ADVERTISEMENT

ಬೆರಗಿನ ಬೆಳಕು: ವ್ಯರ್ಥ ಸಾಹಸ

ಡಾ. ಗುರುರಾಜ ಕರಜಗಿ
Published 26 ನವೆಂಬರ್ 2020, 20:55 IST
Last Updated 26 ನವೆಂಬರ್ 2020, 20:55 IST
   

ಸೊಟ್ಟುಗಳ ನೆಟ್ಟಗಾಗಿಪ ಯತ್ನ ಲೋಕದಲಿ |
ಸೃಷ್ಟಿಯಾದಿಯಿನಾಗುತಿಹುದು, ಫಲವೇನು? ||
ಹೊಟ್ಟೆ ನೋವಿಳಿಯುತಿರೆ ರಟ್ಟೆ ನೋವೆನ್ನುವುದು |
ಮಟ್ಟಸವೆ ತಿರೆಹರವು ? – ಮಂಕುತಿಮ್ಮ || 359 ||

ಪದ-ಅರ್ಥ: ಸೃಷ್ಟಿಯಾದಿಯನಾಗುತಿಹುದು=ಸೃಷ್ಟಿಯ+ಆದಿಯಿನ್ (ಆದಿಯಿಂದ)+ಆಗುತಿಹುದು, ಮಟ್ಟಸವೆ=ಸಮವೆ, ತಿರೆಹರವು=ತಿರೆ(ಭೂಮಿ)+ಹರವು(ವಿಸ್ತಾರ)

ವಾಚ್ಯಾರ್ಥ: ಸೃಷ್ಟಿ ಪ್ರಾರಂಭದಿಂದಲೂ ತಪ್ಪುಗಳನ್ನು ಸರಿಮಾಡುವ ಪ್ರಯತ್ನಗಳು ಲೋಕದಲ್ಲಿ ನಡೆಯುತ್ತಲೇ ಇವೆ. ಆದರೆ ಅದರಿಂದಾದ ಲಾಭವೇನು? ಹೊಟ್ಟೆಯ ನೋವು ಕಡಿಮೆಯಾಗುವಷ್ಟರಲ್ಲಿ ತೋಳಿನ ನೋವು ಪ್ರಾರಂಭವಾಗುತ್ತದೆ. ಭೂಮಿಯ ವಿಸ್ತಾರ ಎಲ್ಲೆಡೆಗೂ ಸಮತಟ್ಟಾಗಿದೆಯೇ?

ADVERTISEMENT

ವಿವರಣೆ: ಹಳೆಯ ಇಂಗ್ಲೆಂಡಿನ ಒಂದು ಸುಂದರ ಕಥೆ ಹೀಗಿದೆ. ಒಬ್ಬ ಸುಂದರಳಾದ ಹುಡುಗಿಗೆ ಯಾವ ದೋಷವೂ ಇಲ್ಲದ ಅತ್ಯಂತ ಪರಿಪೂರ್ಣ ವಸ್ತುವನ್ನು ಕಾಣುವಾಸೆ. ಆಕೆ ಪ್ರಪಂಚವನ್ನು ಸುತ್ತಿದಳು, ಎಲ್ಲಿಯೂ ಪರಿಪೂರ್ಣತೆ ಕಾಣಲಿಲ್ಲ. ಒಂದು ಬೆಟ್ಟದ ಮೇಲೆ ನಿಂತಾಗ ಕೆಳಗೆ ಒಂದು ಗುಲಾಬಿ ತೋಟ ಕಂಡಿತು. ಅವು ಅತ್ಯಂತ ಸುಂದರವಾದ ಹೂಗಳು! ಆಕೆ ಕೆಳಗಿಳಿದು ಬಂದು ಒಂದೊಂದನ್ನೇ ನೋಡಿದಳು. ಪ್ರತಿಯೊಂದರಲ್ಲೂ ಯಾವುದೋ ಕೊರತೆ.

ಕೊನೆಗೊಂದು ಗುಲಾಬಿ ಹೂವು ಸಿಕ್ಕಿತು. ಅದರಲ್ಲಿ ಯಾವ ದೋಷವೂ ಇಲ್ಲ! ಅದನ್ನು ಕತ್ತರಿಸಿ ಕೈಯಲ್ಲಿ ಹಿಡಿದು ಓಡಿದಳು. ದಾರಿಯಲ್ಲೊಬ್ಬ ಮುದುಕಿ ಸಿಕ್ಕಳು. ‘ಅಜ್ಜೀ ಈ ಗುಲಾಬಿ ಹೂವು ಪರಿಪೂರ್ಣವೇ?’. ಅಜ್ಜಿ ತಲೆ ಅಲ್ಲಾಡಿಸಿ, ‘ಮಗೂ, ಇದೆಲ್ಲಿ ಪರಿಪೂರ್ಣ? ಅದು ಸಾವಿನಂಚಿನಲ್ಲಿದೆ. ಗಿಡದಿಂದ ಬೇರೆಯಾದಾಗಲೇ ಅದನ್ನು ಸಾವು ಮುಟ್ಟಿದೆ’ ಎಂದಳು.

ಇಂಥ ಸುಂದರವಾದ ಹೂವಿಗೂ ಸಾವೇ? ಆಕೆ ಮನೆಗೋಡಿದಳು. ಕನ್ನಡಿಯಲ್ಲಿ ತನ್ನ ಅಂದವಾದ ಮುಖವನ್ನು ಕಂಡು, ಇದು ಪರಿಪೂರ್ಣ ಎಂದುಕೊಂಡಳು. ಆಕೆಯ ಗೆಳತಿಯರು ಹೇಳಿದರು, ‘ಸಮುದ್ರದಾಚೆಯ ನಗರದಲ್ಲಿ ಒಬ್ಬ ತರುಣನಿದ್ದಾನೆ. ಆತ ಪರಿಪೂರ್ಣತೆಯನ್ನು ಕಂಡವನು. ಅವನು ಮೆಚ್ಚಿದರೆ ನೀನು ಪರಿಪೂರ್ಣ’. ಆಕೆ ಪ್ರಯತ್ನಪಟ್ಟು ಆತನನ್ನು ತಲುಪಿದಳು.

ಉಸಿರುಬಿಗಿ ಹಿಡಿದು ಕೇಳಿದಳು, ‘ನಾನು ಪರಿಪೂರ್ಣವೇ?’. ಆತ ದಿಟ್ಟಿಸಿ ನೋಡಿ ಹೇಳಿದ. ‘ನಿನ್ನಂತಹ ಚೆಲುವೆಯಾದವಳನ್ನು ಇದುವರೆಗೂ ನೋಡಲಿಲ್ಲ ಹುಡುಗಿ, ಆದರೆ ನೀನು ಪರಿಪೂರ್ಣಳಲ್ಲ’, ಆಕೆ ತನ್ನ ಆಳವಾದ ಕಣ್ಣುಗಳಲ್ಲಿ ನಿರಾಸೆ ತುಂಬಿಕೊಂಡು ಕೇಳಿದಳು, ‘ಏನು ಕೊರತೆ ನನ್ನಲ್ಲಿ?’ ಆತ, ‘ಹುಡುಗಿ, ಮುಖ ಆತ್ಮದ ಪ್ರತಿಬಿಂಬ ಎನ್ನುತ್ತಾರೆ. ನಿನ್ನಾತ್ಮದಲ್ಲಿ ನಾನು ನಿಜವಾಗಿಯೂ ಪರಿಪೂರ್ಣಳೇ ಎಂಬ ಆತಂಕ ಮನೆ ಮಾಡಿದೆ. ಅದು ನಿನ್ನ ಮುಖದ ಚೆಂದದಲ್ಲಿ ಪ್ರತಿಬಿಂಬಿಸುತ್ತಿದೆ’ ಎಂದ. ‘ಹಾಗಾದರೆ ಪರಿಪೂರ್ಣಳಾಗಲು ನಾನೇನು ಮಾಡಲಿ?’ ಕೇಳಿದಳು ಚೆಂದದ ಹುಡುಗಿ. ಆತ ನುಡಿದ, ‘ಪರಿಪೂರ್ಣಳಾಗುವ ಚಿಂತೆಯನ್ನು ಬಿಡು. ಪ್ರಪಂಚದಲ್ಲಿ ಯಾರೂ, ಯಾವುದೂ ಪರಿಪೂರ್ಣವಲ್ಲ. ಆದರೆ ಪ್ರಪಂಚವನ್ನು ಕಂಡು ಕೊರಗುವುದನ್ನು ಬಿಡು. ಆಗುವುದನ್ನು ಸ್ವೀಕರಿಸಿ ಹೃದಯದಲ್ಲಿ ಶಾಂತಿಯನ್ನು ಪಡೆ. ಆಗ ನೀನು ಪರಿಪೂರ್ಣಳಾಗುತ್ತೀಯಾ’ ಹುಡುಗಿ ಆ ಮಾತನ್ನು ಒಪ್ಪಿದಳು.

ಜಗತ್ತಿನಲ್ಲಿ ಹೆಚ್ಚು ಕಡಿಮೆ ಇದೆ. ಆ ತಪ್ಪುಗಳನ್ನು ಸರಿಮಾಡುವ ಪ್ರಯತ್ನ ಎಂದಿನಿಂದಲೂ ನಡೆಯುತ್ತಲೇ ಇದೆ. ಆದರೆ ಒಂದು ಸರಿಯಾಗುವಷ್ಟರಲ್ಲಿ ಮತ್ತೊಂದಡೆ ತೊಂದರೆಯಾಗುತ್ತದೆ. ಪ್ರತಿಯೊಂದು ಅವಿಷ್ಕಾರ ಮತ್ತೊಂದು ತೊಂದರೆಯನ್ನು ತಂದಿಡುತ್ತದೆ. ಅದಕ್ಕೆ ಕಗ್ಗ ಕೇಳುತ್ತದೆ, ‘ಮಟ್ಟಸವೆ ತಿರೆಹರವು?’ ಭೂಮಿಯೇ ಸಮತಟ್ಟಾಗಿಲ್ಲ. ಇನ್ನು ಪ್ರಪಂಚವನ್ನು ಸರಿ ಮಾಡುವುದೆಂತು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.