ADVERTISEMENT

ಬೆರಗಿನ ಬೆಳಕು | ದೇಶತ್ಯಾಗದ ನಡೆ

ಡಾ. ಗುರುರಾಜ ಕರಜಗಿ
Published 21 ಜೂನ್ 2021, 19:45 IST
Last Updated 21 ಜೂನ್ 2021, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ತನ್ನ ಮಗ ವೆಸ್ಸಂತರನಿಗೆ ಸಿವಿ ರಾಜ್ಯದ ಜನರು ದೇಶದಿಂದ ಹೊರಗೆ ಹಾಕುವ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆಂಬ ಸುದ್ದಿ ಅವನ ತಾಯಿ ಯಶಸ್ಪಿ ರಾಜಪುತ್ರಿ ಪುಸತಿದೇವಿಗೆ ತಲುಪಿತು. ಆಕೆಗೆ ಗಾಬರಿಯಾಗಿ ತಕ್ಷಣವೇ ರಾಜನ ಬಳಿಗೆ ಹೋದಳು. ಅವನಿಗೂ ಮನಸ್ಸಿಗೆ ಬಹಳ ಘಾಸಿಯಾಗಿತ್ತು. ಪುಸತಿದೇವಿ ಕರುಣಾರ್ದಳಾಗಿ ವಿಲಾಪ ಮಾಡತೊಡಗಿದಳು. ‘ನನ್ನ ಪ್ರಿಯಪುತ್ರ, ನಿರ್ದೋಷಿ ವೆಸ್ಸಂತರನನ್ನು ಯಾಕೆ ದೇಶದಿಂದ ಹೊರಹಾಕಲಾಗುತ್ತದೆ? ಆತ ಅಧ್ಯಯನಶೀಲನಾದವನು, ದಾನಿ, ತ್ಯಾಗಿ, ಯಾರ ಬಗ್ಗೆಯೂ ಅಸೂಯೆ ಪಡುವವನಲ್ಲ. ಅಂತಹವನನ್ನು ದೇಶಭ್ರಷ್ಟ ಮಾಡುವುದು ಯಾವ ಅಪರಾಧಕ್ಕೆ? ಆತ ದೇವತೆಗಳ ಹಿತೈಷಿ, ರಾಜನ ಹಿತೈಷಿ, ಸಕಲ ಜನರ ಹಿತೈಷಿ. ಹೀಗಾದರೂ ಅವನು ದೇಶಕ್ಕೆ ಕಂಟಕ ಎಂದು ಭಾವಿಸಿ ಯಾಕೆ ಅವನನ್ನು ದೇಶದಿಂದ ಹೊರಗೆ ಹಾಕುತ್ತೀರಿ?’ ಆಗ ರಾಜ, ‘ನಾನೇನು ಮಾಡಲಿ? ಇದು ನನ್ನ ಸಮಾಜಪ್ರಮುಖರ ನಿರ್ಧಾರ. ಅವರ ಅಭಿಪ್ರಾಯದಂತೆ ಮಾಂಗಲೀಕ ಆನೆಯನ್ನು ದಾನವಾಗಿ ಕೊಡುವುದು ರಾಜ್ಯದ ಭಾಗ್ಯವನ್ನು ನೀಗಿದಂತೆ. ನನಗೆ ಮಗ ಮುಖ್ಯ ಆದರೆ ನನ್ನ ದೇಶ ಮಗನಿಗಿಂತ ಶ್ರೇಷ್ಠ. ಆದ್ದರಿಂದ ಮಗನ ತ್ಯಾಗಕ್ಕೆ ನಾನು ಸಿದ್ಧವಾಗಿದ್ದೇನೆ’ ಎಂದ.

ರಾಜನ ಮಾತು ಕೇಳಿ ರಾಣಿಗೆ ಮತ್ತಷ್ಟು ದುಃಖ ಒತ್ತರಿಸಿ ಬಂತು. ‘ಯಾವಾಗಲೂ ಆನೆ, ಕುದುರೆ, ಪಲ್ಲಕ್ಕಿಯಲ್ಲಿ ಹೋಗುತ್ತಿದ್ದ ಮಗ ಕಾಲುನಡಿಗೆಯಲ್ಲಿ ಹೇಗೆ ಹೋದಾನು? ಅವನಿಂದ ವಲ್ಕಲವನ್ನು ಧರಿಸುವುದು ಸಾಧ್ಯವೇ? ಅವನ ಹೆಂಡತಿ ಅನಿಂದಿತ ಅಂಗಗಳನ್ನು ಹೊಂದಿದವಳು, ಕುಶ ವಸ್ತ್ರವನ್ನು ಹೇಗೆ ಧರಿಸಿಯಾಳು? ಆಕೆ ಅತ್ಯಂತ ಕೋಮಲವಾದ ಪಾದಗಳನ್ನು ಹೊಂದಿದವಳು, ಕಲ್ಲು, ಮುಳ್ಳುಗಳಿರುವ ಕಾಡಿನಲ್ಲಿ ಹೇಗೆ ನಡೆಯುತ್ತಾಳೆ? ಜಾಲಿಕುಮಾರ ಮತ್ತು ಕೃಷ್ಣಾಜಿನ ಇವರು ನನ್ನ ಪುಟ್ಟ ಮೊಮ್ಮಕ್ಕಳು, ಕಾಡಿನಲ್ಲಿ ಹೇಗೆ ಬದುಕಿ ಉಳಿದಾರು?’ ಎಂದು ರಾಜನ ಮುಂದೆ, ಪರಿವಾರದವರ ಮುಂದೆ ಗೋಳಾಡಿದಳು ಪುಸತಿದೇವಿ. ರಾಜ ಅಸಹಾಯಕನಾಗಿ ಕುಳಿತಿದ್ದ.

ಆಗ ವೆಸ್ಸಂತರ, ಮಾದ್ರಿ ಹಾಗೂ ಮಕ್ಕಳು ಅರಮನೆಗೆ ಬಂದರು. ವೆಸ್ಸಂತರ ರಾಜ, ರಾಣಿಯರ ಕಾಲುಗಳಿಗೆ ನಮಸ್ಕಾರ ಮಾಡಿ, ‘ಮಹಾರಾಜಾ, ತಮ್ಮ ಸಿವಿರಾಜ್ಯದ ಜನರ ತೀರ್ಮಾನಕ್ಕೆ ತಲೆಬಾಗಿ, ನಾನು ನಿರ್ದೋಷಿಯಾದರೂ ದೇಶ ಬಿಟ್ಟು ಹೋಗಲು ತೀರ್ಮಾನ ಮಾಡಿದ್ದೇನೆ. ಈಗ ತಮ್ಮ ಅಪ್ಪಣೆಯನ್ನು ಬೇಡಲು ಬಂದಿದ್ದೇನೆ’ ಎಂದ. ರಾಜ ಹೇಳಿದ, ‘ಮಗೂ, ನಿನಗೆ ರಾಜಧರ್ಮ ತಿಳಿದಿದೆ. ರಾಜ್ಯಕ್ಕಾಗಿ ನಾನು ಎಲ್ಲ ತ್ಯಾಗಗಳಿಗೂ ಸಿದ್ಧವಾಗಬೇಕಾಗುತ್ತದೆ. ನಿನಗೆ ಅನುಮತಿ ಕೊಡುತ್ತೇನೆ. ನಿನ್ನ ಪ್ರವೃಜ್ಞೆ ಸಫಲವಾಗಲಿ. ಆದರೆ ನಿನ್ನ ಸುಕೋಮಲೆಯಾದ ಪತ್ನಿ, ಯಾವ ತಪ್ಪು ಮಾಡಿದ್ದಾಳೆ? ಆಕೆ ತನ್ನ ಮಕ್ಕಳೊಂದಿಗೆ ಇಲ್ಲಿಯೇ ಇರಲಿ’. ಆಗ ಸತಿ ಮಾದ್ರಿ, ‘ಮಹಾರಾಜ, ನಾನು ಕಾಡಿನಲ್ಲಿ ಯಾವುದೇ ಭಯವನ್ನು, ಆಪತ್ತನ್ನು ಸಹಿಸುತ್ತೇನೆ, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಆದರೆ ಸುಂದರವಾದ, ಅನೇಕ ರತ್ನಗಳಿಂದ ತುಂಬಿರುವ, ಸಾಗರ ಪರ್ಯಂತ ಭೂಮಂಡಲವೇ ನನಗೆ ಲಭಿಸಿದರೂ, ನನ್ನ ಪತಿ ವೆಸ್ಸಂರತರನಿಲ್ಲದೆ ನಾನು ಇರಬಯಸುವುದಿಲ್ಲ. ಅವನೊಬ್ಬನಿದ್ದರೆ, ನನ್ನ ಕಾಮನೆಗಳೆಲ್ಲ ಪೂರೈಸುತ್ತವೆ. ಆದ್ದರಿಂದ ನಮಗೂ ಅಪ್ಪಣೆಕೊಡಿ’ ಎಂದು ಬೇಡಿದಳು. ನಾಲ್ವರೂ ಹೊರಡಲು ಸಿದ್ಧರಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.