ADVERTISEMENT

ಬೆರಗಿನ ಬೆಳಕು | ಅನಪೇಕ್ಷತೆ

ಡಾ. ಗುರುರಾಜ ಕರಜಗಿ
Published 24 ಏಪ್ರಿಲ್ 2020, 19:45 IST
Last Updated 24 ಏಪ್ರಿಲ್ 2020, 19:45 IST
   

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಬ್ರಾಹ್ಮಣಿಯ ಗರ್ಭದಲ್ಲಿ ಜನಿಸಿದ. ಅವನು ಕಪ್ಪು ಬಣ್ಣದವನಾದ್ದರಿಂದ ಅವನನ್ನು ಕೃಷ್ಣಕುಮಾರ ಎಂದು ಕರೆದರು. ಅವನ ತಂದೆ ಎಂಬತ್ತು ಕೋಟಿ ಧನವನ್ನು ಹೊಂದಿದ ಶ್ರೀಮಂತ. ಕೃಷ್ಣಕುಮಾರ ತಕ್ಷಶಿಲೆಗೆ ಹೋಗಿ ಸಕಲ ವಿದ್ಯೆಗಳನ್ನು ಕಲಿತು ಬಂದ. ತಂದೆ ಗಳಿಸಿದ್ದ ಸಂಪತ್ತನ್ನು ಕಂಡ.

ಆ ಹಣವನ್ನು ನೋಡಿ ಅವನಿಗೆ ಸಂತೋಷವಾಗುವ ಬದಲು ದುಃಖವಾಯಿತು. ಗಳಿಸಿದವರಾರೂ ಅದನ್ನು ಬಳಸಲಿಲ್ಲ, ಆದ್ದರಿಂದ ಗಳಿಸುವುದು ಏಕೆ ಎಂದು ಎಲ್ಲವನ್ನು ದಾನ ಮಾಡಿ ಪ್ರವ್ರಜಿತನಾಗಿ ಹಿಮಾಲಯದಲ್ಲಿ ಸೇರಿಬಿಟ್ಟ. ತಿರುಗಾಡುತ್ತ ಒಂದು ಹಳ್ಳಿಯ ಹೊರವಲಯದಲ್ಲಿ ಮರದ ಕೆಳಗೆ ಉಳಿದ. ಅವನಿಗೆ ಪರ್ಣಶಾಲೆ ಬೇಡವೆನ್ನಿಸಿ, ಆಕಾಶವನ್ನೇ ಮನೆ ಮಾಡಿಕೊಂಡ. ದಿನಕ್ಕೆ ಒಂದೇ ಹೊತ್ತು ಬೇಯಿಸದ ಯಾವುದೋ ಒಂದು ಪದಾರ್ಥವನ್ನು ಒಂದು ಮುಷ್ಠಿ ಮಾತ್ರ ತಿನ್ನುತ್ತಿದ್ದ. ಅವನಿಗೆ ಯಾವ ಅಪೇಕ್ಷೆಯೂ ಇಲ್ಲದೆ ನಿರಾಭಾರಿಯಾಗಿದ್ದ. ಅವನ ಈ ಅನಪೇಕ್ಷೆಯ ಸಿದ್ಧಿ ಇಂದ್ರನ ಸಿಂಹಾಸನವನ್ನು ಅಲುಗಾಡಿಸಿತು.

ಇಂದ್ರ ಧ್ಯಾನದಲ್ಲಿ ಮರದ ಕೆಳಗೆ ಕುಳಿತ ಈ ಕೃಷ್ಣ ಸನ್ಯಾಸಿಯನ್ನು ಕಂಡ. ಈ ತಪಸ್ವಿ ನಿಜವಾಗಿಯೂ ಜಿತೇಂದ್ರಿಯ. ಅವನು ಎಷ್ಟು ಸಂತೋಷಿಯಾಗಿದ್ದಾನೆ! ಅವನ ಸಂತೋಷದ ಕಾರಣವನ್ನು ಕೇಳಿ ವರಗಳನ್ನು ಕೊಟ್ಟು ಬರಬೇಕೆಂದು ಇಂದ್ರ ಕೆಳಗಿಳಿದು ಬಂದ. ಇವನನ್ನು ಪರೀಕ್ಷಿಸಲೆಂದು, ‘ಹೇ ಋಷಿ, ನೀನು ಹೀಗೆ ಒಣಕಲಾಗಿ, ಕಪ್ಪಗಿದ್ದರೂ ಸಂತೋಷದಲ್ಲಿ ಇದ್ದೀಯಲ್ಲ, ಏನು ಕಾರಣ?’ ಎಂದು ಕೇಳಿದ. ‘ಹೇ ಇಂದ್ರ, ಚರ್ಮದಿಂದ ಗುಣ ನಿರ್ಧಾರವಾಗುವುದಿಲ್ಲ, ಅಂತರಂಗ ಶುದ್ಧವಾಗಿದ್ದರೆ ಮಾತ್ರ ಆತ ಬ್ರಾಹ್ಮಣ’ ಎಂದ.

ADVERTISEMENT

‘ಮುನಿಯೇ, ನಿನ್ನ ಅನಪೇಕ್ಷೆಯ ಬದುಕು ನನಗೆ ಬಹಳ ಸಂತೋಷವನ್ನು ತಂದಿದೆ. ನಿನಗೆ ನಾಲ್ಕು ವರಗಳನ್ನು ನೀಡುತ್ತೇನೆ. ಕೇಳಿಕೋ’ ಎಂದ ಇಂದ್ರ. ಆಗ ಕೃಷ್ಣ ಮುನಿ ನಾಲ್ಕು ವರಗಳನ್ನು ಬೇಡಿದ. ನನಗೆ ಯಾರ ಬಗ್ಗೆಯೂ ಕ್ರೋಧ ಬರದಿರಲಿ. ನನಗೆ ಯಾರ ಮೇಲೆಯೂ ದ್ವೇಷ ಮೂಡದಿರಲಿ. ಮತ್ತೊಬ್ಬರ ಸಂಪತ್ತಿನ, ಜ್ಞಾನದ ಬಗ್ಗೆ ಲೋಭ ಬರದಿರಲಿ. ಯಾರೊಂದಿಗೂ ಮೋಹದ ಬಲೆ ಕಟ್ಟುವಂಥ ಸ್ನೇಹವಾಗದಿರಲಿ. ಈ ಪ್ರಶ್ನೆಗಳನ್ನು ಕೇಳಿ ಇಂದ್ರನಿಗೆ ಆಶ್ಚರ್ಯ ಮತ್ತು ಸಂತೋಷವಾಯಿತು.

ಈ ಮುನಿ ತನಗಾಗಿ ಏನನ್ನೂ ಬೇಡಲಿಲ್ಲ. ಬೇಡಿದ್ದು ಮತ್ತಷ್ಟು ನಿರಪೇಕ್ಷೆಯನ್ನು. ಮತ್ತೆ ಇಂದ್ರ ಹೇಳಿದ, ‘ಮುನಿ ನಿನ್ನ ಮಾತಿನಿಂದ ನಾನು ಅತ್ಯಂತ ಪ್ರಸನ್ನನಾಗಿದ್ದೇನೆ. ಇನ್ನೊಂದು ವರವನ್ನು ನಿನಗಾಗಿ ಕೇಳಿಕೋ’. ಕೃಷ್ಣಮುನಿ ಕ್ಷಣಕಾಲ ಯೋಚಿಸಿ ಹೇಳಿದ, ‘ಇಂದ್ರ, ನನ್ನಿಂದಾಗಿ ಯಾರ ಮನಸ್ಸಿಗೂ, ದೇಹಕ್ಕೂ ಕಷ್ಟವಾಗದಿರಲಿ ಎಂಬ ವರವನ್ನು ಕೊಡು’, ಈ ಬಾರಿಯೂ ಮುನಿ ತ್ಯಾಗಕ್ಕೆ ಸಂಬಂಧಿಸಿದ ವರವನ್ನೇ ಕೇಳಿದ್ದಾನೆ. ಈತನಲ್ಲಿ ಯಾವ ಕೆಟ್ಟ ಭಾವನೆಯೂ ಬರುವುದು ಸಾಧ್ಯವಿಲ್ಲವೆಂಬಂತೆ ಈತನ ಅಂತರಂಗ ಶುದ್ಧಿಯಾಗಿದೆ. ಆದ್ದರಿಂದ ಈ ಮುನಿಗೆ ನೆರಳಾದ ಈ ಮರಕ್ಕೆ ಸದಾಕಾಲ ಹೂವು, ಹಣ್ಣುಗಳಾಗಲಿ ಎಂದು ಹರಸಿ ಇಂದ್ರ ಮಾಯವಾದ.

ನಮ್ಮ ಮಾತು, ನಡತೆಗಳು ನಮ್ಮ ಅಂತರಂಗವನ್ನು ಪ್ರತಿಬಿಂಬಿಸುತ್ತವೆ. ಅಂತರಂಗ ಶುದ್ಧವಾದಾಗ ಅದು ನಡವಳಿಕೆಯಲ್ಲಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.