ADVERTISEMENT

‘ಮೂರ್ಖರಿಗೆ ಉಪದೇಶ’

ಡಾ. ಗುರುರಾಜ ಕರಜಗಿ
Published 5 ಜನವರಿ 2020, 20:19 IST
Last Updated 5 ಜನವರಿ 2020, 20:19 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬೋಧಿಸತ್ವ ಒಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ದೊಡ್ಡವನಾದ ಮೇಲೆ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಕಲಿತು ಬಂದ. ನಂತರ ಪ್ರವೃಜ್ಯವನ್ನು ಸ್ವೀಕರಿಸಿ ಹಿಮಾಲಯದಲ್ಲಿ ನೆಲೆಯಾಗಿ ನಿಂತ. ಬಹಳ ಕಾಲ ತಪಸ್ಸು ಮಾಡಿ ಮಹಾಜ್ಞಾನಿ ಎಂದು ಹೆಸರು ಮಾಡಿದ.

ಒಂದು ಸಲ ಆತ ದೇಶಪ್ರದಕ್ಷಿಣೆ ಮಾಡುತ್ತ ವಾರಾಣಸಿಗೆ ಬಂದ. ಅವನ ಬರುವನ್ನು ತಿಳಿದ ರಾಜ ಬ್ರಹ್ಮದತ್ತ ಅರಮನೆಗೆ ಕರೆಸಿ ಗೌರವ ಸಮರ್ಪಿಸಿದ. ಆಗ ಬೋಧಿಸತ್ವ ರಾಜನಿಗೆ ಉಪದೇಶ ಮಾಡಿದ, ‘ರಾಜಾ, ನೀನು ಅಪ್ರಮಾದಿಯಾಗಿ, ಕ್ಷಮೆ, ಮೈತ್ರಿ, ದಯೆಯಿಂದ ರಾಜ್ಯಭಾರ ಮಾಡಬೇಕು. ಎಂದೂ ಕೋಪ ಮಾಡಿಕೊಳ್ಳಬೇಡ’.

ಹೀಗೆ ಪ್ರತಿದಿನ ಬಂದಾಗಲೂ ಇದೇ ಉಪದೇಶವನ್ನು ಮಾಡಿದ. ಈ ಮಾತುಗಳಿಂದ ರಾಜನಿಗೆ ತುಂಬ ಪ್ರಯೋಜನವಾಯಿತೆನ್ನಿಸಿತು. ಆಗ ರಾಜ ತುಂಬ ಸಂತೋಷದಿಂದ ಒಂದು ಲಕ್ಷ ಹೊನ್ನು ಆದಾಯ ಬರುವ ಹಳ್ಳಿಗಳನ್ನು ಬೋಧಿಸತ್ವನಿಗೆ ದಾನವಾಗಿ ಕೊಟ್ಟ. ಆದರೆ ಬೋಧಿಸತ್ವ ಅವುಗಳನ್ನು ಒಪ್ಪಿಕೊಳ್ಳದೆ ನಿರಾಭಾರಿಯಾಗಿ ಉಳಿದುಬಿಟ್ಟ. ಹೀಗೆಯೇ ಸಮಯ ಕಳೆಯುತ್ತ ಹನ್ನೆರಡು ವರ್ಷಗಳಾದವು.

ADVERTISEMENT

ಒಂದು ಸಲ ಬೋಧಿಸತ್ವ ವಾರಾಣಸಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಸುತ್ತಾಡಿಕೊಂಡು ಬರಲು ಹೊರಟ. ಗಂಗಾನದಿಯ ತೀರಕ್ಕೆ ಬಂದು, ನದಿಯನ್ನು ದಾಟಿ ಆ ಕಡೆಗೆ ಹೋಗಬಯಸಿದ. ನದಿ ದಾಟಿಸಲು ಒಂದು ನೌಕೆ ಇತ್ತು. ಅದರ ನಾವಿಕನ ಹೆಸರು ಅವಾರಿಯಪಿತ. ಅವನೊಬ್ಬ ಮೂರ್ಖ. ಅವನಿಗೆ ದೊಡ್ಡವರಾರು, ಅವರ ಯೋಗ್ಯತೆ ಏನು ಎನ್ನುವುದರ ತಿಳಿವಳಿಕೆ ಇರಲಿಲ್ಲ. ಹಣಗಳಿಸುವ ವಿಧಾನಗಳ ಅರಿವೂ ಇರಲಿಲ್ಲ. ಆತ ಪ್ರಯಾಣಿಕರನ್ನು ನಾವೆಯಲ್ಲಿ ಕೂರಿಸಿಕೊಂಡು ಹಣ ಕೇಳದೆ ನದಿ ದಾಟಿಸುತ್ತಿದ್ದ. ಬಾಡಿಗೆ ಎಷ್ಟು ಎಂದು ಅವರು ಕೇಳಿದರೆ, ‘ನದಿ ದಾಟಲಿ ಬಿಡಿ. ಆಮೇಲೆ ಕೊಡೋವಿರಂತೆ’ ಎನ್ನುತ್ತಿದ್ದ. ನದಿ ದಾಟಿದ ಮೇಲೆ ಬಾಯಿಗೆ ಬಂದಂತೆ ಹಣ ಕೇಳುತ್ತಿದ್ದ. ಅಷ್ಟು ಹಣ ಇಲ್ಲದವರೊಂದಿಗೆ ಜಗಳವಾಡುತ್ತಿದ್ದ. ಅಶಕ್ತರನ್ನು ಹೊಡೆಯಲುಹೋಗುತ್ತಿದ್ದ. ಆಗ ಉಳಿದ ಪ್ರಯಾಣಿಕರೆಲ್ಲ ಸೇರಿ ಈತನಿಗೆ ಹೊಡೆಯುತ್ತಿದ್ದರು.

ಬೋಧಿಸತ್ವ ನಾವಿಕನಿಗೆ ಗಂಗೆಯ ಆ ದಡಕ್ಕೆ ಮುಟ್ಟಿಸುವಂತೆ ಕೇಳಿದ. ಆಗ ಇವನ ಸನ್ಯಾಸಿ ವೇಷವನ್ನು ನೋಡಿ ನಾವಿಕ ಕೇಳಿದ, ‘ದಾಟಿಸಿದಾಗ ಬಾಡಿಗೆ ಕೊಡುವುದಕ್ಕೆ ಹಣ ಇದೆಯೇ?’. ಬೋಧಿಸತ್ವ, ‘ನಾವಿಕ, ನಿನಗೆ ಭೋಗವೃದ್ಧಿಯ, ಅರ್ಥವೃದ್ಧಿಯ ಹಾಗೂ ಧರ್ಮವೃದ್ಧಿಯ ಉಪಾಯ ಹೇಳುತ್ತೇನೆ’ ಎಂದ. ಈ ಸನ್ಯಾಸಿಯ ಹತ್ತಿರ ಏನೇನೋ ಇದೆ ಎಂದುಕೊಂಡು ನಾವಿಕ ಈತನನ್ನು ನದಿ ದಾಟಿಸಿದ. ನಂತರ ಹಣ ಕೇಳಿದಾಗ ಬೋಧಿಸತ್ವ, ರಾಜನಿಗೆ ಹೇಳಿದ ಉಪದೇಶವನ್ನು ಹೇಳಿ, ‘ಇದನ್ನು ನೀನು ತಪ್ಪದೆ ಪಾಲಿಸು, ಬದುಕು ಬಂಗಾರವಾಗುತ್ತದೆ’ ಎಂದ. ನಾವಿಕ, ‘ಹಣ ಎಲ್ಲಿ?’ ಎಂದು ಜೋರು ಮಾಡಿದ. ಬೋಧಿಸತ್ವ, ‘ನಾನು ಸನ್ಯಾಸಿಯಪ್ಪ, ನನ್ನಲ್ಲಿ ಹಣ ಇಲ್ಲ. ನಾನು ನೀಡುವುದು ಉಪದೇಶ ಮಾತ್ರ’ ಎಂದ. ನಾವಿಕನಿಗೆ ವಿಪರೀತ ಕೋಪ ಬಂದು ಬೋಧಿಸತ್ವನನ್ನು ತಳ್ಳಿ, ನೆಲಕ್ಕೆ ಕೆಡವಿ, ಎದೆಯ ಮೇಲೆ ಕುಳಿತು, ಮುಖಕ್ಕೆ ರಪರಪನೆ ಹೊಡೆದ. ಆಗ ಉಳಿದವರು ಬಂದು ಇವನನ್ನು ಬಿಡಿಸಿ ನಾವಿಕನಿಗೆ ಶಿಕ್ಷೆ ಕೊಡಿಸಿದರು.

ಬೋಧಿಸತ್ವ ಹೇಳಿದ, ‘ರಾಜನಿಗೆ ಇದೇ ಉಪದೇಶ ನೀಡಿದಾಗ ಲಕ್ಷ ಆದಾಯ ಬರುವ ಹಳ್ಳಿಗಳನ್ನು ಕೊಟ್ಟು ಮರ್ಯಾದೆ ಮಾಡಿದ. ಅದೇ ಉಪದೇಶವನ್ನು ನಾವಿಕನಿಗೆ ಕೊಟ್ಟರೆ ಶಿಕ್ಷೆ ದೊರಕಿತು. ಅದಕ್ಕೆ ಉಪದೇಶವನ್ನು ಯೋಗ್ಯರಿಗೆ ಮಾತ್ರ ಮಾಡಬೇಕು. ಆಯೋಗ್ಯರಿಗೆ ಉಪದೇಶ ವ್ಯರ್ಥ ಮಾತ್ರವಲ್ಲ, ಅನರ್ಥಕಾರಿ’.

ಈ ಮಾತು ಇಂದಿಗೂ ಸತ್ಯವೇ. *

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.