ADVERTISEMENT

ವಿಶುದ್ಧ ಸತ್ವದ ವಿಕೃತಿ

ಡಾ. ಗುರುರಾಜ ಕರಜಗಿ
Published 30 ಸೆಪ್ಟೆಂಬರ್ 2018, 19:54 IST
Last Updated 30 ಸೆಪ್ಟೆಂಬರ್ 2018, 19:54 IST

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೀಮಂತ ಬ್ರಾಹ್ಮಣನ ಮನೆಯಲ್ಲಿ ಜನಿಸಿದ. ಸಕಲ ವಿದ್ಯಾಪಾರಂಗತನಾಗಿ ಎಲ್ಲ ಕಾಮ-ಸುಖಗಳನ್ನು ತ್ಯಜಿಸಿ ಪಬ್ಬಜಿತನಾಗಿ ಧ್ಯಾನ ತಪಸ್ಸಿನಿಂದ ಸುಖಿಯಾಗಿ ಹಿಮಾಲಯದಲ್ಲಿ ಇರತೊಡಗಿದ.

ಒಮ್ಮೆ ಉಪ್ಪು, ಹುಳಿ ಬಯಸಿ ವಾರಣಾಸಿಗೆ ಬಂದು ರಾಜ್ಯೋದ್ಯಾನದಲ್ಲಿ ವಾಸ ಮಾಡಿದ. ಅವನ ಚರ್ಯೆಯನ್ನು ಗಮನಿಸಿದ ರಾಜ ಗೌರವದಿಂದ ಆದರಿಸಿ ಉದ್ಯಾನದಲ್ಲೇ ಇರಲು ವ್ಯವಸ್ಥೆ ಮಾಡಿದ. ಜನರಿಗೆ ಉಪದೇಶ ಮಾಡುತ್ತ ಬೋಧಿಸತ್ವ ಹದಿನಾರು ವರ್ಷ ಅಲ್ಲಿಯೇ ಉಳಿದ. ಒಮ್ಮೆ ರಾಜ ಗಡಿಪ್ರದೇಶದ ಗಲಭೆಯನ್ನು ನಿಯಂತ್ರಿಸಲು ಹೊರಡುವಾಗ ತನ್ನ ಪಟ್ಟದರಾಣಿ ಮೃದುಲಕ್ಷಣೆಯನ್ನು ಕರೆದು ಋಷಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಆಜ್ಞೆ ಮಾಡಿದ.

ಒಂದು ದಿನ ಮೃದುಲಕ್ಷಣೆ ಊಟ ಸಿದ್ಧಪಡಿಸಿ ಇಟ್ಟಳು. ಸುಗಂಧದ ನೀರಿನಲ್ಲಿ ಸ್ನಾನಮಾಡಿ, ಅಲಂಕಾರ ಮಾಡಿಕೊಂಡು ವಿಶಾಲವಾದ ಕೋಣೆಯಲ್ಲಿ ಹಾಸಿಗೆಯ ಮೇಲೆ ಕಾಯುತ್ತ ಕುಳಿತಾಗ ನಿದ್ರೆ ಹತ್ತಿತು. ಋಷಿ ಬೋಧಿಸತ್ವ ಆಕಾಶಮಾರ್ಗದಿಂದ ಅರಮನೆಯಲ್ಲಿ ಬಂದ. ಅವನ ಆಗಮನದ ಸದ್ದು ಕೇಳಿ ಗಾಬರಿಯಾಗಿ ಮೃದುಲಕ್ಷಣೆ ಥಟ್ಟೆಂದು ಮೇಲಕ್ಕೆದ್ದಳು. ಆಗ ಅವಳು ಹೊದ್ದುಕೊಂಡಿದ್ದ ನಾಜೂಕಾದ ವಸ್ತ್ರ ಜಾರಿಬಿಟ್ಟಿತು. ದೇವಿಯ ಈ ಅವಸ್ಥೆ ಸನ್ಯಾಸಿಯ ಇಂದ್ರಿಯಗಳನ್ನು ಚಂಚಲಗೊಳಿಸಿತು. ಮನಸ್ಸು ವಿಕಾರವಾಯಿತು. ನಿಂತುಕೊಂಡೇ ಊಟ ಮುಗಿಸಿ ಉದ್ಯಾನಕ್ಕೆ ಮರಳಿ ಬಂದು ಕಾಮಾಗ್ನಿಯಲ್ಲಿ ಬೇಯುತ್ತ ನಿರಾಹಾರಿಯಾಗಿ ಏಳು ದಿನಗಳ ಕಾಲ ಹಾಸಿಗೆಯಲ್ಲಿ ಮಲಗಿಯೇ ಬಿಟ್ಟ.

ADVERTISEMENT

ಏಳನೆಯ ದಿನ ರಾಜ ಮರಳಿ ಬಂದು ಸನ್ಯಾಸಿಯನ್ನು ಕಂಡಾಗ ಅವನ ಅವಸ್ಥೆಯನ್ನು ಕಂಡು ಗಾಬರಿಯಾಗಿ “ಏನು ತೊಂದರೆ?” ಎಂದು ಕೇಳಿದ. ಆಗ ಸನ್ಯಾಸಿ, “ರಾಜಾ, ನನಗೆ ದೈಹಿಕವಾಗಿ ಯಾವ ರೋಗವೂ ಇಲ್ಲ. ನಾನು ಕಾಮಾಸಕ್ತನಾಗಿ ನರಳುತ್ತಿದ್ದೇನೆ” ಎಂದ. ರಾಜ, “ಸ್ವಾಮಿ, ನಿಮ್ಮ ಮನಸ್ಸು ಯಾರಲ್ಲಿ ಆಸಕ್ತವಾಗಿದೆ?” ಎಂದು ಕೇಳಿದ. ಸನ್ಯಾಸಿ ನೇರವಾಗಿಯೇ, “ನನ್ನ ಆಸಕ್ತಿ ತಮ್ಮ ಪಟ್ಟ ಮಹಷಿಯಾದ ಮೃದುಲಕ್ಷಣೆಯಲ್ಲಿ” ಎಂದ. ರಾಜ, “ಆಯ್ತು ಸ್ವಾಮಿ, ಆಕೆಯನ್ನು ತಮಗೆ ಒಪ್ಪಿಸುತ್ತೇನೆ ಎಂದು ತಪಸ್ವಿಯನ್ನು ಅರಮನೆಗೆ ಕರೆದುಕೊಂಡು ಹೋಗಿ, ಮೃದುಲಕ್ಷಣೆಗೆ ಸರ್ವ ಅಲಂಕಾರಗಳನ್ನು ಮಾಡಿಸಿ ಆಕೆಯನ್ನು ತಪಸ್ವಿಗೆ ಒಪ್ಪಿಸಿದ. ಹೊರಗೆ ಬರುವಾಗ ಆಕೆ ಕಿವಿಯಲ್ಲಿ, “ತಪಸ್ವಿಯ ಸದಾಚಾರದ ರಕ್ಷಣೆ ನಿನ್ನ ಕರ್ತವ್ಯ” ಎಂದು ಹೇಳಿ ಬಂದ. ಅವಳು ತಕ್ಷಣ ತಪಸ್ವಿಗೆ, “ಆರ್ಯ, ನಾವು ಅರಮನೆಯಲ್ಲಿ ಇರುವುದು ಬೇಡ, ಮಂತ್ರಿಗಳಿಗೆ ಹೇಳಿ ಬೇರೊಂದು ಮನೆ ಪಡೆಯಿರಿ” ಎಂದಳು. ತಪಸ್ವಿ ಮಂತ್ರಿಯನ್ನು ಕೇಳಿದಾಗ ಆತ ಹಿಂದೆ ಶೌಚಾಲಯವಾಗಿದ್ದ ಪುಟ್ಟ ಕೊಠಡಿಯನ್ನು ಕೊಟ್ಟ. ರಾಣಿ ಅದರ ಮುಂದೆಯೇ ನಿಂತು, “ಆರ್ಯ, ಇದು ತುಂಬ ಕೊಳಕಾಗಿದೆ, ಶುದ್ಧಪಡಿಸಿ” ಎಂದಳು. ಕಾಮದಲ್ಲಿ ಕುರುಡಾಗಿದ್ದ ತಪಸ್ವಿ, ತಾನೇ ಜಟೆಕಟ್ಟಿಕೊಂಡು ಶೌಚಾಲಯದ ಕೊಳಕನ್ನೆಲ್ಲ ಬಳಿದು ತೊಳೆದ. ತಾನೇ ಹೋಗಿ ಹಾಸಿಗೆ, ಮಂಚ ಹೊತ್ತುಕೊಂಡು ಬಂದ.

ಮುಂದೆ ಜೊತೆಯಾಗಿ ಹಾಸಿಗೆಯಲ್ಲಿ ಕುಳಿತುಕೊಳ್ಳುವ ಮೊದಲು ಅವನ ಗಡ್ಡವನ್ನು ಹಿಡಿದೆಳೆದು, “ನೀನೊಬ್ಬ ತಪಸ್ವಿ, ಎಂಬ ಜ್ಞಾನ ಹಾರಿ ಹೋಯಿತೇ? ಎಂದು ಕೇಳಿದಳು. ತಕ್ಷಣ ತಪಸ್ವಿಯ ಕಾಮಜ್ವರ ಇಳಿದುಹೋಯಿತು, ಜ್ಞಾನ ಮರಳಿ ಬಂತು. ತನ್ನ ಚಿತ್ತವಿಕಾರ ಎಂಥೆಂಥ ಹಾಳು ಕೆಲಸಗಳನ್ನು ಮಾಡಿಸಿತು ಎಂಬುದು ತಿಳಿಯಿತು. ಮೃದುಲಕ್ಷಣೆಯನ್ನು ರಾಜನಿಗೊಪ್ಪಿಸಿ ರಾಜನ ಕ್ಷಮೆ ಕೇಳಿ ಮತ್ತೆ ಹಿಮಾಲಯಕ್ಕೆ ಹಾರಿ ಹೋದ.

ವಿಶುದ್ಧ ಸತ್ವವಿದ್ದವರೂ ವಿಕೃತಿಗೆ ಒಳಗಾಗುತ್ತಾರೆ, ಅದರಿಂದ ಯಶಸ್ಸುಳ್ಳವರೂ ಅಪಯಶಸ್ವಿಗೆ ಬಲಿಯಾಗುತ್ತಾರೆ. ಆದ್ದರಿಂದ ಎಷ್ಟು ಜಾಗ್ರತವಾಗಿದ್ದರೆ ಅಷ್ಟೂ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.