ADVERTISEMENT

ಬೆರಗಿನ ಬೆಳಕು: ಪ್ರಕೃತಿ, ಸೌಂದರ್ಯದ ಗುರು

ಡಾ. ಗುರುರಾಜ ಕರಜಗಿ
Published 1 ಆಗಸ್ಟ್ 2021, 16:33 IST
Last Updated 1 ಆಗಸ್ಟ್ 2021, 16:33 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಾಂದಳದ ಬಾಗು, ರವಿಕಿರಣಗಳ ನೀಳ್‍ಕೋಲು |
ಇಂದುಮಣಿನುಣ್ಪು, ತಾರೆಗಳ ಕಣ್ಮಿನಿಗು ||
ಚೆಂದದಂಗಾಂಗಭಾವದಿ ಮೊದಲ ಪಾಠವಿವು |
ಸೌಂದರ್ಯಗುರು ಪ್ರಕೃತಿ – ಮಂಕುತಿಮ್ಮ || 444 ||

ಪದ-ಅರ್ಥ: ಬಾಂದಳ= ಆಕಾಶ, ಇಂದುಮಣಿ= ಚಂದ್ರ, ನುಣ್ಪು= ನುಣುಪು, ಕಣ್ಮಿನಿಗು= ಕಣ್ಣಿನ ಮಿನುಗುವಿಕೆ, ಚೆಂದದಂಗಾಂಗಭಾವದಿ= ಚೆಂದದ+ ಅಂಗಾಂಗ+ ಭಾವದಿ.

ವಾಚ್ಯಾರ್ಥ: ಬಾಗಿದಂತೆ ತೋರುವ ಆಕಾಶ, ಸೂರ್ಯನ ನೀಳವಾದ ಕಿರಣಗಳು, ಚಂದ್ರನ ತಂಪಾದ ನುಣುಪಾದ ಹೊಳಪು, ತಾರೆಗಳ ಕಣ್ಣು ಮಿಟುಕಾಟ, ಚೆಂದದ ಅಂಗಾಂಗಭಾವದಿಂದ ಇವು ನಮಗೆ ದೊರೆಯುವ ಮೊದಲ ಪಾಠಗಳು. ಈ ಎಲ್ಲ ಸೌಂದರ್ಯಕ್ಕೆ ಪ್ರಕೃತಿಯೇ ಗುರು.

ADVERTISEMENT

ವಿವರಣೆ: ಪ್ರಕೃತಿ ಎಂದರೆ ಸ್ವಭಾವ. ಅದು ತನ್ನಷ್ಟಕ್ಕೇ ಆದದ್ದು, ಯಾರಿಂದಲೂ ಮಾಡಲ್ಪಟ್ಟಿದ್ದಲ್ಲ. ಅದೇ ನಿಸರ್ಗ ಅಥವಾ ಸೃಷ್ಟಿ. ಭೂಮಿ, ವಾಯು, ಬೆಂಕಿ, ನೀರು ಮತ್ತು ಆಕಾಶ ಈ ಪಂಚಭೂತಗಳಿಂದಾದ್ದು ನಿಸರ್ಗ. ನಾನಾ ಪ್ರಾಣಿಗಳ ಹುಟ್ಟು ಕೂಡ ಅವೇ ಪಂಚಭೂತಗಳಿಂದಾದ್ದರಿಂದ ಅವೂ ಪ್ರಕೃತಿಯ ಉತ್ಪನ್ನಗಳೇ. ಮನುಷ್ಯನೂ ಪ್ರಕೃತಿಯ ಒಂದು ಭಾಗವೇ. ಅವನ ಬುದ್ಧಿ ಅವನ ಅಂಶವಾದ್ದರಿಂದ ಅದೂ ಪ್ರಕೃತಿಯ ಅಧೀನ ಮಾತ್ರವಲ್ಲ, ಅದರ ಪರಿಣಾಮಕ್ಕೆ ಪಕ್ಕಾಗುವಂಥದ್ದು. ಹೀಗಾಗಿ ಪ್ರಕೃತಿ ಅಥವಾ ನಿಸರ್ಗ ಮನುಷ್ಯನ ಮನಸ್ಸು, ಚಿಂತನೆಗಳ ಮೇಲೆ ಬಲವಾದ ಪರಿಣಾಮವನ್ನುಂಟು ಮಾಡುತ್ತದೆ. ಪ್ರಕೃತಿ ಮನುಷ್ಯನನ್ನು ಆಕರ್ಷಿಸುವುದು ತನ್ನ ವಿರಾಟ್, ವೈವಿಧ್ಯಮಯವಾದ ಸೌಂದರ್ಯದಿಂದ. ನಿಸರ್ಗದ ವರ್ಣಮಯ ನರ್ತನ ಮೊದಲು ಅವನ ಚಿಂತನವನ್ನು ಸೆಳೆಯುತ್ತದೆ. ಆಕಾಶದ ಬಾಗು, ಬೆಳಗಿನ ಹಾಗೂ ಸೂರ್ಯಾಸ್ತದ ನೇರಕಿರಣಗಳ ಸುಂದರತೆ, ಹುಣ್ಣಿಮೆಯ ಚಂದ್ರನ ತಂಪು, ಅಮಾವಾಸ್ಯೆಯ ದಿನ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಂಡಿರುವ ತಾರೆಗಳ ಕಣ್ಣು ಮಿಟುಕುವಿಕೆ ಇವೆಲ್ಲ ಪ್ರಕೃತಿಯ ಅಂಗಾಂಗ ಭಾವಗಳು. ಅವುಗಳಿಂದ ಆಕರ್ಷಿತನಾಗದ ಮನುಷ್ಯರಿರುವುದು ಸಾಧ್ಯವೇ? ಕುವೆಂಪುರವರು ಹೇಳುವಂತೆ, ‘ಪ್ರಕೃತಿ ಹೊರಹೊರಗೆ ಮೃಣ್ಮಯಿಯಾಗಿ ತೋರುವವಳು, ವೈಜ್ಞಾನಿಕವಾದ ನೋಟಕ್ಕೆ ನಿಯಮಮಯಿಯಾಗಿ ತೋರುವವಳು, ವೇದಾಂತಿಯ ದೃಷ್ಟಿಗೆ ಚಿನ್ಮಯೀ ಶಕ್ತಿಯಾಗಿ ತೋರುವವಳು, ಕವಿಪ್ರಜ್ಞೆಗೆ ಆ ಸತ್ಯ ಮುಖಗಳ ಯಾವುದನ್ನೂ ಅಲ್ಲಗಳೆಯದ ಮತ್ತು ಆ ಎಲ್ಲ ಸತ್ಯಮುಖಗಳನ್ನು ಒಳಗೊಳ್ಳುವ ಬ್ರಹ್ಮಮಯಿಯಾಗಿ, ಆನಂದಮಯಿಯಾಗಿ ಗೋಚರಿಸುತ್ತಾಳೆ’. ಒಂದು ರೀತಿಯಲ್ಲಿ ನೋಡಿದರೆ ಮನುಷ್ಯನ ಸೌಂದರ್ಯಪ್ರಜ್ಞೆಗೆ ನಿಸರ್ಗವೇ ಮೊದಲ ಗುರು. ವಸಂತಮಾಸದ ಸೌಂದರ್ಯ ಹೇಗೆ ಸಂಗೀತ ಕಚೇರಿಯನ್ನು ಸೃಷ್ಟಿಸುತ್ತದೆಂಬುದನ್ನು ಕುಮಾರವ್ಯಾಸ ಅದ್ಭುತವಾಗಿ ಚಿತ್ರಿಸುತ್ತಾನೆ. ಮನ್ಮಥ ಚಕ್ರವರ್ತಿಗೆ ದುಂಬಿಗಳೇ ಗಾಯಕರು, ಮೋಹಕ ಧ್ವನಿಯ ಕೋಗಿಲೆಯೇ ಹಾಡು ಹೇಳುವ ಪಾಠಕ, ಬಂಧುರದ ಗಿಳಿಗಳೇ ಪಂಡಿತರು, ಚಿಗುರಿದ ಮಾಮರ ಮನ್ಮಥನ ಆನೆ, ತಾವರೆಗಳೇ ಶ್ವೇತಚ್ಛತ್ರ, ಪುಷ್ಟ ಮಂಜರಿಗಳೇ ಅವನ ಬೀಸಣಿಗೆ. ಪ್ರಕೃತಿ ಮನುಷ್ಯನಿಗೆ ಸೌಂದರ್ಯದ ಗುರು ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.