ADVERTISEMENT

ಬ್ರಹ್ಮಗೋಳದ ಕೇಂದ್ರ

ಡಾ. ಗುರುರಾಜ ಕರಜಗಿ
Published 22 ಮೇ 2019, 18:31 IST
Last Updated 22 ಮೇ 2019, 18:31 IST

ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ್ಲ|
ಕಂಪಿಸುವ ಕೇಂದ್ರ ನೀಂ ಬ್ರಹ್ಮಕಂದುಕದಿ||
ಶಂಪಾತರಂಗವದರೊಳು ತುಂಬಿ ಪರಿಯುತಿದೆ|
ದಂಭೋಳಿ ನೀನಾಗು – ಮಂಕುತಿಮ್ಮ || 135||

ಪದ-ಅರ್ಥ: ಬ್ರಹ್ಮಕಂದುಕದಿ=ಬ್ರಹ್ಮ+ಕಂದುಕ(ಗೋಳ), ಶಂಪಾತರಂಗವದರೊಳು=ಶಂಪಾತರಂಗ (ಮಿಂಚಿನ ಅಲೆ)+ಅದರೊಳು, ದಂಭೋಳಿ=ಇಂದ್ರನ ವಜ್ರಾಯುಧ.

ವಾಚ್ಯಾರ್ಥ: ಸಂಪೂರ್ಣ ಗೋಳದ ಮಧ್ಯದಲ್ಲಿ ಎಲ್ಲವೂ ಸೇರುವುದು ಕೇಂದ್ರದಲ್ಲಿಯೇ. ಬ್ರಹ್ಮನ ಜಗತ್ತು ಎನ್ನುವ ಗೋಳದಲ್ಲಿ ನೀನೊಂದು ಕೇಂದ್ರ. ಅದರಲ್ಲಿ ಮಿಂಚಿನ ಲಹರಿಯೊಂದು ಹರಿಯುತ್ತಲೇ ಇದೆ. ನೀನು ವಜ್ರಾಯುಧವಾಗು.

ADVERTISEMENT

ವಿವರಣೆ: ನಮಗೆ ದೊರೆತಿರುವ ಆಕೃತಿಗಳಲ್ಲಿ ಗೋಳ ಅತ್ಯಂತ ವಿಶಿಷ್ಟವಾದದ್ದು. ಗೋಳದ ಮೇಲ್ಮೈಯಿಂದ ಒಳಗಡೆಗೆ ವ್ಯಾಸಗಳನ್ನೆಳೆಯುತ್ತ ಹೋದರೆ, ಅಥವಾ ನೇರವಾಗಿ ವ್ಯಾಸಗಳ ಹಾಗೆ ದಾರ ಪೋಣಿಸುತ್ತ ಹೋದರೆ ಅವು ಎಲ್ಲವೂ ಗೋಳದ ಮಧ್ಯಭಾಗದಲ್ಲೇ ಸೇರುತ್ತವೆ. ಅದೇ ಗೋಳದ ಕೇಂದ್ರ. ಅದನ್ನೇ ಕಗ್ಗ-ಸಂಪೂರ್ಣ ಗೋಳದಲಿ ನೆನೆದೆಡೆಯೆ ಕೇಂದ್ರವಲ್ಲ ಎನ್ನುತ್ತದೆ. ನೆನೆದಡೆ ಎಂಬ ಪದಕ್ಕೆ ನೆರೆದೊಡೆ ಅಥವಾ ಸೇರಿದೊಡೆ ಎಂಬ ಅರ್ಥವೂ ಬರುತ್ತವೆ. ಅಂದರೆ, ಗೋಳದ ಒಳಕ್ಕೆ ನೇರವಾಗಿ ನಡೆದರೆ ಎಲ್ಲವೂ ಕೇಂದ್ರದಲ್ಲೇ ಸೇರುತ್ತವೆ. ಇದು ಗೋಳದಲ್ಲಿ ಮಾತ್ರ ಸಾಧ್ಯ. ಅಲ್ಲಿ ಮಾತ್ರ ಕೇಂದ್ರದಿಂದ ಪರಿಧಿ ಯಾವಾಗಲೂ, ಎಲ್ಲ ಕಡೆಗೂ ಅಷ್ಟೇ ದೂರದಲ್ಲಿರುತ್ತದೆ.

ಅಂತೆಯೇ ಬ್ರಹ್ಮ ಸೃಷ್ಟಿಸಿದ ಈ ವಿಶ್ವವೆಂಬ ಗೋಳದಲ್ಲಿ ವ್ಯಕ್ತಿಯೇ ಕೇಂದ್ರ. ಅಂದರೆ ಇದು ವ್ಯಕ್ತಿ ಕೇಂದ್ರಿತವಾದ ವಿಶ್ವವೆಂದಲ್ಲ. ಆದರೆ, ವ್ಯಕ್ತಿಯ ದೃಷ್ಟಿಯಿಂದ ಅದು ಸರಿ. ನಾನಿದ್ದರೆ ವಿಶ್ವವಿದೆ. ಅದು ನನ್ನ ಸಂಪರ್ಕಕ್ಕೆ ಬಂದು ಅನುಭವವನ್ನು ಕೊಡುತ್ತದೆ. ನಾನೇ ಇಲ್ಲವಾದರೆ ಪ್ರಪಂಚವಿರುವುದೇ ತಿಳಿಯಲಾರದು. ಪ್ರತಿಯೊಬ್ಬ ಜೀವಿಗೂ-ಮನುಷ್ಯ, ಪಶು, ಪಕ್ಷಿ, ಕೀಟಗಳು–ಎಲ್ಲಕ್ಕೂ ಅದರದೇ ಆದ ವಿಶ್ವವಿದೆ. ಆ ವಿಶ್ವಕ್ಕೆ ಆ ಜೀವಿಯೇ ಕೇಂದ್ರ ಬಿಂದು. ಆ ಬಿಂದು ನಿಶ್ಚಲವಾದದ್ದಲ್ಲ. ಶಕ್ತಿಯಿಂದ ಕೂಡಿದ್ದು, ಚಲನೆಯಿಂದ ಕೂಡಿದ್ದು, ಸದಾಕಾಲ ತನ್ನನ್ನು ಚಿಂತನೆಗೆ ಒಡ್ಡಿಕೊಳ್ಳುವಂಥದ್ದು. ಆದ್ದರಿಂದ ಅದು ಕಂಪಿಸುವ ಕೇಂದ್ರ. ಕಂಪನ ಅದರ ತುಡಿತವನ್ನು ತೋರುತ್ತದೆ. ಈ ಬ್ರಹ್ಮನ ಗೋಳದಲ್ಲಿ ಮಿಂಚಿನ ಲಹರಿಯೊಂದು ಹರಿಯುತ್ತಿದೆ. ಇದು ಯಾವ ಮಿಂಚು? ಬ್ರಹ್ಮವಸ್ತುವಿನ ಜ್ಞಾನವನ್ನು ಪಡೆದ ಜ್ಯೋತಿಯ ಮಿಂಚು. ಎರಡು ಶತಮಾನಗಳ ಹಿಂದೆ ಆಗಿ ಹೋದ ವಚನಕಾರ ಜಕ್ಕಣಯ್ಯ ಹೇಳುತ್ತಾನೆ:

ಕತ್ತಲೆ ಮನೆಯೊಳಗೆ ಬೆಳಗುಂಟೇನಯ್ಯ?
ಆ ಕತ್ತಲೆ ಮನೆಯೊಳಗೆ ಜ್ಯೋತಿಯ ಮುಟ್ಟಿಸಲು
ಕತ್ತಲೆ ಹರಿದುಹೋಯಿತ್ತು ನೋಡಾ.
ಈ ಪರಿಯಾಯದಲ್ಲಿ ಮನವೆಂಬ ಕತ್ತಲೆಯಲ್ಲಿ
ಜ್ಞಾನವೆಂಬ ಜ್ಯೋತಿಯ ಮುಟ್ಟಿಸಲು
ಒಳಹೊರಗೆ ಪರಿಪೂರ್ಣವಾಗಿ ಬೆಳಗಾಯಿತ್ತು ನೋಡಾ,
ಝೇಂಕಾರ ನಿಜಲಿಂಗ ಪ್ರಭುವೆ.

ಜ್ಞಾನವೆಂಬ ಜ್ಯೋತಿ ಮುಟ್ಟಿದಾಗ ಆದ ಪರಿಪೂರ್ಣತೆಯ ಬೆಳಕು ಈ ಶಂಪಾತರಂಗ. ಅದನ್ನು ನಾವೂ ಪಡೆಯಬೇಕಾದರೆ ನಾವೂ ಜ್ಞಾನದ ವಜ್ರಾಯುಧವಾಗಿ ಅಜ್ಞಾನದ ವಿರುದ್ಧ ಹೋರಾಟಮಾಡಬೇಕು. ಆಗ ನಾವು ಕೇಂದ್ರವಾದದ್ದಕ್ಕೂ ಸಾರ್ಥಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.