಂದೆ-ತಾಯಿಗಳ ಸೇವೆ ಜನಕ್ಕೆ ಮರೆತೇ ಹೋಗತೊಡಗಿತು. ಮಕ್ಕಳಿಗೆ ಹಿರಿಯರ ಮಾರ್ಗದರ್ಶನವಿಲ್ಲದೆ ಮೌಲ್ಯಗಳು ಅಪರೂಪವಾಗತೊಡಗಿದವು. ಇದರ ಪರಿಣಾಮವಾಗಿ ನರಕಗಳು ತುಂಬತೊಡಗಿದವು. ದೇವತೆಗಳ ಸಂಖ್ಯೆ ತುಂಬ ಕಡಿಮೆಯಾಯಿತು. ಯಾಕೆ ಹೊಸ ದೇವತೆಗಳು ಬರುತ್ತಿಲ್ಲ ಎಂದು ಶಕ್ರನಾದ ಬೋಧಿಸತ್ವ ಚಿಂತಿಸಿದ. ಅವನಿಗೆ ಕಾರಣ ತಿಳಿಯಿತು. ರಾಜ ಬ್ರಹ್ಮದತ್ತನ ಭ್ರಮೆಯನ್ನು ಕಳಚಿ ಬುದ್ಧಿ ನೀಡಬೇಕೆಂದು ತೀರ್ಮಾನಿಸಿದ

ತಾನು ಒಬ್ಬ ಅತ್ಯಂತ ವೃದ್ಧನ ರೂಪವನ್ನು ಹೊಂದಿದ. ಒಂದು ಹಳೆಯ ಮುರುಕು ಗಾಡಿಯನ್ನು ತೆಗೆದುಕೊಂಡ. ಅದಕ್ಕೆ ಎರಡು ತೀರ ವಯಸ್ಸಾದ ಎತ್ತುಗಳನ್ನು ಹೂಡಿದ. ಗಾಡಿಯಲ್ಲಿ ನಾಲ್ಕು ಮಡಕೆ ನೀರು ಮಜ್ಜಿಗೆಯನ್ನಿಟ್ಟುಕೊಂಡ. ತಾನೂ ಚಿಂದಿಚಿಂದಿಯಾದ ಬಟ್ಟೆಯನ್ನು ಧರಿಸಿ ವಾರಣಾಸಿಯ ಬೀದಿಗೆ ಬಂದ. ಆಗ ಬ್ರಹ್ಮದತ್ತ ನಗರ ಪ್ರದಕ್ಷಿಣೆಗಾಗಿ ಆನೆಯ ಮೇಲೆ ಕುಳಿತು ಹೋಗುತ್ತಿದ್ದ. ಬೋಧಿಸತ್ವ ತನ್ನ ಗಾಡಿಯನ್ನು ನೇರವಾಗಿ ರಾಜನ ಆನೆಯ ಮುಂದೆಯೇ ತಂದ. ಶಕ್ರನ ಸ್ವಭಾವದಿಂದ ಗಾಡಿ ಮತ್ತು ಶಕ್ರ ರಾಜನಿಗೆ ಮಾತ್ರ ಕಾಣುತ್ತಿದ್ದರು, ಉಳಿದವರಿಗೆ ಏನೂ ಕಾಣುತ್ತಿರಲಿಲ್ಲ.

ADVERTISEMENT

ಎದುರಿಗೆ ಮುದಿ ಎತ್ತುಗಳು, ಮುದುಕ ಸವಾರನನ್ನು ಕಂಡು ರಾಜನ ಕೋಪ ನೆತ್ತಿಗೇರಿತು. ಜೋರಾಗಿ ಕೂಗಿದ, ‘ಯಾರಲ್ಲಿ, ದಾರಿಯಲ್ಲಿದ್ದ ಮುದುಕನನ್ನು ಓಡಿಸಿ’. ರಾಜಭಟರಿಗೆ ಯಾವ ಮುದುಕನೂ ಕಾಣಲಿಲ್ಲ. ‘ಎಲ್ಲಿ ಮಹಾಪ್ರಭು?’ ಎಂದು ಕೇಳಿದರು ಅಮಾತ್ಯರು. ‘ಕಣ್ಣು ಕಾಣುವುದಿಲ್ಲವೇ? ಆ ಚಿಂದಿ ಧರಿಸಿದ ಮುದುಕ, ಮುದಿ ಕುದುರೆಗಳನ್ನು ಹೂಡಿದ ಗಾಡಿಯಲ್ಲಿ ಎದುರಿಗೇ ಬರುತ್ತಿದ್ದಾನೆ’ ಎಂದು ಚೀರಿದ. ಅವನ ಮೈ ನಡುಗುತ್ತಿತ್ತು. ಶಕ್ರ ಸರ್ರನೇ ಮೇಲೆ ಹಾರಿ ರಾಜನ ತಲೆಯ ಮೇಲೆ ಮಜ್ಜಿಗೆಯ ಮಡಕೆಯನ್ನು ಒಡೆದ. ರಾಜನ ಮೈ ನೆನೆದು, ಕಿರೀಟವೆಲ್ಲ ಕೊಳಕಾಗಿ ಅವನಿಗೇ ಅಸಹ್ಯವೆನಿಸಿತು. ಆತ ಮತ್ತೆ ತನ್ನ ಭಟರಿಗೆ ಬೈದ, ‘ಆ ಮುದುಕನನ್ನು ಕೊಂದೇ ಬಿಡಿ’. ಈಗ ಅಮಾತ್ಯರಿಗೆ, ರಾಜಭಟರಿಗೆ ಹಾಗೂ ಸುತ್ತಲೂ ನೆರೆದ ಜನರಿಗೆ ರಾಜನಿಗೆ ತಲೆಕೆಟ್ಟಿರಬೇಕು ಎನ್ನಿಸಿತು.

ಮತ್ತೆ ಶಕ್ರ ರಾಜನ ತಲೆಯ ಮೇಲೆ ಮತ್ತೆರಡು ಮಜ್ಜಿಗೆಯ ಮಡಕೆಗಳನ್ನು ಒಡೆದ. ಈಗಂತೂ ರಾಜನ ಪರಿಸ್ಥಿತಿ ನಗೆಗೇಡಾಯಿತು. ಜನರೆಲ್ಲ ನಗತೊಡಗಿದರು. ಆಗ ಶಕ್ರ ತನ್ನ ದೇವತೆಯ ವೇಷದಲ್ಲಿ ಖಡ್ಗ ಹಿಡಿದು ಬಂದು ಹೇಳಿದ, ‘ರಾಜಾ ನೀನು ಮೂರ್ಖನಾಗಬೇಡ. ಯಾವ ರಾಜ್ಯದಲ್ಲಿ ಹಿರಿಯರಿರುತ್ತಾರೋ ಅಲ್ಲಿ ಅಧರ್ಮ ಕಾಲಿಡುವುದಿಲ್ಲ. ತಂದೆ-ತಾಯಿಯರ ಸೇವೆ ಬಹುದೊಡ್ಡ ಕರ್ಮ, ಕರ್ತವ್ಯ. ಅದನ್ನು ಮಕ್ಕಳು ಮರೆಯಬಾರದು. ನಿನಗೆ ವಯಸ್ಸಾಗುವುದಿಲ್ಲವೇ? ಆಗ ನಿನ್ನ ಸ್ಥಿತಿ ಏನಾದೀತು?” ಎಂದು ಎಚ್ಚರಿಕೆ, ಬೋಧನೆಗಳನ್ನು ನೀಡಿ ಮಾಯವಾದ. ಅಂದಿನಿಂದ ರಾಜ ಹಿರಿಯರಿಗೆ ಗೌರವ ನೀಡುವುದನ್ನು ಕಲಿತ, ಊರಿನಲ್ಲಿ ಆ ಪರಂಪರೆ ನಿಲ್ಲುವಂತೆ ಮಾಡಿದ.

ಈ ಮೌಲ್ಯ ಇಂದಿಗೂ ಪ್ರಸ್ತುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.