ADVERTISEMENT

ಬೆರಗಿನ ಬೆಳಕು | ಬದುಕಿನ ಕಟ್ಟು

ಡಾ. ಗುರುರಾಜ ಕರಜಗಿ
Published 13 ಮಾರ್ಚ್ 2020, 19:46 IST
Last Updated 13 ಮಾರ್ಚ್ 2020, 19:46 IST
   

ಒಂದು ಕಣ್ಣಳುವಂದು ಮತ್ತೊಂದ ತಳ್ಕೈಸಿ |
ಅಂದಚೆಂದಗಳ ಜನವರಸುವುದು ಬಾಳೊಳ್ ||
ಬಂಧುಮೋಹವೊ ಯಶವೊ ವೈರವೊ ವೈಭವವೊ |
ಬಂಧಿಪುದು ಜಗಕವರ ಮಂಕುತಿಮ್ಮ || ೨೬೨ ||

ಪದ-ಅರ್ಥ: ಕಣ್ಣಳುವಂದು=ಕಣ್ಣು+ಅಳುವಂದು, ತಳ್ಕೈಸಿ=ತಬ್ಬಿಕೊಂಡು, ಜನವರಸುವುದು=ಜನ+ಅರಸುವುದು(ಹುಡುಕುವುದು), ಜಗಕವರ=ಜಗಕೆ+ಅವರ

ವಾಚ್ಯಾರ್ಥ: ಒಂದು ಕಣ್ಣು ಅಳುತ್ತಿರುವಾಗ ಮತ್ತೊಂದು ಕಣ್ಣನ್ನು ಸಂತೈಸಿ ಅಂದ ಚೆಂದಗಳನ್ನು ಬದುಕಿನಲ್ಲಿ ಜನ ಅರಸುತ್ತಾರೆ. ಸಂಬಂಧಗಳ ಮೋಹವೋ, ದೊರೆತ ಯಶಸ್ಸೋ, ಬಲಿತ ದ್ವೇಷವೋ ಅಥವಾ ವೈಭವೋ, ಯಾವುದೋ ಒಂದು ಅವರನ್ನು ಈ ಜಗತ್ತಿಗೆ ಕಟ್ಟಿ ಹಾಕುತ್ತದೆ.

ADVERTISEMENT

ವಿವರಣೆ: ಬದುಕಿನಲ್ಲಿ ಸಂತೋಷವಿದೆ, ದುಃಖವಿದೆ, ಹುಟ್ಟಿದೆ, ಸಾವಿದೆ, ಪ್ರೀತಿ ಇದೆ, ದ್ವೇಷ ಇದೆ, ಶ್ರೀಮಂತಿಕೆ ಇದೆ, ಬಡತನವೂ ಇದೆ. ಆದರೆ ಪ್ರತಿಯೊಬ್ಬರೂ ಅಪೇಕ್ಷಿಸುವುದು ಸಂತೋಷವನ್ನು, ಪ್ರೀತಿಯನ್ನು, ಅಂದಚೆಂದಗಳನ್ನು. ಇವೆಲ್ಲವೂ ಮನುಷ್ಯರನ್ನು ಈ ಪ್ರಪಂಚಕ್ಕೆ ಕಟ್ಟಿ ಹಾಕುತ್ತವೆ. ಯಾವು ಯಾವುದರಲ್ಲೋ ಆಸಕ್ತಿಯನ್ನೋ, ಪ್ರೀತಿಯನ್ನೋ, ನಂಬಿಕೆಯನ್ನೋ ಹೊಂದಿ ಬಾಳು ಸಾಗಿಸುತ್ತಾರೆ ಜನ.

ನನ್ನ ಗೆಳೆಯನೊಬ್ಬನ ಮಗನ ಮದುವೆಯಾಗಿ ಎರಡು ವರ್ಷವಾಗಿತ್ತು. ಗಂಡ-ಹೆಂಡತಿ ತುಂಬ ಚೆನ್ನಾಗಿದ್ದರು. ಇತ್ತೀಚಿಗೆ ಒಂದು ಮಗುವಾಗಿತ್ತು. ಅದಕ್ಕೆ ಈಗ ಆರೋ, ಏಳೋ ತಿಂಗಳು ಇದ್ದಿರಬೇಕು. ಎಲ್ಲವೂ ಚೆನ್ನಾಗಿಯೇ ಇದ್ದರೆ ಬದುಕು ಎಂದು ಏಕೆ ಕರೆಯಬೇಕು? ಒಂದು ರಸ್ತೆ ಆಕಸ್ಮಿಕದಲ್ಲಿ ಗಂಡ ತೀರಿಹೋದ. ಅವನ ಹೆಂಡತಿಗೆ ದಿಕ್ಕು ತಪ್ಪಿದಂತಾಯಿತು. ಗಂಡನ ದೇಹವನ್ನು ಮನೆಗೆ ತಂದಿದ್ದರು. ಆ ಹುಡುಗಿ ದೇಹದ ಮೇಲೆ ಬಿದ್ದು ಬಿದ್ದು ಅತ್ತಳು. ಎಲ್ಲರ ಕರುಳು ಹಿಂಡುವ ದೃಶ್ಯವದು. ಅತ್ತು ಅತ್ತು ಸುಸ್ತಾಗಿ ಗೋಡೆಗೊರಗಿ ಗಂಡನ ದೇಹವನ್ನೇ ನೋಡುತ್ತ ಕುಳಿತಳು.

ಕಣ್ಣಲ್ಲಿ ನೀರು ಒಣಗಿ ಹೋಗಿದೆ, ಕಣ್ಣು ಮುಚ್ಚುತ್ತಿವೆ. ಸ್ವಲ್ಪ ದೂರದಲ್ಲಿಯೇ ಆಕೆಯ ಮಗು ಹಾಸಿಗೆಯ ಮೇಲೆ ಮಲಗಿದೆ. ಎಚ್ಚರಾಗಿ ಕಣ್ಣು ತೆರೆಯಿತು. ಸಣ್ಣ ಧ್ವನಿ ಮಾಡುತ್ತ ಮಗ್ಗುಲಾಯಿತು. ತಾಯಿ ಅದನ್ನು ನೋಡಿದಳು. ಮಗು ತಾಯಿಯ ಮುಖವನ್ನು ಕಂಡು ಮುಗ್ಧವಾಗಿ ನಕ್ಕಿತು. ತಾಯಿಯ ಮುಖದಲ್ಲೂ ಮಂದಹಾಸ, ಮಗುವನ್ನೆತ್ತಿ ಅಪ್ಪಿಕೊಂಡಳು. ಇದೊಂದು ಅದ್ಭುತ. ತನ್ನ ಮುಂದೆಯೇ ಗಂಡನ ದೇಹವಿದೆ, ತಳಮಳ, ದುಃಖ, ಸಂಕಟ ತುಂಬಿಕೊಂಡಿದೆ. ಆದರೆ ಮಗುವಿನ ನಗು ಕಂಡಾಗ ಸಂತೋಷ ಕ್ಷಣಕಾಲವಾದರೂ ಮಿನುಗುತ್ತದೆ. ಸಾವಿನ ಗರ್ಭದಿಂದ ಭವಿಷ್ಯದ ಆಸೆ ಕೈಮಾಡಿ ಕರೆಯುತ್ತದೆ. ಇದೇ ಬದುಕಿನ ಒಳಗುಟ್ಟು.

ಸಂಕಟದ ಸ್ಥಿತಿಯಲ್ಲಿ ಭವಿಷ್ಯದ ಆಸೆ, ದುಃಖದಲ್ಲಿ ಸಂತೋಷದ ಭರವಸೆ, ಸೋಲಿನಲ್ಲಿ ಗೆಲುವಿನ ನಂಬಿಕೆ ಇವೇ ಮನುಷ್ಯನನ್ನು ಈ ಪ್ರಪಂಚಕ್ಕೆ ಕಟ್ಟಿ ಹಾಕಿ ಬದುಕುವಂತೆ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.